ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಡಾ. ರಾಜ್ ಕುಮಾರ್ ಅವರ ಜನ್ಮ ದಿನಾಚರಣೆ ಹಾಗೂ 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿರಿಯ ನಟಿ ಲಕ್ಷ್ಮಿ ಅವರಿಗೆ ಡಾ.ರಾಜಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು.
ಸಿಎಂ ಬೊಮ್ಮಾಯಿ ಅವರು ಹಿರಿಯ ಚಿತ್ರನಟಿ ಲಕ್ಷ್ಮೀ ಅವರಿಗೆ ಜೀವಮಾನ ಸಾಧನೆಗೆ ಡಾ. ರಾಜಕುಮಾರ ಪ್ರಶಸ್ತಿ, ಖ್ಯಾತ ನಿರ್ದೇಶಕ ಎಸ್ ನಾರಾಯಣ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪ್ರದಾನ ಮಾಡಿದರು. ವಿಷ್ಣು ವರ್ಧನ ಪ್ರಶಸ್ತಿಯನ್ನು ದಿ. ಜಿ ಎಂ ಲಕ್ಷ್ಮೀಪತಿ ಅವರಿಗೆ ಘೋಷಿಸಲಾಯಿತು. ಪ್ರಶಸ್ತಿಯನ್ನು ಲಕ್ಷ್ಮೀಪತಿ ಅವರ ಪರವಾಗಿ ಅವರ ಪುತ್ರ ರಾಮ್ ಪ್ರಸಾದ ಅವರು ಸ್ವೀಕರಿಸಿದರು.
ಬೆಂ2017 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಇದೇ ಸಂದರ್ಭ ನಡೆಯಿತು. ದುಬೈನ ಆಕ್ಮೇ ಮೂವೀಸ್ ಇಂಟರ್ ನ್ಯಾಶನಲ್ ಸಂಸ್ಥೆಯಡಿ ಹರೀಶ್ ಶೇರಿಗಾರ್ ಹಾಗೂ ಶರ್ಮಿಳಾ ಶೇರಿಗಾರ್ ನಿರ್ಮಾಪಕರಾಗಿರುವ ‘ಮಾರ್ಚ್22’ ಸಿನಿಮಾ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದ್ದಲ್ಲದೆ ಮಾರ್ಚ್ 22 ಚಿತ್ರದ ‘ಮುತ್ತು ರತ್ನದ ಪ್ಯಾಟೆ’ ಹಾಡಿನ ಸಾಹಿತ್ಯಕ್ಕೆ ಅತ್ಯುತ್ತಮ ಗೀತ ರಚನೆ ಜೆ.ಎಂ.ಪ್ರಹ್ಲಾದ್ ಅವರಿಗೆ ಪ್ರಶಸ್ತಿ ಸಿಕ್ಕಿದೆ. ಈ ಮೂಲಕ ಮಾರ್ಚ್ 22 ಚಿತ್ರ ಎರಡು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.
2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ವಿವರ:
ಮೊದಲನೇಯ ಅತ್ಯುತ್ತಮ ಚಿತ್ರ – ಶುದ್ಧಿ. ಎರಡನೆಯ ಅತ್ಯುತ್ತಮ ಚಿತ್ರ- ಮಾರ್ಚ್ 22. ಮೂರನೇ ಅತ್ಯುತ್ತಮ ಚಿತ್ರ- ಪಡ್ಡಾಯಿ. ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ – ಹೆಬ್ಬೆಟ್ಟು ರಾಮಕ್ಕ. ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ – ರಾಜಕುಮಾರ. ಅತ್ಯುತ್ತಮ ಮಕ್ಕಳ ಚಿತ್ರ – ಎಳೆಯರು ನಾವು ಗೆಳೆಯರು. ನಿರ್ದೇಶಕರ ಪ್ರಥಮ ನಿರ್ದೇಶನದ ಚಿತ್ರ – ಅಯನ. ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ – ಸೋಫಿಯಾ ( ಕೊಂಕಣಿ ). ಅತ್ಯುತ್ತಮ ನಟ – ವಿಶೃತ್ ನಾಯ್ಕ ( ಚಿತ್ರ – ಮಂಜರಿ). ಅತ್ಯುತ್ತಮ ನಟಿ – ತಾರಾ ಅನುರಾಧ ( ಚಿತ್ರ–ಹೆಬ್ಬೆಟ್ಟು ರಾಮಕ್ಕ).ಅತ್ಯುತ್ತಮ ಪೋಷಕ ನಟ – ಮಂಜುನಾಥ ಹೆಗಡೆ , ( ಚಿತ್ರ- ಲಕ್ಷ್ಮಿ ನಾರಾಯಣರ ಪ್ರಪಂಚಾನೇ ಬೇರೆ ). ಅತ್ಯುತ್ತಮ ಪೋಷಕ ನಟಿ – ರೇಖಾ ( ಚಿತ್ರ – ಮೂಕ ನಾಯಕ ). ಅತ್ಯುತ್ತಮ ಕಥೆ – ಹನುಮಂತ ಬಿ ಹಾಲಿಗೇರಿ. ( ಚಿತ್ರ – ಕೆಂಗುಲಾಬಿ ). ಅಮರೇಶ ನುಗಡೋಣಿ ( ಚಿತ್ರ – ನೀರು ತಂದವರು ). ಅತ್ಯುತ್ತಮ ಚಿತ್ರಕಥೆ – ವೆಂಕಟ ಭಾರದ್ವಾಜ್ ( ಚಿತ್ರ – ಕೆಂಪಿರ್ವೆ ). ಅತ್ಯುತ್ತಮ ಸಂಭಾಷಣೆ – ಪ್ರೋ ಎಸ್ ಜಿ. ಸಿದ್ದರಾಮಯ್ಯ ( ಚಿತ್ರ – ಹೆಬ್ಬೆಟ್ಟು ರಾಮಕ್ಕ ). ಅತ್ಯುತ್ತಮ ಛಾಯಾಗ್ರಹಣ. -ಸಂತೋಶ್ ರೈ ಪತಾಜೆ, ( ಚಿತ್ರ – ಚಮಕ್ ).ಅತ್ಯುತ್ತಮ ಸಂಗೀತ ನಿರ್ದೇಶನ-ವಿ.ಹರಿಕೃಷ್ಣ, ( ಚಿತ್ರ – ರಾಜಕುಮಾರ). ಅತ್ಯುತ್ತಮ ಸಂಕಲನ- ಹರೀಶ್ ಕೊಮ್ಮೆ ( ಚಿತ್ರ – ಮಫ್ತಿ ). ಅತ್ಯುತ್ತಮ ಬಾಲನಟ – ಮಾಸ್ಟರ್ ಕಾರ್ತಿಕ್ ( ಚಿತ್ರ – ರಾಮರಾಜ್ಯ).ಅತ್ಯುತ್ತಮ ಬಾಲನಟಿ – ಶ್ಲಾಘ ಸಾಲಿಗ್ರಾಮ ( ಚಿತ್ರ – ಕಟಕ )
2017ನೇ ಸಾಲಿನ ಕನ್ನಡ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಸಿಎಂ, ಇದೇ ವರ್ಷ ಮೈಸೂರಿನಲ್ಲಿ ಚಿತ್ರ ನಗರಿ ಕಾಮಗಾರಿ ಪ್ರಾರಂಭಿಸಲಾಗುವುದು. ಯಾರೂ ಮನವಿ ಅಥವಾ ಬೇಡಿಕೆ ಸಲ್ಲಿಸದಿದ್ದರೂ ಪ್ರಸಕ್ತ 2022-23 ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ತಾವು 125 ಕನ್ನಡ ಮತ್ತು ಪ್ರಾದೇಶಿಕ ಚಲನಚಿತ್ರಗಳಿಗೆ ಬದಲಾಗಿ 200 ಚಲನಚಿತ್ರಗಳಿಗೆ ಸಹಾಯಧನ ನೀಡಲು ಅವಕಾಶ ಕಲ್ಪಿಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಟ ರಾಘವೇಂದ್ರ ರಾಜಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಮ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಆಯುಕ್ತ ಡಾ. ಪಿ ಎಸ್ ಹರ್ಷ, ಚಿನ್ನೇಗೌಡ ಮತ್ತು ಇತರರು ಉಪಸ್ಥಿತರಿದ್ದರು.
Comments are closed.