International

ಯು.ಎ.ಇ.ಯಲ್ಲಿರೋ ಕನ್ನಡಿಗರನ್ನು ತಾಯ್ನಾಡಿಗೆ ಕರೆಸಿಕೊಳ್ಳಲು ಸಿಎಂ ಬಿ.ಎಸ್.ವೈಗೆ ಪತ್ರ ಬರೆದ ಕೆ.ಎನ್.ಆರ್.ಐ ಪೋರಂ

Pinterest LinkedIn Tumblr

ಉಡುಪಿ/ಬೆಂಗಳೂರು: ಕೋವಿಡ್19 ಕೊರೋನಾ ವೈರಸ್ ಭೀತಿ ಹೆಚ್ಚುತ್ತಿದೆ. ವಿಶ್ವವೇ ಈ ಮಹಾಮಾರಿ ಹೊಡೆತಕ್ಕೆ ನಲುಗಿ ಹೋಗಿದೆ. ಅದೆಷ್ಟೋ ಕಂಪೆನಿಗಳು ಮುಚ್ಚಿದ್ದು ಉದ್ಯೋಗಿಗಳು ಕೆಲಸವಿಲ್ಲದೆ ಕಂಗೆಟ್ಟಿದ್ದಾರೆ. ಕೊಲ್ಲಿ ರಾಷ್ಟ್ರದಲ್ಲೂ ಕೂಡ ಕೋವಿಡ್-19 ವೈರಸ್ ಕಬಂಧಬಾಹು ವ್ಯಾಪಿಸಿದ್ದು ಇದರಿಂದ ಅಲ್ಲಿನ ಮಂದಿ ಬಹಳಷ್ಟು ಸಮಸ್ಯೆಗೀಡಾಗಿದ್ದಾರೆ. ಯು.ಎ.ಇ. ನಲ್ಲಿ ಸುಮಾರು ಒಂದು ಲಕ್ಷದಷ್ಟಿರುವ ಅನಿವಾಸಿ ಕನ್ನಡಿಗರನ್ನು ಮರಳಿ ಕರುನಾಡಿಗೆ ಕರೆತರಬೇಕೆಂದು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ- ಯು.ಎ.ಇ (ಕೆ. ಎನ್.ಆರ್.ಐ ಫೋರಮ್) ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ವಿಮಾನ ವ್ಯವಸ್ಥೆ ಕಲ್ಪಿಸಲು ಮನವಿ….
ಯು.ಎ.ಇ.ನಲ್ಲಿರುವ ಲಕ್ಷಕ್ಕೂ ಅಧಿಕ ಕನ್ನಡಿಗರು ಕೊರೋನಾ ಭೀತಿಯಲ್ಲಿ ದಿನಕಳೆಯುತ್ತಿದ್ದಾರೆ. ಆರೋಗ್ಯದ ಸಮಸ್ಯೆ ಒಂದೆಡೆಯಾದರೆ ಮತ್ತೊಂದೆಡೆ ಉದ್ಯೋಗ ಕಳೆದುಕೊಂಡು ಜೀವನ ಸಾಗಿಸಲು ಪರದಾಡಬೇಕಿದೆ. ಇದೇ ಸ್ಥಿತಿ ಮುಂದುವರೆದರೆ ವೈದ್ಯಕೀಯ ಸಹಕಾರ ಕೂಡ ಸಿಗದೆ ಇನ್ನಷ್ಟು ಸಮಸ್ಯೆ ಉಲ್ಬಣಿಸಬಹುದು. ಆದ್ದರಿಂದ ತಾಯ್ನಾಡಿಗೆ ಹಿಂದಿರುಗಲು ಶೀಘ್ರವೇ ವಿಮಾನ ಯಾನ ವ್ಯವಸ್ಥೆ ಒದಗಿಸಿ ಅನಿವಾಸಿಗರ ಬೇಡಿಕೆಯನ್ನು ಈಡೇರಿಸಲು ಪತ್ರದಲ್ಲಿ ಕೋರಲಾಗಿದೆ.

ತಾಯ್ನಾಡಿಗೆ ಬಂದ ಮೇಲೆ ಕ್ವಾರೆಂಟೈನ್ ಆಗ್ತೇವೆ….
ಸರಕಾರ ಕನ್ನಡಿಗರನ್ನು ಮೊದಲು ತಾಯ್ನಾಡಿಗೆ ಕರೆಸಿಕೊಳ್ಳುವ ವ್ಯವಸ್ಥೆ ಮಾಡಲಿ. ಯು.ಎ.ಇ.ಯಿಂದ ಹಿಂದಿರುಗಿ ಬರುವ ಎಲ್ಲರೂ 14 ದಿನಗಳ ಕಾಲ ಕ್ವಾರೆಂಟೈನ್ ವ್ಯವಸ್ಥೆ ಮಾಡಿಕೊಳ್ಳಲು ಸರಕಾರದ ಜೊತೆಗೆ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಮತ್ತು ಅನಿವಾಸಿ ಉದ್ಯಮಿಗಳು, ದಾನಿಗಳು ಹಾಗೂ ಸಮಾಜ ಸೇವಕರು ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ಕೆ.ಎನ್.ಆರ್.ಐ ಫೋರಂ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಪ್ರಧಾ‌ನ ಕಾರ್ಯದರ್ಶಿ ಪ್ರಭಾಕರ್ ಅಂಬಲತರೆ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ನೀಡಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.