ಅನಿವಾಸಿ ಭಾರತೀಯರು

ಯಕ್ಷಮಿತ್ರರು ದುಬೈ; ಯಕ್ಷ ಸಂಭ್ರಮ-2023ರ ಪೂರ್ವಭಾವಿ ಸಭೆ

Pinterest LinkedIn Tumblr

ದುಬೈ: ಯಕ್ಷಮಿತ್ರರು ದುಬೈ ಸಂಸ್ಥೆಯು ತನ್ನ 20ನೇ ವರ್ಷಕ್ಕೆ ಪಾದಾರ್ಪಣೆಗೈದ ಶುಭ ಸಂದರ್ಭದಲ್ಲಿ ಜೂನ್ 4ನೇ ತಾರೀಕಿನ ರವಿವಾರದಂದು ದುಬೈಯ ಶೇಖ್ ರಶೀದ್ ಸಭಾಂಗಣದಲ್ಲಿ, ”ಯಕ್ಷಸಂಭ್ರಮ 2023”ರ ಪ್ರಯುಕ್ತ ದಿವಂಗತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ “ಲೋಕಾಭಿರಾಮ” ಕನ್ನಡ ಪೌರಾಣಿಕ ಯಕ್ಷಗಾನ ಕಥಾನಕವನ್ನು ಆಡಿ ತೋರಿಸಲಿದ್ದಾರೆ. ಆ ಪ್ರಯುಕ್ತ ಅದರ ಪೂರ್ವಭಾವಿ ಸಭೆ, ಜ.8 ರವಿವಾರ ನಗರದ ಪ್ರತಿಷ್ಠಿತ ಹೋಟೆಲ್ ನಲ್ಲಿ ನೆರವೇರಿತು.

ಯಕ್ಷಮಿತ್ರರ ರೂವಾರಿಯಾಗಿರುವ ಚಿದಾನಂದ ಪೂಜಾರಿಯವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ದೇವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪದ್ಮರಾಜ್ ಎಕ್ಕಾರು, ಗಿರಿಧರ್ ನಾಯಕ್, ಪ್ರಭಾಕರ್ ಸುವರ್ಣ, ಸತೀಶ್ ಶೆಟ್ಟಿ , ಶೋಧನ್ ಪ್ರಸಾದ್ ಮತ್ತು ಸತೀಶ್ ಉಳ್ಳಾಲ ಉಪಸ್ಥಿತರಿದ್ದರು.

ಯಕ್ಷಸಂಭ್ರಮ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಹಾಗು ಯಕ್ಷಸಂಭ್ರಮದಲ್ಲಿ ವಿಜ್ರಂಭಿಸಲು
ನಮ್ಮೂರಿನಿಂದ ಬರುವ ಪ್ರಸಿದ್ದ ಅತಿಥಿ ಕಲಾವಿದರ ವಿವರವನ್ನು ಯಕ್ಷಮಿತ್ರರ ಹಿರಿಯ ಕಲಾವಿದ ರವೀಂದ್ರ ಉಚ್ಚಿಲ್ ಸಭೆಯಲ್ಲಿ ತಿಳಿಸಿದರು.

ವೇದಿಕೆಯಲ್ಲಿದ್ದ ಮುಖ್ಯ ಅತಿಥಿಗಳು ಕಾರ್ಯಕ್ರಮದ ಕುರಿತಾಗಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ, ಸಂಘಟಕರನ್ನು ಅಭಿನಂದಿಸುವ ಜೊತೆಗೆ ಯಕ್ಷಸಂಭ್ರಮದ ಯಶಸ್ವಿಗೆ ಬೇಕಾದಂತಹ ಸಲಹೆ ಸೂಚನೆಗಳನ್ನು ಕೊಟ್ಟು, ತಮ್ಮ ಸಂಪೂರ್ಣ ಬೆಂಬಲವನ್ನು ಪ್ರಕಟಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.

ಕಾರ್ಯಕ್ರಮದ ಲೆಕ್ಕಾಚಾರಗಳ ಬಗ್ಗೆ ಯಕ್ಷಮಿತ್ರರ ಮುಖ್ಯ ಸದಸ್ಯರಾದಂತಹ ಶ್ರೀ ರವಿ ಕೋಟ್ಯಾನ್ ಅವರು ಸಂಪೂರ್ಣವಾಗಿ ವಿವರಿಸಿದರು.

20ನೇ ವರ್ಷದ ಈ ಅದ್ದೂರಿ ಕಾರ್ಯಕ್ರಮಕ್ಕೆ ಕೆಲವು ತಂಡ/ಸಮಿತಿಗಳನ್ನು ರಚಿಸಲಾಯಿತು.

ಯಕ್ಷಗಾನ ಕಲಾ ಪೋಷಕರಾದ ಪದ್ಮನಾಭ ಕಟೀಲ್ ಅವರು ಶುಭವನ್ನು ಹಾರೈಸಿದರು. ಹಾಗೆಯೆ ಯಕ್ಷ ಶಿಕ್ಷಣದ ಬಗ್ಗೆ ಯಕ್ಷ ಗುರುಗಳಾದ ಕಿಶೋರ್ ಗಟ್ಟಿಯವರು ತಮ್ಮ ಅಭಿಪ್ರಾಯವನ್ನು ತಿಳಿಸಿದರು.

ವಿದೇಶದಲ್ಲಿ ಯಕ್ಷಗಾನದ ಗೆಜ್ಜೆಯ ನಾದದ ಇಂಪನ್ನು ಪಸರಿಸುವುದರೊಂದಿಗೆ, ಯಕ್ಷಗಾನ ಎನ್ನುವ ಶ್ರೀಮಂತ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ 20ನೇ ವರ್ಷದ ಈ ಯಕ್ಷಸಂಭ್ರವನ್ನು ಯಶಸ್ವಿಗೊಳಿಸಲು ಉಪಸ್ಥಿತರಿದ್ದ ಎಲ್ಲ ಯಕ್ಷಮಿತ್ರ ಸದಸ್ಯರು ಹಾಗು ಸದಸ್ಯೆಯರಲ್ಲಿ ಸಹಕರಿಸಲು ಕೇಳಿಕೊಳ್ಳಲಾಯಿತು.

ಪೂರ್ವಭಾವಿ ಸಭೆಯ ಕಾರ್ಯಕ್ರಮಕ್ಕೆ ಬಂದಿರುವ ಎಲ್ಲರನ್ನೂ ಸ್ವಾಗತಿಸಿ, ವಂದಿಸುವುದರ ಜೊತೆಗೆ ನಿರೂಪಣೆಯನ್ನು ವಿಘ್ನೇಶ್ ಕುಂದಾಪುರ ನಡೆಸಿಕೊಟ್ಟರು.

ಸಭೆಗೆ ಪ್ರೀತಿಯಿಂದ ಆಗಮಿಸಿದ ಕಲಾಭಿಮಾನಿಗಳು, ವೈ.ಎಂ.ಡಿ-ಯಕ್ಷ ಶಿಕ್ಷಣದ ವಿದ್ಯಾಥಿಗಳು ಹಾಗು ಹೆತ್ತವರು, ಅತಿಥಿಗಳ ಜೊತೆ ಉಪಹಾರ ಸ್ವೀಕರಿಸಿ, ಕಾರ್ಯಕ್ರಮಕ್ಕೆ ಶ್ಲಾಘನೆ-ಬೆಂಬಲವನ್ನು ಘೋಷಿಸುವ ಮೂಲಕ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಲಾಯಿತು.

Comments are closed.