ಉಡುಪಿ: ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಅನುಷ್ಠಾನದಿಂದ ರಾಜ್ಯಾದ್ಯಂತ ಪಾಸಿಟಿವ್ ಪ್ರಕರಣಗಳ ಪ್ರಮಾಣದ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿರುವುದು ಕಂಡುಬಂದಿದ್ದರಿಂದ ಸರ್ಕಾರದ ಆದೇಶದಲ್ಲಿ ಕೆಲವೊಂದು ಮಾರ್ಪಾಡು ಮಾಡಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿರುತ್ತದೆ.
ಅದರಂತೆ ಉಡುಪಿ ಜಿಲ್ಲೆಯಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಜನವರಿ 31 ರಿಂದ ಜಾರಿಗೆ ಬರುವಂತೆ ಪೆಬ್ರವರಿ 15 ರ ವರೆಗೆ ಈ ಕೆಳಗಿನಂತೆ ಮಾರ್ಗಸೂಚಿ/ನಿಬಂಧನೆಗಳನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿದ್ದಾರೆ.
ಈಗಾಗಲೇ ಜಾರಿಯಲ್ಲಿರುವ ರಾತ್ರಿ ಕರ್ಫ್ಯೂ ಯನ್ನು ದಿನಾಂಕ:31.01.2022 ರಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.
ಪಬ್ ಗಳು/ ಕ್ಲಬ್ ಗಳು/ಹೋಟೆಲ್ ಗಳು/ರೆಸ್ಟೋರೆಂಟ್ ಗಳು/ ಬಾರ್ ಗಳು/ಹೋಟೆಲ್ ಗಳಲ್ಲಿನ ತಿನಿಸು ಕೇಂದ್ರಗಳು ಇತ್ಯಾದಿಗಳಲ್ಲಿ ಒಟ್ಟು ಆಸನ ಸಾಮರ್ಥ್ಯದ ಶೇ. 100% ಸಾಮರ್ಥ್ಯದೊಂದಿಗೆ ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಿಕೊಂಡು ಕಾರ್ಯ ನಿರ್ವಹಿಸತಕ್ಕದ್ದು. ಸದರಿ ಘಟಕಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು 2 ಡೋಸ್ ಗಳ ಕೋವಿಡ್ ವ್ಯಾಕ್ಸಿನೇಷನ್ ಪಡೆದಿರತಕ್ಕದ್ದು ,ಈ ಸ್ಥಳಗಳಲ್ಲಿ ವ್ಯಾಕ್ಸಿನೇಷನ್ ಪಡೆಯದೇ ಇರುವ ವ್ಯಕ್ತಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಸಿನಿಮಾ ಹಾಲ್ ಗಳು/ಮಲ್ಟಿಫ್ಲೆಕ್ಸ್ ಗಳು/ಥಿಯೇಟರ್ ಗಳು/ ರಂಗಮಂದಿರಗಳು /ಸಭಾಂಗಣಗಳು ಮತ್ತು ಇಂತಹ ಇನ್ನಿತರೆ ಸ್ಥಳಗಳಲ್ಲಿ ಒಟ್ಟು ಆಸನ ಸಾಮರ್ಥ್ಯದ ಶೇ. 50 ಸಾಮರ್ಥ್ಯದೊಂದಿಗೆ ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಿಕೊಂಡು ಕಾರ್ಯ ನಿರ್ವಹಿಸತಕ್ಕದ್ದು. ಸದರಿ ಘಟಕಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು 2 ಡೋಸ್ ಗಳ ಕೋವಿಡ್ ವ್ಯಾಕ್ಸಿನೇಷನ್ ಪಡೆದಿರತಕ್ಕದ್ದು. ಈ ಸ್ಥಳಗಳಲ್ಲಿ ವ್ಯಾಕ್ಸಿನೇಷನ್ ಪಡೆಯದೇ ಇರುವ ವ್ಯಕ್ತಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಮದುವೆ ಸಮಾರಂಭಗಳಲ್ಲಿ ಕೋವಿಡ್-19 ಮತ್ತು ರಾಜ್ಯ ಸರ್ಕಾರವು ಹೊರಡಿಸಿರುವ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಿಕೊಂಡು ಹೊರಾಂಗಣ ಪ್ರದೇಶಗಳಲ್ಲಿ 300 ಜನರಿಗೆ ಹಾಗೂ ಒಳಾಂಗಣ ಪ್ರದೇಶಗಳಲ್ಲಿ 200 ಜನರು ಭಾಗವಹಿಸಲು ಸೀಮಿತಗೊಳಿಸಿ ಅನುಮತಿಸಲಾಗಿದೆ.
