ಉಡುಪಿ: ಉಡುಪಿಯ ಶ್ರೀ ಕೃಷ್ಣಮಠಕ್ಕೆ ತೆಲುಗು ಚಿತ್ರರಂಗದ ಪ್ರಸಿದ್ದ ನಟ ಜ್ಯೂನಿಯರ್ ಎನ್‌ಟಿಆರ್ ಅವರು ಶ್ರಾವಣಮಾಸದ ಶನಿವಾರ ಭೇಟಿ ನೀಡಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಪಡೆದರು.
ತಮ್ಮ ತಾಯಿ ಶಾಲಿನಿ ನಂದಾಮುರಿ ಅವರೊಂದಿಗೆ ಉಡುಪಿಗೆ ಆಗಮಿಸಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಹಲವು ವರ್ಷಗಳಿಂದ ನನ್ನ ಅಮ್ಮನಿಗೆ ಮಗನನ್ನೊಮ್ಮೆ ಕೃಷ್ಣಮಠಕ್ಕೆ ಕರೆದುಕೊಂಡು ಬರಬೇಕು ಎಂಬ ಆಸೆ ಇದ್ದು ಅದು ಇವತ್ತು ಈಡೇರಿದೆ.ಶ್ರಾವಣ ಮಾಸದ ವಿಶೇಷ ದಿನ ಹರಕೆ ಈಡೇರಿದ್ದು ಸಂತೋಷವಾಗಿದೆ. ಇದೆಲ್ಲವೂ ಶ್ರೀಕೃಷ್ಣನ ಸ್ಕ್ರೀನ್ ಪ್ಲೇ. ರಿಷಬ್ ಶೆಟ್ಟಿ ತುಂಬಾ ಇಷ್ಟಪಟ್ಟ ದೇವರು ಕೊಟ್ಟ ಗೆಳೆಯ. ಅವರೊಂದಿಗೆ ಮಠಕ್ಕೆ ಬಂದಿರುವುದು ಖುಷಿಯಾಗಿದೆ.
ನಿರ್ದೇಶಕ ಪ್ರಶಾಂತ್ ನೀಲ್ ಕೂಡ ನಮ್ಮ ಜೊತೆಗಿದ್ದಾರೆ. ನನ್ನ ಅಮ್ಮನ ಪೂರ್ವಿಕರು ಮೂಲತಃ ಕುಂದಾಪುರದವರು. ಕೃಷ್ಣಮಠಕ್ಕೆ ಭೇಟಿಕೊಟ್ಟು ಮನಃಶಾಂತಿ ಸಿಕ್ಕಿದೆ ಎಂದರು. ರಿಷಬ್ ಅವರ ಮುಂದಿನ ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತಿದೆ ಎಂದ ಅವರು, ರಿಷಬ್ ಗೆ ನ್ಯಾಷನಲ್ ಅವಾರ್ಡ್ ಬಂದಿರೋದು ನನಗೆ ತುಂಬಾ ಖುಷಿಯಾಗಿದೆ.ಯೋಗ್ಯ ವ್ಯಕ್ತಿಗೆ ಯೋಗ್ಯ ಅವಾರ್ಡ್ ಬಂದಿದೆ ಎಂದರು.
ಬಳಿಕ ಮಾತನಾಡಿದ ರಿಷಭ್ ಶೆಟ್ಟಿ, ಜೂನಿಯರ್ ಎನ್‌ಟಿಆರ್ ಜೊತೆ ಅಣ್ಣ ತಮ್ಮನ ಸಂಬಂಧ ಫೀಲ್ ಆಗುತ್ತದೆ. ಅವರು ಆಂಧ್ರಪ್ರದೇಶದವರು ಎಂಬ ಭಾವನೆ ಬರಲ್ಲ. ಬಹಳ ಸಮಯದ ನಂತರ ಭೇಟಿಯಾಗುವ ಅವಕಾಶ ಸಿಕ್ಕಿತು.ಇತ್ತೀಚೆಗೆ ಉಡುಪಿ ಮಠಕ್ಕೆ ಬರಬೇಕು ಎಂದು ಹೇಳಿಕೊಂಡಿದ್ದರು. ನಾನು ಈ ಕಡೆಗೆ ಇದ್ದೆ, ಹಾಗಾಗಿ ಜೊತೆಗೆ ಮಠಕ್ಕೆ ಬಂದೆವು. ಉಡುಪಿ ಅಷ್ಟಮಿಗೆ ಬರಬೇಕಾಗಿತ್ತು, ಸಾಧ್ಯವಾಗಿರಲಿಲ್ಲ. ಎನ್ ಟಿ ಆರ್ ಕುಟುಂಬದ ಜೊತೆ ಬಂದಿರೋದು ಖುಷಿಯಾಗಿದೆ ಎಂದು ಹೇಳಿದರು.
ನನ್ನನ್ನು ಹುಟ್ಟೂರು ಕುಂದಾಪುರಕ್ಕೆ ಕರೆತಂದು ಉಡುಪಿ ಶ್ರೀಕೃಷ್ಣಮಠದಲ್ಲಿ ದರ್ಶನ ಮಾಡಿಸುವ ನನ್ನ ತಾಯಿಯ ಕನಸು ಕೊನೆಗೂ ಈಡೇರಿದೆ. ಸೆಪ್ಟೆಂಬರ್ 2 ರಂದು ತಾಯಿ ಹುಟ್ಟುಹಬ್ಬವಿದ್ದು ಅದಕ್ಕೂ ಮೊದಲು ಅವರ ಆಸೆ ಪೂರೈಸಿದ್ದು ಅವರಿಗೆ ನಾನು ಕೊಟ್ಟ ಉಡುಗೊರೆಯಾಗಿದೆ. ವಿಜಯ್ ಕಿರಗಂದೂರು ಸರ್ ಮತ್ತು ನನ್ನ ಆತ್ಮೀಯ ಸ್ನೇಹಿತ ಪ್ರಶಾಂತ್ ನೀಲ್ ಅವರು ನನ್ನೊಂದಿಗೆ ಸೇರಿ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಹಾಗೂ ನನ್ನ ಆತ್ಮೀಯ ಸ್ನೇಹಿತ ರಿಷಬ್ ಶೆಟ್ಟಿ ಅವರಿಗೆ ವಿಶೇಷ ಧನ್ಯವಾದಗಳು, ಅವರೆಲ್ಲರ ಉಪಸ್ಥಿತಿ ಖುಷಿ ನೀಡಿದೆ.
-ಜೂನಿಯರ್ ಎನ್‌ಟಿಆರ್ (ನಟ)
Comments are closed.