ಬೆಂಗಳೂರು: ಮಹಾದಾಯಿ ನದಿ ನೀರು ಹಂಚಿಕೆ ಸಂಬಂಧ ಕರ್ನಾಟಕ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧಿಕರಣ ವಜಾಗೊಳಿಸುತ್ತಿದ್ದಂತೆಯೇ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಇಂದು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತೀರ್ಪು ವಿರೋಧಿಸಿ ಬಂದ್ ಆಚರಣೆ ಮಾಡಲಾಗುತ್ತಿದೆ.
ನಿನ್ನೆ ತೀರ್ಪು ಹೊರ ಬೀಳುತ್ತಿದ್ದಂತೆಯೇ ಬೆಳಗಾವಿ, ಧಾರವಾಡ, ಬಾಗಲಕೋಟೆ, ಹುಬ್ಬಳ್ಳಿ-ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಸ್ವಯಂ ಪ್ರೇರಿತರಾಗಿ ಬಂದ್ ಮಾಡಲಾಗಿತ್ತು. ಬಳಿಕ ತೀರ್ಪು ವಿರೋಧಿಸಿ ರೈತಪರ ಸಂಘಟನೆಗಳು ಮತ್ತು ಕಳಸಾ ಬಂಡೂರಿ ಹೋರಾಟ ಸಮಿತಿ ಉತ್ತರ ಕರ್ನಾಟಕ ಬಂದ್ ಗೆ ಕರೆ ನೀಡಿತ್ತು. ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಮಹಾದಾಯಿ ನ್ಯಾಯಮಂಡಳಿ ತೀರ್ಪು ವಿರೋಧಿಸಿ ರಾಜ್ಯ ರೈತ ಸಂಘವು ಕರೆ ನೀಡಿರುವ ಬಂದ್ ನಿಮಿತ್ತ ಬೆಳಗಾವಿ, ಧಾರವಾಡ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಧಾರವಾಡ:
ಬಂದ್ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ, ನವಲಗುಂದ, ನರಗುಂದ, ಅಣ್ಣಿಗೇರಿ, ಅಕ್ಷರಶಃ ಅಗ್ನಿ ಕುಂಡಗಳಾಗಿವೆ.. ಇಲ್ಲೆಲ್ಲಾ ಶಾಲಾ ಕಾಲೇಜಿಗಳಿಗೆ ರಜೆ ಘೋಷಿಸಲಾಗಿದೆ. ಆಟೋ ಚಾಲಕರು ಸಂಘ, ಹೋಟೆಲ್ ಉದ್ಯಮ, ವ್ಯಾಪಾರಿಗಳ ಸಂಘ ಸೇರಿದಂತೆ 30ಕ್ಕೂ ಹೆಚ್ಚು ಸಂಘಟನೆಗಳು ಬಂದ್’ಗೆ ಬೆಂಬಲ ವ್ಯಕ್ತಪಡಿಸಿವೆ. ಇನ್ನು ಚಿತ್ರಮಂದಿರ, ಪೆಟ್ರೋಲ್ ಬಂಕ್’ಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಲಾಗಿದೆ. ಬಸ್ ಸೇವೆ ಆರಂಭವಾಗಿದ್ದರೂ ಒಂದೇ ಒಂದು ಬಸ್ ರಸ್ತೆಗಿಳಿದಿಲ್ಲ, ಖಾಸಗಿ ಬ್ಯಾಂಕುಗಳು ತಮ್ಮ ಸಿಬ್ಬಂದಿಗೆ ರಜೆ ಘೋಷಿಸಿವೆ.. ಮುಂಜಾನೆಯಿಂದಲೇ ರೈತರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಟೈರ್’ಗೆ ಬೆಂಕಿ ಹಚ್ಚಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನೆ ವಿಕೋಪಕ್ಕೆ ಹೋಗದಂತೆ ನಗರದ ಹಲವೆಡೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಹೊರ ಜಿಲ್ಲೆಗಳಿಂದ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನ ಕರೆಸಿಕೊಳ್ಳಲಾಗಿದೆ.
ಗದಗ:
ಗದಗ ನಗರದಲ್ಲೂ ರೈತರು ಹಾಗೂ ಸಾರ್ವಜನಿಕರು ತೀವ್ರ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಇಲ್ಲಿಯ ಮುಳಗುಂದ ನಾಕಾದಲ್ಲಿ ವಿವಿಧಕ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಅರೆಬೆತ್ತಲೆ ಮೆರವಣಿಗೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನಾಕಾರರು ತರಕಾರಿ ಮಾರುಕಟ್ಟೆಗೆ ನುಗ್ಗಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಬೇಕಾಗಿ ಬಂದಿತು. ಗದಗ್ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದು, ಮದ್ಯ ಮಾರಾಟವನ್ನೂ ನಿಷೇಧಿಸಲಾಗಿದೆ.
ಬೆಳಗಾವಿ:
ಬೆಳಗಾವಿ ಜಿಲ್ಲೆಯ ಬಹುತೇಕ ಕಡೆ ಬಂದ್’ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಖಾನಾಪುರ, ಕಿತ್ತೂರು, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಬೆಳಗಾವಿ ನಗರಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಜಿಲ್ಲೆಯ ರೈತ ಸಂಘಟನೆಗಳು ಬಂದ್’ಗೆ ಬೆಂಬಲ ವ್ಯಕ್ತಪಡಿಸಿವೆ. ಇಲ್ಲಿಯ ಅಂಬೇಡ್ಕರ್ ವೃತ್ತದಲ್ಲಿ ರೈತರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯನವರ ಭಾವಚಿತ್ರಕ್ಕೆ ಮೊಟ್ಟೆ ಹೊಡೆದು ಆಕ್ರೋಶ ವ್ಯಕ್ತಪಡಿಸಿವೆ.
ಇನ್ನು, ಆನೇಕಲ್’ನಲ್ಲಿ ಹಲವೆಡೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಿರುವ ವರದಿಯಾಗಿದೆ.
Comments are closed.