ಧಾರ್ಮಿಕ ಸ್ಧಳಗಳಲ್ಲಿ ದರ್ಶನಕ್ಕೆ ಮತ್ತು ಸೇವೆಗೆ ಮಾತ್ರ ತೆರೆಯಲು ಅವಕಾಶ . ಏಕ ಕಾಲದಲ್ಲಿ 2 ಡೋಸ್ ಲಸಿಕೆಯನ್ನು ಪಡೆದಿರುವ 50 ಜನರಿಗೆ ಮಾತ್ರ ಪ್ರವೇಶ ಕಲ್ಪಿಸುವುದು. ಸಾಮಾಜಿಕ, ಧಾರ್ಮಿಕ, ರಾಜಕೀಯ ಪ್ರತಿಭಟನೆಗಳು, ಎಲ್ಲಾ ರ್ಯಾಲಿಗಳು, ಧರಣಿಗಳು, ಸಭೆಗಳು, ಎಲ್ಲಾ ತರಹದ ಮೆರವಣಿಗೆ ಹಾಗೂ ಇತ್ಯಾದಿಗಳನ್ನು ನಿರ್ಬಂಧಿಸಲಾಗಿದೆ. ಸ್ವಿಮ್ಮಿಂಗ್ ಪೂಲ್ ಮತ್ತು ಜಿಮ್ ಗಳು ಶೇ 50 ರ ಸಾಮರ್ಥ್ಯ ದೊಂದಿಗೆ ಕಾರ್ಯಾಚರಿಸುವುದು ಹಾಗೂ 2 ಡೋಸ್ ಲಸಿಕೆಯನ್ನು ಪಡೆದಿರುವ ಜನರಿಗೆ ಮಾತ್ರ ಪ್ರವೇಶ ಕಲ್ಪಿಸುವುದು. ಕ್ರೀಡಾ ಸಂಕೀರ್ಣಗಳು ಮತ್ತು ಸ್ಟೇಡಿಯಂಗಳ ಶೇ 50 % ಸಾಮರ್ಥ್ಯಕ್ಕೆ ಒಳಪಟ್ಟು ಕಾರ್ಯಾಚರಿಸುವುದು.
ಕೋವಿಡ್-19 ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಹೊರಡಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು. ಅಲ್ಲದೇ, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ, ಜಿಲ್ಲಾಡಳಿತ ಹಾಗೂ ಇತರೆ ಇಲಾಖೆಗಳಿಂದ ಹೊರಡಿಸಲಾದ ಸೂಚನೆಗಳು/ ಮಾರ್ಗಸೂಚಿಗಳು/ ಪ್ರಮಾಣಿತ ಕಾರ್ಯ ವಿಧಾನ( SOP) ಗಳನ್ನು ಸಹ ಕಡ್ಡಾಯವಾಗಿ ಪಾಲಿಸತಕ್ಕದ್ದು.
ಮೇಲಿನ ಆದೇಶಗಳನ್ನು ಪಾಲಿಸದೇ ಇದ್ದವರ ಮೇಲೆ ಪೋಲಿಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು, Disaster Management Act 2005 , Karnataka Epidemic Diseases act 2020 ಮತ್ತು IPC ಸೆಕ್ಷನ್ 188 ಪ್ರಕಾರ ನಿಯಮಾನುಸಾರ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿದ್ದಾರೆ.
Comments are closed.