ಮೈಸೂರು” ಬಹು ಅಂಗಾಂಗ ಸಮಸ್ಯೆಯಿಂದ ನಿಧನರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್‌ರವರ ಪ್ರಾರ್ಥೀವ ಶರೀರದ ಅಂತ್ಯಕ್ರಿಯೆ ಇಂದು ನೆರವೇರಿತು.
ಇಲ್ಲಿಗೆ ಸಮೀಪದ ಟಿ. ಕಾಟೂರು ಗ್ರಾಮದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಆಪ್ತಸ್ಥಳವಾದ ಫಾರಂಹೌಸ್‌ನಲ್ಲಿ ಧಾರ್ಮಿಕ ವಿಧಿ-ವಿಧಾನಗಳ ಅನ್ವಯ ಪ್ರಾರ್ಥೀವ ಶರೀರದ ಅಂತ್ಯಕ್ರಿಯೆ ನಡೆಸಲಾಯಿತು.
ಕಾಗಿನೆಲೆ ಪೀಠದ ಕನಕಗುರು ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಕನಕಗುರು ಪೀಠದ ಮಹಾಸ್ವಾಮೀಜಿಗಳು ಹಾಗೂ ಡಾ. ಭಾನುಪ್ರಕಾಶ್ ನೇತೃತ್ವದ ಪುರೋಹಿತರ ತಂಡ ಹಾಲುಮತ ಸಂಪ್ರದಾಯದಂತೆ ತಾಮ್ರದ ತಗಡಿನ ಮೇಲೆ 8 ದೀಪಗಳನ್ನಿಟ್ಟು, ವಿಭೂತಿ, ಬಿಲ್ಲಪತ್ರೆ, ಧಾರಣೆಯೊಂದಿಗೆ ಸಕಲ ಪೂಜೆಗಳೊಂದಿಗೆ ಅಂತ್ಯಸಂಸ್ಕಾರ ನಡೆಸಿಕೊಟ್ಟರು.
ಅಂತ್ಯಸಂಸ್ಕಾರದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಪಾರ್ವತಮ್ಮ , ಪುತ್ರ ಡಾ. ಯತೀಂದ್ರ, ಮೃತ ರಾಕೇಶ್ ಪತ್ನಿ ಸ್ಮಿತಾ ಮತ್ತು ಮಕ್ಕಳು ಹಾಗೂ ಕುಟುಂಬದ ಪ್ರಮುಖ ಆಪ್ತೇಷ್ಟರು, ಸ್ನೇಹಿತರು, ಸಚಿವ ಸಂಪುಟ ಸಹೋದ್ಯೋಗಿಗಳು ಹಾಗೂ ಕಾಗಿನೆಲೆ ಪೀಠದ ಈಶ್ವರನಂದ ಮಹಾಪುರಿ ಸ್ವಾಮೀಜಿ ಹಾಜರಿದ್ದರು.
ಪ್ರಾರ್ಥೀವ ಶರೀರದ ಅಂತ್ಯಸಂಸ್ಕಾರ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಗನ ಅಗಲಿಕೆಯನ್ನು ಸಹಿಸದೆ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತದ್ದು ಕಲ್ಲು ಹೃದಯವನ್ನು ಕರಗಿಸುವಂತಿತ್ತು. ಅಂತ್ಯ ಸಂಸ್ಕಾರ ವೇಳೆ ಕುಟುಂಬ ಸದಸ್ಯರ ರೋಧನ ಮುಗಿಲುಮುಟ್ಟಿತ್ತು.
ಪ್ರಾರ್ಥೀವ ಶರೀರವನ್ನು ಅಂತ್ಯ ಸಂಸ್ಕಾರಕ್ಕಾಗಿ ಕಾಟೂರು ಗ್ರಾಮಕ್ಕೆ ತರುವ ಮುನ್ನ ಇಲ್ಲಿನ ದಸರಾ ಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ ಸಾರ್ವಜನಿಕರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.
