Mumbai

ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ 23ನೇ ವಾರ್ಷಿಕ ಮಹಾಸಭೆ | ಸಮಿತಿಯು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ಸು: ಎಲ್.ವಿ ಅಮೀನ್

Pinterest LinkedIn Tumblr

ಮುಂಬಯಿ: ಕರ್ನಾಟಕ ಕರಾವಳಿ ಜಿಲ್ಲೆಗಳ ಅಭಿವೃದ್ದಿಗಾಗಿ ಕಳೆದ 23 ವರ್ಷಗಳಿಂದ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯು ಕೈಗೊಂಡ ಯೋಜನೆಗಳನ್ನು ಪ್ರತಿ ವರ್ಷ ಕಾರ್ಯರೂಪಕ್ಕೆ ತರುವಲ್ಲಿ ಯಶಸ್ಸಿಯಾಗಿದೆ. ನಾವು ಮುಂದಿನ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮೊದಲು ಈಗ ಕೈಗೊಂಡತಹ ಉಭಯ ಜಿಲ್ಲೆಗಳಲ್ಲಿ ಕೈಗಾರೀಕರಣ, ಪ್ರವಾಸೋಧ್ಯಮ, ಸಮುದ್ರ ತೀರದಲ್ಲಿ ತಡೆಗೋಡೆ ನಿರ್ಮಾಣ ಇತ್ಯಾದಿ ಯೋಜನೆಗಳನ್ನು ಬೇಗನೇ ಕಾರ್ಯರೂಪಕ್ಕೆ ತರುದರೊಂದಿಗೆ ಇತರ ಯೋಜನೆಗಳೊಂದಿಗೆ ಕ್ರೀಯಾಶೀಲರಾಗೋಣ ಎಂದು ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ ಎಲ್.ವಿ. ಅಮೀನ್ ನುಡಿದರು.

ಕರ್ನಾಟಕ ಕರಾವಳಿಯ ಉಭಯ ಜಿಲ್ಲೆಗಳ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಏಕೈಕ ಸರಕಾರೇತರ ಸಂಘಟನೆ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ 23ನೇ ವಾರ್ಷಿಕ ಮಹಾಸಭೆಯು ಸೆ. 18ರಂದು ಕುರ್ಲಾ ಪೂರ್ವ ಬಂಟರ ಸಂಘ ಮುಂಬಯಿಯ ಅನೆಕ್ಸ್ ಸಭಾಗೃ ಹದಲ್ಲಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿ ಯವರ ಉಪಸ್ಥಿತಿಯಲ್ಲಿ ಅಧ್ಯಕ್ಷರಾದ ಎಲ್. ವಿ. ಅಮೀನ್ ರ ಅಧ್ಯಕ್ಷತೆಯಲ್ಲಿ ನಡೆದಿದ್ದು ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಸದಸ್ಯರನ್ನು ಸ್ವಾಗತಿಸಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಇತ್ತೀಚೆಗೆ ಮಣಿಪಾಲದಲ್ಲಿ ನಡೆದ ಕಾರ್ಯಕ್ರಮವು ಸಮಿತಿಯ ಸದಸ್ಯರ ಶಿಸ್ತುಭದ್ದವಾದ ಪೂರ್ವ ಸಿದ್ದತೆಯೊಂದಿಗೆ ಯಶಸ್ವಿಯಾಗಿ ಜರಗಿದ್ದು ನಮ್ಮ ಜಿಲ್ಲೆಗಳ ಸಮಸ್ಯೆ ಬಗ್ಗೆ ಸರಕಾರದ ಗಮನ ಸೆಳೆಯುವಲ್ಲಿ ನಾವು ಯಶಸ್ಸಿಯಾಗಿದ್ದು ಇದಕ್ಕೆ ದುಡಿದ ಎಲ್ಲರನ್ನೂ ಅಭಿನಂದಿಸಬೇಕಾಗಿದೆ ಎಂದರು. ಇಂದಿಲ್ಲಿ ಮಾತನಾಡಿದ ಎಲ್ಲಾ ಗಣ್ಯರು ಜಿಲ್ಲೆಗಳ ಅಭಿವೃದ್ದಿ ಬಗ್ಗೆ ಹಾಗೂ ಸಮಿತಿಯ ಮುಂದಿನ ಕಾರ್ಯದ ಬಗ್ಗೆ ಉಪಯುಕ್ತವಾದ ಮಾಹಿತಿಯನ್ನು ನೀಡಿದ್ದು ನಾವೆಲ್ಲರೂ ಸೇರಿ ಜಿಲ್ಲೆಗಳ ಅಭಿವೃದ್ದಿಗಾಗಿ ಹಂತ ಹಂತವಾಗಿ ದುಡಿಯೋಣ ಎಂದರು.

