Karavali

ಕರಾವಳಿ ಕರ್ನಾಟಕ-ಮುಂಬೈ ನಡುವಿನ ಸಂಪರ್ಕ ಸೇತು ‘ಮತ್ಸ್ಯಗಂಧ ಎಕ್ಸ್‌ಪ್ರೆಸ್’ ರೈಲಿಗೆ ಹೈಟೆಕ್ ಸ್ಪರ್ಷ! | 27 ವರ್ಷಗಳ ಬಳಿಕ ಕೊಂಕಣ ರೈಲ್ವೆ ಮಾರ್ಗದ ಮತ್ಸ್ಯಗಂಧ ಎಕ್ಸ್‌ಪ್ರೆಸ್ ಬೋಗಿಗಳು ಮೇಲ್ದರ್ಜೆಗೆ

Pinterest LinkedIn Tumblr

(ವಿಶೇಷ ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಸುಮಾರು ಎರಡೂವರೆ ದಶಕಗಳಿಂದ ಕರಾವಳಿ ಕರ್ನಾಟಕ ಹಾಗೂ ಮುಂಬಯಿ ನಡುವಿನ ಸಂಪರ್ಕ ಕೊಂಡಿಯಾಗಿರುವ ‘ಮತ್ಸ್ಯಗಂಧ ಎಕ್ಸ್‌ಪ್ರೆಸ್’ ರೈಲಿಗೆ ಇದೀಗ ಅತ್ಯಾಧುನಿಕ ಜರ್ಮನ್ ತಂತ್ರಜ್ಞಾನದ ಎಲ್‌ಎಚ್‌ಬಿ ಕೋಚ್ ಅಳವಡಿಕೆಯಾಗಿದೆ. ಭಾಗಶಃ ಶಿಥಿಲಾವಸ್ಥೆಗೆ ತಲುಪಿದ್ದ ಈ ರೈಲು ಹೈಟೆಕ್ ಸ್ಪರ್ಷ ಪಡೆದು ಫೆ. 17ರಂದು ಮೊದಲ ಪ್ರಯಾಣ ಬೆಳೆಸಲಿದ್ದು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಅತಿಹೆಚ್ಚು ಪ್ರಯಾಣಿಕರನ್ನು ಒಯ್ಯುವ ರೈಲು:ಕರಾವಳಿ ಕರ್ನಾಟಕ ಹಾಗೂ ಮುಂಬೈ ನಡುವಿನ ‘ಮತ್ಸ್ಯಗಂಧ ಎಕ್ಸ್‌ಪ್ರೆಸ್’ ರೈಲು ಈ ಭಾಗದ ರೈಲ್ವೆ ಪ್ರಯಾಣಿಕರಲ್ಲಿ ಭಾವನಾತ್ಮಕ ಸಂಬಂಧವನ್ನು ಹೊಂದಿವೆ. ಅತಿಹೆಚ್ಚು ಪ್ರಯಾಣಿಕರನ್ನು ಒಯ್ಯುವ ಈ ರೈಲು ಭಾಗಶಃ ಶಿಥಿಲಾವಸ್ಥೆಗೆ ತಲುಪಿದ್ದು ಪ್ರಯಾಣಿಕರು ಮನವಿ ಮಾಡಿದ್ದಲ್ಲದೆ, ಹಲವರು ಅವ್ಯವಸ್ಥೆ ವೀಡಿಯೋ ಮಾಡಿ ಸಮಸ್ಯೆ ಸರಿಪಡಿಸುವ ಸಲಹೆ ನೀಡಿದ್ದರು. ಇದನ್ನು ಮನಗಂಡು ಉಡುಪಿ-ಚಿಕ್ಕಮಗಳೂರು ಸಂಸದ‌ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ರೈಲ್ವೆ ಇಲಾಖೆಯ ಸಚಿವರಾದ ಅಶ್ವಿನಿ ವೈಷ್ಣವ್, ವಿ.ಸೋಮಣ್ಣರ ಗಮನಕ್ಕೆ ತಂದು ಈ ಬಗ್ಗೆ ಸಂಪೂರ್ಣ ವರದಿಯನ್ನು ನೀಡಿದ್ದರು. ಈ ಮನವಿಯನ್ನು ಪುರಸ್ಕರಿಸಿ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲಿನ ಸಂಪೂರ್ಣ ಕೋಚ್‌ಗಳನ್ನು ಬದಲಾಯಿಸಿ ಅತ್ಯಾಧುನಿಕ ಜರ್ಮನ್ ತಂತ್ರಜ್ಞಾನದ ಎಲ್‌ಹೆಚ್‌ಬಿ ಕೋಚ್ ಅಳವಡಿಸಲು ಅಧಿಕಾರಿಗಳಿಗೆ ಆದೇಶ ನೀಡಿದ್ದು ಇದೀಗ ನೂತನ ಕೋಚ್‌ಗಳು ಸಿದ್ಧವಾಗಿದೆ.

