ಬೆಂಗಳೂರು: ಇಬ್ಬರು ಯುವಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದು ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಡಿ.ಜೆ.ಹಳ್ಳಿ ನಿವಾಸಿ ಫಯಾಜ್ಪಾಷ(35) ಕೊಲೆಯಾದ ದುರ್ದೈವಿ ಯುವಕ.
ಕಮರ್ಷಿಯಲ್ ಸ್ಟ್ರೀಟ್ನಲ್ಲಿನ ಬ್ಯಾಂಗಲ್ ಸ್ಟೋರ್ವೊಂದರಲ್ಲಿ ಸೇಲ್ಸ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಫಯಾಜ್ಪಾಷ ರಾತ್ರಿ ಕೆಲಸ ಮುಗಿಸಿಕೊಂಡು ಈದ್ಗಾ ಮೈದಾನದ ಬಳಿಯ ಹೋಟೆಲ್ನಲ್ಲಿ ಟೀ ಕುಡಿಯುತ್ತಾ ನಿಂತಿದ್ದನು. ಈ ವೇಳೆ ಪಕ್ಕದ ಅಂಗಡಿಯಲ್ಲಿ ಸಿಗರೇಟ್ ಖರೀದಿಸುತ್ತಿದ್ದ ಬಾಬಾ ಎಂಬಾತನನ್ನು ಗಮನಿಸಿದ್ದಾನೆ. ಇದನ್ನೇ ತಪ್ಪಾಗಿ ತಿಳಿದ ಬಾಬಾ, ನೀನು ಯಾಕೆ ನನ್ನನ್ನು ಗುರಾಯಿಸುತ್ತಿದ್ದೀಯಾ ಎಂದು ಮಾತಿಗಿಳಿದಾಗ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಜಗಳವಾಗಿದೆ.
ಈ ಸಂದರ್ಭದಲ್ಲಿ ಚಾಕುವಿನಿಂದ ಫಯಾಜ್ಪಾಷನ ಕಿಬ್ಬೊಟ್ಟೆಗೆ ಮನಬಂದಂತೆ ಇರಿದು ಬಾಬಾ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಈತನನ್ನು ಸ್ಥಳೀಯರು ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ರಾತ್ರಿ 9 ಗಂಟೆಯಲ್ಲಿ ಸಾವನ್ನಪ್ಪಿದ್ದಾನೆ. ಡಿ.ಜೆ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Comments are closed.