ಉಡುಪಿ: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ತೆಕ್ಕಟ್ಟೆ ಸಮೀಪದ ಮಣೂರು ಬಸ್ ನಿಲ್ದಾಣದ ಸಮೀಪದ ಮನೆಗೆ ಐಟಿ ದಾಳಿ ಮಾಡುವ ನೆಪದಲ್ಲಿ ನುಗ್ಗಿ ದರೋಡೆಗೆ ಸಂಚು ರೂಪಿಸಿದ ಪ್ರಕರಣದ ಇಬ್ಬರು ಆರೋಪಿಗಳನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಮೂಲದ ಮುಂಬೈ ನಿವಾಸಿ ಸಂತೋಷ್ ನಾಯಕ್(45) ಹಾಗೂ ಕಾಪು ಪೊಲಿಪು ಮೂಲದ ಮುಂಬೈ ವಾಸಿ ದೇವರಾಜ್ ಸುಂದರ್ ಮೆಂಡನ್(46) ಬಂಧಿತ ಆರೋಪಿಗಳು. ಇವರನ್ನು ಬುಧವಾರ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ಕಾರನ್ನು ಜಪ್ತಿ ಮಾಡಿ, ಉಳಿದ ಆರೋಪಿತರ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿತರು ನಕಲಿ ಐಟಿ ದಾಳಿ ಮಾಡುವ ನೆಪದಲ್ಲಿ ಮನೆಗೆ ನುಗ್ಗಿ ದರೋಡೆ ಮಾಡುವ ಸಂಚು ರೂಪಿಸಿ ಮಹಾರಾಷ್ಟ್ರದಿಂದ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರಹ್ಮಾವರ ಸಿಪಿಐ ದಿವಾಕರ ಪಿ.ಎಮ್ ನೇತೃತ್ವದಲ್ಲಿ ಕೋಟ ಠಾಣಾ ಪಿ.ಎಸ್.ಐ ಗುರುನಾಥ ಬಿ ಹಾದಿಮನಿ ಹಾಗೂ ಸುಧಾಪ್ರಭು ಮತ್ತು ಹಿರಿಯಡ್ಕ ಠಾಣಾ ಪಿಎಸ್‌ಐ ಮಂಜುನಾಥ ಅವರನ್ನು ಒಳಗೊಂಡ ಪ್ರತ್ಯೇಕ 3 ತಂಡಗಳನ್ನು ರಚಿಸಿದ್ದು, ವಿವಿಧ ಆಯಾಮಗಳಲ್ಲಿ ಆರೋಪಿತರ ಪತ್ತೆಗಾಗಿ ಬೆಂಗಳೂರು ಮತ್ತು ಮಹಾರಾಷ್ಟ್ರಕ್ಕೆ ಮತ್ತು ಸ್ಥಳೀಯವಾಗಿ ಶೋಧ ನಡೆಸಲಾಗಿತ್ತು.
ಈ ಪ್ರಕರಣದಲ್ಲಿ ಜಿಲ್ಲೆಯ ಸ್ಥಳಿಯ ಆರೋಪಿಗಳು ಕೂಡ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
Comments are closed.