ಗತಸಭೆಯ ವರದಿ ಹಾಗೂ ವಾರ್ಷಿಕ ವರದಿಯನ್ನು ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಸಭೆಯಲ್ಲಿ ಮಂಡಿಸಿದರು.

ಸಭೆಯಲ್ಲಿ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸ್ಥಾಪಿಸಲು ಮಂಜೂರು ಮಾಡಲಾಯಿತು. ಡಿ. ಆರ್. ರಾಜು ಅವರನ್ನು ಜಿಲ್ಲೆಗಳ ನೂತನ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ಸಭೆಯು ಆಯ್ಕೆಮಾಡಿದೆ.
ಉಡುಪಿ ಜಿಲ್ಲೆಯ ಉಳೆಪಾಡಿ ಮತ್ತು ಕೊಲ್ಲೂರು ಬಳ್ಕುಂಜೆಯಲ್ಲಿ 1097 ಎಕರೆ ಭೂ ಕೈಗಾರಿಕೀಕರಣದ ಯೋಜನೆ ಬಗ್ಗೆ ಸೂಕ್ತ ಚರ್ಚೆಯು ನಡೆಯಿತು.
ಎರಡೂ ಜಿಲ್ಲೆಗಳಲ್ಲಿ ಸಮುದ್ರ ಕೊರೆತಕ್ಕೆ ಶಾಶ್ವತ ಪರಿಹಾರ, ಜಿಲ್ಲೆ / ಪುರಸಭೆ / ಪಂಚಾಯತ್ ಮಟ್ಟದಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಸ್ಮಶಾನಗಳ (ವಿದ್ಯುತ್ ಅಥವಾ ಅನಿಲ ಆಧಾರಿತ) ನಿರ್ಮಾಣ ದ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಚರ್ಚಿಸುವ ಬಗ್ಗೆ ಮಣಿಪಾಲದಲ್ಲಿ ನಡೆದ ಸಮ್ಮೇಳನದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಸಭಿಕರ ಬಾಷಣದಲ್ಲಿ ಸಮಿತಿಯ ಮಾಜಿ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ, ಉಪಾಧ್ಯಕ್ಷರುಗಳಾದ ಪಿ ಧನಂಜಯ್ ಶೆಟ್ಟಿ, ನಿತ್ಯಾನಂದ ಕೋಟ್ಯಾನ್, ಸಿಎಸ್. ಗಣೇಶ್ ಶೆಟ್ಟಿ, ನ್ಯಾ. ಶಶಿಧರ ಕಾಪು, ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ, ಡಾ. ಅರ್. ಕೆ ಶೆಟ್ಟಿ, ಹಿರಿಯಡ್ಕ ಮೋಹನ್ ದಾಸ್, ದಯಾಸಾಗರ ಚೌಟ ಮಾತನಾಡುತ್ತ ಲೆಕ್ಕ ಪತ್ರಗಳ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನಿತ್ತರು ಮಾತ್ರವಲ್ಲದೆ ಮುಂಬಯಿ ಮಂಗಳೂರು ರೈಲು ಪ್ರಯಾಣಿಕರು ಹೆಚ್ಚಿನ ಸಮಯ ಟಿಕೇಟು ದೊರಕದೆ ತೊಂದರೆಗೀಡಾಗುತ್ತಿದ್ದು ಮುಂಬಯಿ – ಮಂಗಳೂರು – ಮುಂಬಯಿ ರೈಲಿನ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ. ಮುಂಬಯಿ ಮಂಗಳೂರು ವಿಮಾನ ಯಾನ ದರವನ್ನು ವಿಪರೀತವಾಗಿ ಹೆಚ್ಚಿಸಲಾಗಿದ್ದು ಪ್ರಯಾಣಿಕರಿಗೆ ಬಹಳ ತೊಂದರೆಯಾಗುತ್ತಿದೆ ಎಂದರಲ್ಲದೆ ಸಮಿತಿಯ ಮುಂದಿನ ಯೋಜನೆ ಬಗ್ಗೆ ಮಾಹಿತಿಯಿತ್ತರು.

ಸಭೆಯಲ್ಲಿ ಉಪಸ್ಥಿತರಿದ್ದ ತೀಯಾ ಸಮಾಜದ ಮಾಜಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಜಿಟಿ ಆಚಾರ್ಯ, ವಿದ್ಯಾದಾಯಿನಿ ಸಭಾ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಚಿತ್ರಾಪು ಕೆ ಎಂ ಕೋಟ್ಯಾನ್ ಹಾಗೂ ಇತರ ಸದಸ್ಯರುಗಳು ಸಂಧರ್ಭೋಚಿತವಾಗಿ ಮಾತನಾಡಿ ತಮ್ಮ ಅಭಿಪ್ರಾಯವನ್ನು ತಿಳಿಸಿದರು.

