International

ಹುತಾತ್ಮ ಯೋಧನ ತಂಗಿ ಮದುವೆ ಮಾಡಿಸಿ ಅಣ್ಣನ ಕರ್ತವ್ಯ ನಿಭಾಯಿಸಿದ ಸಿ.ಆರ್.ಪಿ.ಎಫ್ ಯೋಧರು

Pinterest LinkedIn Tumblr

ಲಕ್ನೋ: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾಗಿದ್ದ ಯೋಧನ ತಂಗಿಯ ಮದುವೆಯನ್ನು ಖುದ್ದು ಸಿ.ಆರ್.ಪಿ.ಎಫ್ (CRPF) ಪಡೆ ಮುಂದೆ ನಿಂತು ನಡೆಸಿಕೊಟ್ಟಿದ್ದಾರೆ.

ಪುಲ್ವಾಮದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಹುತಾತ್ಮರಾದ ಯೋಧ ಶೈಲೇಂದ್ರ ಪ್ರತಾಪ್ ಸಿಂಗ್ ಅವರ ಸಹೋದರಿ ಜ್ಯೋತಿಯವರ ಮದುವೆಯನ್ನು ಯೋಧರು ಮುಂದೆ ನಿಂತು ನೆರವೇರಿಸಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ 110ನೇ ಬೆಟಾಲಿಯನ್‌ ಯೋಧ ಶೈಲೇಂದ್ರ ಪ್ರತಾಪ್‌ ಸಿಂಗ್‌ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಹುತಾತ್ಮರಾಗಿದ್ದರು.

ಜ್ಯೋತಿಯವರ ಮದುವೆ ಉತ್ತರ ಪ್ರದೇಶದಲ್ಲಿ ನಡೆದಿದ್ದು ಮದುವೆ ದಿನ ಪೂರ್ವತಯಾರಿ ಸಹಿತ ಸಂಪೂರ್ಣ ಮದುವೆ ಕಾರ್ಯಕ್ರಮದಲ್ಲಿ ಯೋಧರು ಭಾಗವಹಿಸಿ ಅಣ್ಣನ ಸ್ಥಾನದಲ್ಲಿ ನಿಂತು‌ಎಲ್ಲಾ ಜವಾಬ್ದಾರಿಯನ್ನು ವಹಿಸಿಕೊಂಡು ವಿವಾಹವನ್ನು ಅದ್ದೂರಿಯಾಗಿ ನೆರವೇರಿಸಿದರು. ಮದುವೆಗೆ ಸಾಕ್ಷಿಯಾಗಿದ್ದ ಎಲ್ಲ ಅತಿಥಿಗಳೂ ಈ ಕ್ಷಣಗಳನ್ನು ಕಣ್ತುಂಬಿಕೊಂಡು ಭಾವುಕರಾದರು.

ಮದುವೆಯ ಜವಾಬ್ದಾರಿಯನ್ನು ಹೊತ್ತುಕೊಂಡು ಆಕೆಯನ್ನು ಮಂಟಪಕ್ಕೆ ಕರೆತರುವ ಮೂಲಕ ಸಹೋದರನನ್ನು ಕಳೆದುಕೊಂಡಿರುವ ಭಾವನೆ ಆಕೆಗೆ ಬಾರದಂತೆ ನೋಡಿಕೊಂಡರು.

ಯೋಧರ ಈ ಕಾರ್ಯವನ್ನು ಕಂಡು ಮಡಿದ ಯೋಧನ ಪಾಲಕರು ಭಾವುಕರಾಗಿ “ನನ್ನ ಮಗ ಈ ಜಗತ್ತಿನಲ್ಲಿಲ್ಲ‌ ಎನ್ನುವ  ನೋವಿದೆ. ಆದರೆ ಆತ ಈ ಎಲ್ಲಾ ಯೋಧರ ರೂಪದಲ್ಲಿ ನಮಗೆ ದೊರೆತಿದ್ದಾನೆ, ನಾವು ಅನೇಕ ಮಕ್ಕಳನ್ನು ಹೊಂದಿದ್ದೇವೆ ಎಂಬ ಭಾವನೆ ಮೂಡಿದೆ” ಎಂದು ಹೇಳಿದರು.

“ಹುತಾತ್ಮ ಯೋಧ ಶೈಲೆಂದ್ರ ಪ್ರತಾಪ್ ಸಿಂಗ್ ಅವರ ಸಹೋದರಿಯ ವಿವಾಹ ಕಾರ್ಯಕ್ರಮದಲ್ಲಿ ಹಿರಿಯ ಸಹೋದರರಾಗಿ ಸಿ.ಆರ್.ಪಿ.ಎಫ್ ಯೋಧರು ಪಾಲ್ಗೊಂಡಿದ್ದರು”. ಎಂದು ಮದುವೆ ಫೋಟೋಗಳನ್ನು ಸಿ. ಆರ್.ಪಿ. ಎಫ್. ತನ್ನ ಅಧಿಕೃತ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದೆ.

Comments are closed.