‘ಮತ್ಸ್ಯಗಂಧ’ ಸುಧೀರ್ಘ 27 ವರ್ಷದ ಸಂಚಾರ: ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಅಂದಿನ ಕೇಂದ್ರ ಸಚಿವರಾಗಿದ್ದ ದಿ. ಜಾರ್ಜ್ ಫರ್ನಾಂಡೀಸ್‌ರವರ ಪರಿಶ್ರಮದಿಂದ ಅಂದಿನ ಪ್ರಧಾನಮಂತ್ರಿಗಳಾಗಿದ್ದ ದಿ.ಅಟಲ್ ಬಿಹಾರಿ ವಾಜಪೇಯಿಯವರ ಕಾಳಜಿಯಲ್ಲಿ ಕೊಂಕಣ ರೈಲ್ವೆ ನಿಗಮವನ್ನು ರಾಷ್ಟ್ರಕ್ಕೆ ಅರ್ಪಿಸಿದ 1998 ಮೇ.1 ರಂದು ಈ ರೈಲು ಉದ್ಘಾಟನೆಗೊಂಡಿತ್ತು. ಅಲ್ಲಿಂದ ಇಂದಿನವರೆಗೂ ಸುದೀರ್ಘ ಕಾಲ ಮಹಾರಾಷ್ಟ್ರ ಹಾಗೂ ಕರ್ನಾಟಕದ ಕರಾವಳಿ ಜನರನ್ನು ಭಾವನಾತ್ಮಕವಾಗಿ ಈ ರೈಲು ಬೆಸೆದಿದೆ.

ಅಲ್ಲದೆ ಮುಂಬೈ ಎಲ್‌ಟಿಟಿ ಹಾಗೂ ಮಂಗಳೂರು ಸೆಂಟ್ರಲ್ ನಡುವೆ ಓಡಿದ ಮೊದಲ ರೈಲು ಎಂಬ ಹೆಗ್ಗಳಿಕೆ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ನದ್ದು. ಹಳೆಯದಾದ ಐಆರ್‌ಎಸ್‌ ಕೋಚ್‌‌ಗಳೊಂದಿಗೆ ಈ ರೈಲು ಕಳೆದೆರಡು ವರ್ಷದ ಹಿಂದೆ ಸಂಚಾರದ ಬೆಳ್ಳಿಹಬ್ಬವನ್ನು ಪೂರ್ಣಗೊಳಿಸಿತ್ತು. ಮುಂಬೈಯಲ್ಲಿರುವ ಕರಾವಳಿಗರು ಹಾಗೂ ಕರಾವಳಿಯ ವಿವಿಧ ಪಟ್ಟಣಗಳಿಂದ ವಿವಿಧ ಕಾರಣಗಳಿಗಾಗಿ ಮುಂಬೈಗೆ ತೆರಳುವವರಿಗೆ ಇದು ಪ್ರಮುಖ ಸಂಪರ್ಕ ಸೇತುವೆಯಾಗಿತ್ತು. ಇದರಿಂದ ಪ್ರತಿನಿತ್ಯ ಈ ರೈಲಿನಲ್ಲಿ ಪ್ರಯಾಣಿಕರ ದಟ್ಟಣೆ ಅಧಿಕವಿತ್ತು. ಈ ಹಿನ್ನೆಲೆ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲಿನ ಕೋಚ್‌ಗಳನ್ನು ಆಧುನೀಕರಿಸುವಂತೆ ದಶಕಗಳಿಂದಲೂ ಬೇಡಿಕೆ ಕೇಳಿ ಬಂದಿತ್ತು.

ಆಧುನಿಕ ತಂತ್ರಜ್ಞಾನದ ಕೋಚ್- ಅಪಘಾತವಾದರೂ ಜನರು ಸುರಕ್ಷಿತ:

ಜರ್ಮನ್ ವಿನ್ಯಾಸದ ಎಲ್‌ಎಚ್‌ಬಿ ಕೋಚ್‌ಗಳು ಆರಾಮದ, ಸುಖಕರ ದೀರ್ಘ ಪ್ರಯಾಣಕ್ಕೆ ಹೇಳಿಮಾಡಿಸಿದೆ. ಅಧಿಕ ವೇಗ ಹಾಗೂ ಹೆಚ್ಚು ಸುರಕ್ಷಿತವೆನಿಸಿದೆ. ಆಧುನಿಕ ತಂತ್ರಜ್ಞಾನದ ಕೋಚ್‌ಗಳನ್ನು ಹೊಂದಿರುವ ಈ ರೈಲು ಅಕಸ್ಮಾತ್ ಅಪಘಾತ ಸಂಭವಿಸಿದರೂ ಕೋಚ್‌ಗಳು ಪಲ್ಟಿ ಆಗದೆ ಜಿಗ್‌ಜ್ಯಾಗ್ ರೀತಿಯಲ್ಲಿ ವರ್ಗೀಕರಿಸಿ ನಿಲ್ಲುವುದರಿಂದ ಒಳಗಿನ ಪ್ರಯಾಣಿಕರು ಸುರಕ್ಷಿತರಾಗಿರುತ್ತಾರೆ. ಹೊಸ ಕೋಚ್‌ನ ರೈಲಲ್ಲಿ ಶಬ್ದದ ಸಮಸ್ಯೆ ಕಡಿಮೆಯಾಗಲಿದ್ದು ರೈಲು ಓಡಾಟದ ಸಂದರ್ಭದಲ್ಲಿ ಹಿಂದಿಗಿಂತ ಶಬ್ದವನ್ನು ಕಡಿಮೆಗೊಳಿಸುತ್ತದೆ. ಶೌಚಾಲಯ ವ್ಯವಸ್ಥೆಯೂ ಸಂಪೂರ್ಣವಾಗಿ ಬದಲಾಯಿಸಿ ಆಧುನಿಕ ಶೈಲಿಯನ್ನು ಅಳವಡಿಸಲಾಗಿದೆ.

