ಉಡುಪಿ: ಪಡುಬಿದ್ರಿ ಬೀಚ್‌ನಲ್ಲಿ ಮುಂಬೈ ಮೂಲದ ಯೂಟ್ಯೂಬರ್ ಓರ್ವಳು ಅಸಭ್ಯವಾಗಿ ಫೋಟೋ ಶೂಟ್ ನಡೆಸುತ್ತಿದ್ದುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ವಿಚಾರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರವಾಸೋದ್ಯಮವನ್ನು ಉತ್ತೇಜಿಸುವ ಹೆಸರಿನಲ್ಲಿ ಸಂಸ್ಕೃತಿಯ ಎಲ್ಲೆ ದಾಟದಂತೆ ಸ್ಥಳೀಯ ಮೀನುಗಾರರು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ, ಯೂಟ್ಯೂಬರ್ ಖ್ಯಾತಿಶ್ರೀ ಪೊಲೀಸರ ವಿರುದ್ಧ ಆರೋಪ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಆಕೆ, ತಾನು ಪತಿಯ ಜತೆ ಬಂದು ಫೋಟೋ ಚಿತ್ರೀಕರಿಸುತ್ತಿದ್ದಾಗ ಪೊಲೀಸರೇ ಬಂದು ಎಚ್ಚರಿಸಿದ್ದಾರೆ. ಪಡುಬಿದ್ರಿಯಂಥ ಸುರಕ್ಷಿತ ಬೀಚ್‌ನಲ್ಲಿ ತನಗೆ ಹೀಗಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಯುವತಿಯ ಪೋಸ್ಟ್‌ಗೆ ಕೆಲವರು ಆಕ್ರೋಶ ಹೊರಹಾಕಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಡುಪಿ ಎಸ್‌ಪಿ ಡಾ.ಕೆ.ಅರುಣ್ ಒಬ್ಬ ಯುವತಿ ಮತ್ತು ಯುವಕ ಪಡುಬಿದ್ರಿ ಬ್ಲೂಫ್ಲಾಗ್ ಬೀಚ್‌ನಲ್ಲಿ ಅಸಭ್ಯವಾಗಿ ವರ್ತಿಸುತಿದ್ದಾರೆಂದು ಪೊಲೀಸರಿಗೆ ಸಾರ್ವಜನಿಕರು ದೂರು ನೀಡಿದ್ದು, ಬೀಟ್ ಕರ್ತವ್ಯದಲ್ಲಿದ್ದ ಎಎಸ್‌ಐ ಮತ್ತು ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲಿರುವ ಯುವಕ ಮತ್ತು ಯುವತಿಯನ್ನು ಕರೆದು ಬ್ಲೂಫ್ಲಾಗ್ ಬೀಚ್ ಮತ್ತು ವಸತಿ ಪ್ರದೇಶದ ಬಗ್ಗೆ ತಿಳಿವಳಿಕೆ ನೀಡಿ ಅವರನ್ನು ಅಲ್ಲಿಂದ ಕಳುಹಿಸಲಾಗಿದೆ. ಇಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಈ ಬಗ್ಗೆ ಯುವತಿಯನ್ನು ಸಂಪರ್ಕಿಸಿದ್ದು, ಅವರಿಗೆ ಯಾವುದೇ ದೂರುಗಳಿದ್ದಲ್ಲಿ ಮುಕ್ತವಾಗಿ ನೀಡಬಹುದಾಗಿ ಸೂಚಿಸಲಾಗಿದೆ. ಯುವತಿಯಿಂದ ದೂರು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
Comments are closed.