ರಾಜ್ಯಪಾಲ ವಾಜಬಾಯಿರೂಡಬಾಯಿವಾಲಾ, ಕಾಂಗ್ರೇಸ್ ಹಿರಿಯ ಮುಖಂಡ ದಿಗ್ವಿಜಯ ಸಿಂಗ್, ಕೇರಳ ಮಾಜಿ ಮುಖ್ಯಮಂತ್ರಿ ಉಮನ್ ಚಾಂಡಿ, ಸಚಿವರಾದ ಪರಮೇಶ್ವರ್, ಕಾಗೋಡು ತಿಮ್ಮಪ್ಪ, ಎ ಮಂಜು, ಡಿ ಕೆ ಶಿವಕುಮಾರ್, ಎಂ ಬಿ ಪಾಟೀಲ್, ಹೆಚ್ ಆಂಜನೇಯ, ಎಚ್ ಎಸ್ ಮಹದೇವ್ ಪ್ರಸಾದ್, ಮಹದೇವಪ್ಪ, ಆರ್ ವಿ ದೇಶಪಾಂಡೆ, ಟಿ ಬಿ ಜಯಚಂದ್ರ, ಬಸವರಾಜ ರಾಯರೆಡ್ಡಿ, ಕೇಂದ್ರ ಸಚಿವರಾದ ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ವಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ, ಮಾಜಿ ಸಚಿವರಾದ ಕೆ ಜೆ ಜಾರ್ಜ್, ಶ್ರೀನಿವಾಸ್ ಪ್ರಸಾದ್, ಕಟ್ಟಾ ಸುಬ್ರಮಣ್ಯನಾಯ್ಡು, ಆರ್ ಅಶೋಕ್, ತನ್ವೀರ್ ಸೇಟ್, ಶಾಸಕರಾದ ಕುಮಾರ್ ಬಂಗಾರಪ್ಪ, ದಿನೇಶ್ ಗುಂಡೂರಾವ್, ಎಂ ಕೆ ಸೋಮಶೇಖರ್, ವಾಸು, ಜಿ ಟಿ ದೇವೇಗೌಡ, ಜಿಲ್ಲಾಧಿಕಾರಿ ಶಿಖಾ, ಮೇಯರ್ ಭೈರಪ್ಪ, ಜಿ ಪಂ ಅಧ್ಯಕ್ಷೆ ನಯೀಮಾ ಸುಲ್ತಾನ್, ಪಿ ರಮೇಶ್ ಸೇರಿದಂತೆ ನೂರಾರು ಗಣ್ಯರು, ನಗರ ಪಾಲಿಕೆ , ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಜರಿದ್ದು ಪಾರ್ಥೀವ ಶರೀರಕ್ಕೆ ಪುಷ್ಪಗುಚ್ಚವಿರಿಸಿ ಅಂತಿಮ ನಮನ ಸಲ್ಲಿಸಿದರು.
ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಪ್ರತ್ಯೇಕ ಸಾಲುಗಳಲ್ಲಿ ಮೃತರ ಅಂತಿಮ ದರ್ಶನ ಪಡೆದರು.
ಹಾಗೇಯೇ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ 5 ಮಂದಿ ಪೋಲಿಸ್ ಅಧೀಕ್ಷಕರು, 14 ಮಂದಿ ಎಸಿಪಿ, 25 ಸರ್ಕಲ್ ಇನ್ಸ್ ಪೆಕ್ಟರ್ , 35 ಸಬ್ ಇನ್ಸ್ ಪೆಕ್ಟರ್, 55 ಸಹಾಯಕ ಸಬ್ ಇನ್ಸ್ ಪಕ್ಟರ್, 500 ಮಂದಿ ಪೋಲಿಸ್ ಕಾನ್ಸ್ಟೆಬಲ್ ಗಳು, 25 ಮಂದಿ ಮಹಿಳಾ ಪೋಲಿಸರು, 10 ಕೆ ಎಸ್ ಆರ್ ಪಿ ತುಕಡಿ, 10 ಸಿ ಎ ಆರ್ ತುಕಡಿ, 4 ವಿದ್ಬಂಕ್ಷಕ ಕೃತ್ಯ ತಡೆ ಪಡೆ, 200 ಮಂದಿ ಗೃಹ ರಕ್ಷಕದಳದವರನ್ನು ನಿಯೋಜಿಸಲಾಗಿತ್ತು.
ಸಾರ್ವಜನಿಕರ ಅಂತಿಮ ದರ್ಶನ ಪಡೆದ ನಂತರ ತೆರೆದ ವಾಹನದಲ್ಲಿ ಪಾರ್ಥೀವ ಶರೀರವನ್ನು ಬಸವೇಶ್ವರ ವೃತ್ತ ಚಾಮರಾಜ ಜೋಡಿ ರಸ್ತೆ, ಸರಸ್ವತಿ ಪುರಂ, ಕಾಂತರಾಜ ಜೋಡಿ ರಸ್ತೆಮೂಲಕ ಶಾರದ ದೇವಿ ನಗರದಲ್ಲಿರುವ ಸ್ವಗೃಹವರೆಗೆ ಮೆರವಣಿಗೆ ನಡೆಸಿ ಅಲ್ಲೂ ಕೂಡ ಸಾರ್ವಜನಿಕರ ದರ್ಶನಕ್ಕೆ ಕೆಲಕಾಲ ಇಡಲಾಯಿತು.
ನಂತರ ಪ್ರಾರ್ಥೀವ ಶರೀರವನ್ನು ಹೆಚ್‌ಡಿ ಕೋಟೆ ಸಮೀಪವಿರುವ ಟಿ ಕಾಟೂರು ಗ್ರಾಮದ ಫಾರಂ ಹೌಸ್‌ಗೆ ಕರೆ ತಂದು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
Comments are closed.