ವೇದಿಕೆಯಲ್ಲಿ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ ಎಲ್. ವಿ. ಅಮೀನ್, ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿ, ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಆರ್. ಕೆ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಸಾಲ್ಯಾನ್ ಮುಂಡ್ಕೂರು, ಗೌರವ ಕೋಶಾಧಿಕಾರಿ ತುಳಸಿದಾಸ್ ಅಮೀನ್ ಉಪಸ್ಥಿತರಿದ್ದರು. ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಅವರು ಕೊನೇಗೆ ಧನ್ಯವಾದ ಸಮರ್ಪಿಸಿದರು.

ನೂತನ ಸಮಿತಿಯಿಂದ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಕಾರ್ಯಚಟುವಟಿಕೆಗಳಿಗೆ ಹೆಚ್ಚಿನ ಬಲ ಸಿಗುವಂತಾಗಿದೆ – ತೋನ್ಸೆ ಜಯಕೃಷ್ಣ ಎ. ಶೆಟ್ಟಿ

ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿ ಯವರು ಮಾತನಾಡುತ್ತಾ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಖ್ಯಾತ ಸಂಘಟಕ ಡಿ. ಆರ್. ರಾಜು ಅವರ ನೇತೃತ್ವದಲ್ಲಿ ಜಿಲ್ಲೆಗಳ ನೂತನ ಸಮಿತಿಯ ನ್ನು ಸ್ಥಾಪಿಸಲು ಇಂದಿನ ಮಹಾಸಭೆಯು ಅನುಮತಿಯನ್ನು ನೀಡಿದ್ದು ಕೆಲವೇ ದಿನಗಳಲ್ಲಿ ನಾವು ಜಿಲ್ಲೆಗೆ ಬೇಟಿಯಿತ್ತು ಸಮಿತಿಯನ್ನು ಸ್ಥಾಪಿಸಿ ಮುಂದಿನ ಕಾರ್ಯದ ಬಗ್ಗೆ ಚರ್ಚಿಸಲಿರುವೆವು. ಇತ್ತೀಚೆಗೆ ಮಣಿಪಾಲದಲ್ಲಿ ನಡೆದ ಸಮಾವೇಶ ಕಾರ್ಯಕ್ರಮದಲ್ಲಿ ಜಿಲ್ಲೆಗಳ ಅಭಿವೃದ್ದಿಯ ಮುಂದಿನ ಕರಡು ಯೋಜನೆಯ 125 ಪುಟಗಳ ವರದಿಯನ್ನು ರಾಜ್ಯ ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಇವರ ಮುಖಾಂತರ ಸರಕಾರಕ್ಕೆ ನೀಡಿದ್ದು ಮಾನ್ಯ ಸ್ಪೀಕರ್ ಯು.ಟಿ. ಖಾದರ್ ಅವರು ಇದಕ್ಕೆ ಸ್ಪಂದಿಸಿದ್ದು ಸರಕಾರದ ಗಮನಕ್ಕೂ ತಂದಿದ್ದಾರೆ. ಪ್ರವಾಸೋಧ್ಯಮ ಅಭಿವೃದ್ದಿಯ ಬಗ್ಗೆ ಉನ್ನತ ಮಟ್ಟದ ಜನರನ್ನು ಸಂಪರ್ಕಿಸಿದ್ದು ಸರಕಾರವು ಈಗಾಗಲೇ ಈ ಬಗ್ಗೆ ಕ್ರೀಯಾಶೀಲವಾಗಿದೆ. ಊರಿನ ಸಮಿತಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಮುಂಬಯಿಯ ಎಲ್ಲಾ ಜಾತೀಯ ಸಂಘಟನೆಗಳ ಮುಖಂಡರು ಮಾತ್ರವಲ್ಲದೆ ಇಲ್ಲಿನ ಇತರ ಪ್ರಮುಖ ಸಂಘಟನೆಗಳ ಪ್ರಮುಖರನ್ನು ಸೇರಿಸಿ ಮುಂಬಯಿ ಮಂಗಳೂರು ರೈಲು ಸಮಸ್ಯೆ ಬಗ್ಗೆ, ಶಾಸ್ವತ ತಡೆಗೋಡೆ, ಪ್ರವಾಸೋಧ್ಯಮ ಅಭಿವೃದ್ದಿ ಹಾಗೂ ಇತರ ಯೋಜನೆಗಳ ಬಗ್ಗೆ ಸರಿಯಾದ ಮಾರ್ಗದಲ್ಲಿ ಮುಂದುವರಿಯೋಣ ಎಂದರು.

ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್

Comments are closed.