ಫೆ.17 ರಂದು ರೈಲು ಉಡುಪಿಗೆ ಆಗಮನ:

ಫೆ.17ರಂದು ಹೊಸ ಕೋಚ್ ಹೊಂದಿರುವ ಈ ರೈಲು ಪ್ರಥಮ ಪ್ರಯಾಣ ನಡೆಸಲಿದ್ದು ಉಡುಪಿಗೆ ಆಗಮಿಸಲಿದೆ.  ಪೆ. 17ರಂದು ಮಂಗಳೂರಿನಿಂದ ಹಾಗೂ ಫೆ.18ರಂದು ಲೋಕಮಾನ್ಯ ತಿಲಕ್ ನಿಲ್ದಾಣದಿಂದ ಈ ರೈಲು ಆಧುನಿಕ ಎಲ್‌ಎಚ್‌ಬಿ ಕೋಚ್‌ಗಳೊಂದಿಗೆ ಓಡಾಟ ನಡೆಸಲಿದೆ. ಇದುವರೆಗೆ 23 ಐಆರ್‌ಎಸ್ ಕೋಚ್ ಗಳೊಂದಿಗೆ ಸಂಚರಿಸುತಿದ್ದ ಮತ್ಸಗಂಧ ಎಕ್ಸ್‌ಪ್ರೆಸ್‌ ನಂತರ 22 ಎಲ್‌ಎಚ್‌ಬಿ ಕೋಚ್‌ಗಳೊಂದಿಗೆ ಓಡಾಟ ನಡೆಸಲಿದೆ ಎಂದು ತಿಳಿದುಬಂದಿದೆ.

ರೈಲ್ವೇ ಯೋಜನೆಗಳ ಕುರಿತು ಚರ್ಚೆ: ಸಂಸದ ಕೋಟ

ಫೆ.17 ರಂದು ಉಡುಪಿಯಲ್ಲಿ ರೈಲನ್ನು ಸ್ವಾಗತಿಸಿ ಮುಂದಿನ ರೈಲ್ವೇ ಯೋಜನೆಗಳ ಕುರಿತು  ಅಧಿಕಾರಿಗಳು ಹಾಗೂ ರೈಲು ಪ್ರಯಾಣಿಕರೊಂದಿಗೆ ಚರ್ಚೆ ನಡೆಸಲಾಗುತ್ತದೆ. ಆಧುನಿಕ ಭಾರತದ ದ್ಯೋತಕವಾಗಿ ಈ ರೈಲು ಹೊಸ ತಂತ್ರಜ್ಞಾನದ ಮೂಲಕ ಕಂಗೊಳಿಸಲಿದ್ದು ಪ್ರಯಾಣಿಕರಿಗೆ ವಿಶೇಷ ಸೇವೆ ನೀಡಲಿದೆ. ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲಿನ ಬೆನ್ನಲ್ಲೇ ಮಹಾರಾಷ್ಟ್ರಕ್ಕೆ ತೆರಳುವ ಮಂಗಳೂರು ಎಕ್ಸ್‌ಪ್ರೆಸ್‌ ರೈಲು ಮಾ.1 ರಿಂದ ನೂತನ ಎಲ್‌ಹೆಚ್‌ಬಿ ಕೋಚ್‌ಗಳನ್ನೊಳಗೊಂಡು ಪ್ರಯಾಣ ಬೆಳೆಸಲಿದೆ. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಸಚಿವ ವಿ.ಸೋಮಣ್ಣ ಬೆಂಬಲಿಸಿ ಸಹಕರಿಸಿದ್ದಾರೆ. ಹಾಗೆ ಕಾಲಕಾಲಕ್ಕೆ ರೈಲ್ವೆ ಅಭಿವೃದ್ಧಿ ಯೋಜನೆಗಳ ಕುರಿತಾಗಿ ರೈಲ್ವೆ ಬಳಕೆದಾರರ ಸಮಿತಿಯವರು ಅಗತ್ಯ ಸಲಹೆ ನೀಡುತ್ತಿದ್ದಾರೆ. 

-ಕೋಟ ಶ್ರೀನಿವಾಸ ಪೂಜಾರಿ (ಉಡುಪಿ-ಚಿಕ್ಕಮಗಳೂರು ಸಂಸದ)

Comments are closed.