(ಚಿತ್ರಗಳು, ವರದಿ- ಯೋಗೀಶ್ ಕುಂಭಾಸಿ)
ಮಂಗಳೂರು: ಉದ್ಯಮ ಸಹಿತ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಹರೀಶ್ ಶೇರಿಗಾರ್ ಎಲ್ಲರಿಗೂ ಮಾಡೆಲ್. ದಾನ ಶೂರ ಕರ್ಣನಂತೆ ಬದುಕುತ್ತಿರುವ ಅವರ ಕೀರ್ತಿ ರಾಜ್ಯ ಮಾತ್ರವಲ್ಲದೆ ದೇಶ-ವಿದೇಶಗಳಲ್ಲಿಯೂ ಹೆಚ್ಚಿದೆ. ಇವರಿಗೆ ಮುಂದಿನ ದಿನಗಳಲ್ಲಿ ಪದ್ಮಶ್ರೀಯಂತಹ ಗೌರವದ ಪ್ರಶಸ್ತಿಗಳು ಅರಸಿ ಬರಲಿ ಎಂದು ಖ್ಯಾತ ನ್ಯೂರೋ ಸರ್ಜನ್ ಡಾ. ಕೆ.ವಿ. ದೇವಾಡಿಗ ಹೇಳಿದರು.
ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ.) ಮಂಗಳೂರಿನ ಮಹಿಳಾ ಸಂಘಟನೆ ಮತ್ತು ಯುವ ಸಂಘಟನೆ ವತಿಯಿಂದ ಡಿ.24 ಶನಿವಾರ ಸಂಜೆ ಮಂಗಳೂರು ಮಣ್ಣಗುಡ್ಡದ ದೇವಾಡಿಗ ಸಮಾಜ ಭವನದಲ್ಲಿ ಹಮ್ಮಿಕೊಳ್ಳಲಾದ ಗಡಿನಾಡ ರತ್ನ ಪ್ರಶಸ್ತಿ ಪುರಸ್ಕೃತ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಹರೀಶ್ ಶೇರಿಗಾರ್ ಅವರ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವ ದೇವಾಡಿಗ ಮಹಾ ಮಂಡಳದ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ ಅವರು ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರಿನ ವೆಬ್‌ಸೈಟ್ ಲೋಕಾರ್ಪಣೆಗೊಳಿಸಿ ಮಾತನಾಡಿ, ನಾಯಕತ್ವದ ಗುಣಗಳೊಂದಿಗೆ ಹರೀಶ್ ಶೇರಿಗಾರ್ ಸಮಾಜದ ಎಲ್ಲರ ಮನಸ್ಸು ಗೆದ್ದಿದ್ದಾರೆ. ಕಠಿಣ ಪರಿಶ್ರಮದ ಮೂಲಕ ಎತ್ತರದ ಸ್ಥಾನಕ್ಕೇರಿದ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಅಪಾರ ಕೊಡುಗೆ ನೀಡುತ್ತಿದ್ದು ಇವರ ಆದರ್ಶ ಎಲ್ಲರಿಗೂ ಮಾದರಿ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಹರೀಶ್ ಶೇರಿಗಾರ್ ಅವರಿಗೆ ಮುಂದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕು ಎಂದು ವಿಶ್ವ ದೇವಾಡಿಗರ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಎಚ್. ಮೋಹನದಾಸ್, ಬೆಂಗಳೂರು ದೇವಾಡಿಗ ಸಂಘದ ಅಧ್ಯಕ್ಷ ಚಂದ್ರಶೇಖರ್ ಪ್ರತಿಪಾದಿಸಿದರು.
ಕರ್ನಾಟಕ ದೇವಾಡಿಗ ಸಂಘ ಮಂಗಳೂರು ಕೇಂದ್ರೀಯ ಸಮಿತಿ, ಮಹಿಳಾ ಹಾಗೂ ಯುವ ಸಂಘಟನೆ
ಹರೀಶ್ ಶೇರಿಗಾರ್, ಶರ್ಮಿಳಾ ಹರೀಶ್ ಶೇರಿಗಾರ್ ಅವರನ್ನು ಭವ್ಯ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಅಲ್ಲದೆ ಕಾರ್ಕಳ, ಉಡುಪಿ, ಸುರತ್ಕಲ್, ನಂದಾವರ ಸಂಘದ ವತಿಯಿಂದ ಪದಾಧಿಕಾರಿಗಳು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿದ ಹರೀಶ್ ಶೇರಿಗಾರ್ ಅವರು ಮಾತನಾಡಿ, ತಂದೆ-ತಾಯಿ ಆಶಿರ್ವಾದ, ಪತ್ನಿಯ ಸಹಕಾರದಿಂದ ನನಗೆ ಕೆಲಸ ಮಾಡಲು, ಸಾಧನೆ ಮಾಡಲು ಸಾಧ್ಯವಾಗಿದೆ. ಸಂಘದಿಂದ ಎಲ್ಲವೂ ಸಾಧ್ಯ. ಕಠಿಣ ಪರಿಶ್ರಮ ಇದ್ದರೆ ಯಾವುದೇ ಕೆಲಸ ಅಸಾಧ್ಯವಲ್ಲ. ಮಾಡುವ ಕೆಲಸದಲ್ಲಿ ಉತ್ತಮ ಬದ್ಧತೆ ಇರಬೇಕು. ಯಾವುದೇ ಪ್ರಶಸ್ತಿಯ ಆಸೆ ಹಿಂದೆ ಬಿದ್ದು ಕೆಲಸ ಮಾಡಬಾರದು. ಜೀವನದಲ್ಲಿನ ಯಾವುದೇ ಸಮಸ್ಯೆಗೂ ಎದೆಗುಂದಬಾರದು ಎಂದರು.
ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಇದರ ಅಧ್ಯಕ್ಷ ಕೆ. ಶ್ರೀಧರ್ ಮೊಯಿಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಂಬೈ ದೇವಾಡಿಗ ಸಂಘದ ಅಧ್ಯಕ್ಷ ಪ್ರವೀಣ್ ನಾರಾಯಣ ದೇವಾಡಿಗ, ಕರ್ನಾಟಕ ರಾಜ್ಯ ದೇವಾಡಿಗ ಸಂಘ ಮಂಗಳೂರಿನ ಉಪಾಧ್ಯಕ್ಷೆ ವೇಣಿ ಮರೋಳಿ, ಮಾಜಿ ಅಧ್ಯಕ್ಷರಾದ ವಾಮನ್ ಮರೋಳಿ, ದಿನೇಶ್ ದೇವಾಡಿಗ ಕದ್ರಿ, ಡಾ. ದೇವರಾಜ್ ಕೆ., ಬಾರ್ಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನದ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್, ವಿಶ್ವ ದೇವಾಡಿಗರ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಎಚ್. ಮೋಹನದಾಸ್, ಬೆಂಗಳೂರು ದೇವಾಡಿಗ ಸಂಘದ ಅಧ್ಯಕ್ಷ ಚಂದ್ರಶೇಖರ್, ಉಡುಪಿ ಸಂಘದ ಅಧ್ಯಕ್ಷ ಗಣೇಶ್ ದೇವಾಡಿಗ, ಕಾರ್ಕಳ ಸಂಘದ ಅಧ್ಯಕ್ಷೆ ಕುಸುಮಾಂಜಲಿ, ಮುಂಬಯಿ ಸಂಘದ ಮಾಜಿ ಅಧ್ಯಕ್ಷ ರವಿ ದೇವಾಡಿಗ, ಮಂಗಳೂರು ಪಾಲಿಟೆಕ್ನಿಕ್ ನಿವೃತ್ತ ಪ್ರಾಂಶುಪಾಲ ಬಾಬು ದೇವಾಡಿಗ ಆಂಬ್ಲಮೊಗರು, ಸಂಘದ ಪ್ರಧಾನ ಕಾರ್ಯದರ್ಶಿ ಸುಧಾಕರ್ ಮೊಯಿಲಿ, ಜಯಾನಂದ ದೇವಾಡಿಗ, ದುಬೈ ದೇವಾಡಿಗ ಸಂಘದ ಶೇಖರ್ ಮೊಯಿಲಿ ಮೊದಲಾದವರು ಇದ್ದರು.
‘ಥಂಡರ್ ಕಿಡ್ಸ್’ ತಂಡದಿಂದ ಆರ್ಕೆಸ್ಟ್ರಾ ಹಾಗೂ ಮಹಿಳಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷ ಆಕರ್ಷಣೆಯಾಗಿತ್ತು. ಇದೇ ವೇದಿಕೆಯಲ್ಲಿ ಹರೀಶ್ ಶೇರಿಗಾರ್ ಅವರು ಕಾಂತಾರ ಚಿತ್ರದ ಸಿಂಗಾರ ಸಿರಿಯೆ ಹಾಡಿದರು.
ನಮ್ಯಾ ದೇವಾಡಿಗ ಹಾಗೂ ಕಾವ್ಯಾ ದೇವಾಡಿಗ ಸ್ವಾಗತ ನೃತ್ಯ ಮಾಡಿದರು. ಐಶ್ವರ್ಯಾ ದೇವಾಡಿಗ, ಚಿರಂತ್ ಹಾಗೂ ಯುವ ಸಂಘಟನೆ, ಮಹಿಳಾ ಸಂಘಟನೆಯವರು ನರ್ತಿಸಿದರು. ಲಹರಿ ಪ್ರಾರ್ಥಿಸಿದರು.
ಶ್ರೀಧರ್ ಮೊಯಿಲಿ ಸ್ವಾಗತಿಸಿದರು. ಶ್ರೀನಿವಾಸ ದೇವಾಡಿಗ ಅಭಿನಂದನಾ ಪತ್ರ ವಾಚಿಸಿದರು. ಯಶ್ವಿತಾ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ವೇಣಿ ಮರೋಳಿ ವಂದಿಸಿದರು.
Comments are closed.