ಕೆಲವರಿಗೆ ಸಾಕುಪ್ರಾಣಿಗಳೆಂದರೆ ಅಗಾಧ ಪ್ರೀತಿ. ನಿತ್ಯ ಅವುಗಳಿಗೆ ಊಟ ನೀಡುವುದು ಹಾಗೂ ಅವುಗಳ ಆರೈಕೆ ಮಾಡುವುದರಲ್ಲೇ ಕಳೆಯುವವರಿದ್ದಾರೆ. ಆದರೆ, ಕಳೆದ 17 ವರ್ಷಗಳಿಂದಲೂ ಪಾಕಿಸ್ತಾನದ ಮಹಿಳೆ ಐವತ್ತಕ್ಕೂ ಹೆಚ್ಚು ಬೀದಿಬದಿ ಬೆಕ್ಕುಗಳಿಗೆ ನಿತ್ಯವೂ ಆಹಾರ ನೀಡುತ್ತಿದ್ದಾಳೆ.
ಕರಾಚಿಯಲ್ಲಿನ ಗುಲ್ಷನ್ ಭಾಗದಲ್ಲಿ ವಾಸಿಸುತ್ತಿರುವ ಮಹಿಳೆಯನ್ನು ಇಲ್ಲಿನ ಜನರು ಕ್ಯಾಟ್ ಲೇಡಿ ಎಂದೇ ಕರೆಯುತ್ತಾರೆ. 17 ವರ್ಷಗಳ ಹಿಂದೆ ಒಂದು ದಿನ ರಸ್ತೆ ಮೇಲೆ ಹಸಿದ ಬೆಕ್ಕು ನಿಂತಿರುವುದನ್ನು ಈ ಮಹಿಳೆ ನೋಡಿದ್ದಳಂತೆ. ಆ ಬೆಕ್ಕು ಹಸಿವಿನಿಂದ ಸಾಯುವ ದೃಶ್ಯ ಕಣ್ಣಿಗೆ ಕಟ್ಟಿದಂತಾಗಿ ಅಂದಿನಿಂದಲೂ ಬೆಕ್ಕುಗಳಿಗೆ ನಿತ್ಯವೂ ಆಹಾರ ನೀಡುತ್ತಿದ್ದಾಳಂತೆ. ಪ್ರತಿದಿನ ಸಂಜೆ ಮಾಂಸವನ್ನು ತಂದು ಈ ಬೆಕ್ಕುಗಳಿಗೆ ನೀಡುತ್ತಿರುವ ಈಕೆಗೆ ಈಗ ನಡೆಯಲೂ ಕಷ್ಟವಾಗುತ್ತಿದೆ. ವೃದ್ಧಾಪ್ಯದಿಂದಾಗಿ ಊರುಗೋಲಿನ ಸಹಾಯದಿಂದ ಬೆಕ್ಕುಗಳಿದ್ದಲ್ಲಿ ಬಂದು ಆಹಾರ ನೀಡುತ್ತಿದ್ದಾಳೆ.
ಬೆಕ್ಕುಗಳು ಈಕೆಗಾಗಿ ನಿತ್ಯ ಕಾಯುತ್ತವೆ. ಹೀಗಾಗಿ ಈಕೆ ಒಂದು ದಿನವೂ ಊರು ಬಿಟ್ಟು ತೆರಳಿಲ್ಲ. ಅಷ್ಟೇ ಅಲ್ಲ ಹಜ್ ಯಾತ್ರೆಗೂ ಈಕೆ ಹೋಗಿಲ್ಲ. ಒಮ್ಮೆ ಕಾಲು ಮುರಿದು, ಏಳಲೂ ಆಗದ ಸ್ಥಿತಿ ಇದ್ದಾಗಲೂ ಬೆಕ್ಕುಗಳಿಗೆ ಇತರರ ಸಹಾಯದಿಂದ ಆಹಾರ ನೀಡಿದ್ದಳು. ಅಲ್ಲದೆ ವೃದ್ಧಾಪ್ಯದಿಂದಾಗಿ ಬೆಕ್ಕುಗಳಿಗೆ ಆಹಾರ ನೀಡುವುದು ಈಗ ಕಷ್ಟವಾಗುತ್ತಿದ್ದು, ಬೇರೆ ಯಾರಾದರೂ ಈ ಕಾರ್ಯವನ್ನು ಮುಂದುವರಿಸಿದರೆ ನಾನು ಇದನ್ನು ತ್ಯಜಿಸುತ್ತೇನೆ ಎಂದು ಕ್ಯಾಟ್ ಲೇಡಿ ಹೇಳಿಕೊಂಡಿದ್ದಾಳೆ. ಈ ಭಾಗದ ಮಕ್ಕಳಿಗಂತೂ ಈ ಕ್ಯಾಟ್ ಲೇಡಿ ಅತ್ಯಂತ ಕುತೂಹಲಕಾರಿ ವ್ಯಕ್ತಿತ್ವ!
Comments are closed.