ಧಾರವಾಡ: ನವಲಗುಂದ ತಾಲೂಕಿನ ಯಮನೂರು ಹಾಗೂ ಅಳಗವಾಡಿಯಲ್ಲಿ ನಾಗರಿಕರು ಹಾಗೂ ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಅವರು 6 ಕಾನ್ಸ್ಟೆಬಲ್ ಗಳನ್ನು ಇಂದು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.
ಅಮಾನತುಗೊಂಡವರಲ್ಲಿ ಇಬ್ಬರು ವಿಜಯಪುರ, ಇಬ್ಬರು ಬೆಳಗಾವಿ ಹಾಗೂ ಇನ್ನಿಬ್ಬರು ನವಲಗುಂದ ದವರು ಎನ್ನಲಾಗಿದೆ. ಘಟನೆಯ ವಿಡಿಯೋ ನೋಡಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಈ 6 ಕಾನ್ಸ್ಟೇಬಲ್ಗಳ ಬಗ್ಗೆ ಸಮಗ್ರ ತನಿಖೆಗೆ ನಡೆಸಲಾಗುವುದೆಂದು ಅವರು ತಿಳಿಸಿದರು.
ಮಹದಾಯಿ ಮಧ್ಯಂತರ ತೀರ್ಪು ಕರ್ನಾಟಕದ ವಿರುದ್ಧ ಬಂದ ಹಿನ್ನಲೆಯಲ್ಲಿ ನವಲಗುಂದ ಯಮನೂರ ಹಾಗೂ ಅಳಗವಾಡಿಯಲ್ಲಿ ರೈತ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು.
ಈ ಸಂಬಂಧ ಬಂದ್ಗೆ ಕರೆ ನೀಡಲಾಗಿತ್ತು. ಆ ಸಮಯದಲ್ಲಿ ಬಂದೋಬಸ್ತ್ಗಾಗಿ ನೇಮಿಸಿದ್ದ ಪೊಲೀಸರು ಈ ಗ್ರಾಮಗಳಲ್ಲಿನ ಮನೆಗಳ ಬಾಗಿಲು ಮುರಿದು ಮನೆಯೊಳಗೆ ಹೊಕ್ಕು ಮಹಿಳೆಯರು ,ವಯೋವೃದ್ಧರು, ಮಕ್ಕಳನ್ನು ಹೊರಗೆ ಎಳೆದು ತಂದು ಮನಬಂದಂತೆ ಥಳಿಸಿದ್ದರು. ಈ ಬಗ್ಗೆ ಶಾಸಕರಾದ ಎನ್.ಎಚ್. ಕೋನರೆಡ್ಡಿ, ಬಸವರಾಜ ಹೊರಟ್ಟಿ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಆಗ್ರಹಿಸಿದ್ದರು. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನವಲಗುಂದ ಠಾಣೆಯ ಸಿ.ಪಿ.ಐ ಅರುಣಕುಮಾರ್, ಹಪ್ಪಳಿ, ಪಿ.ಎಸ್.ಐ. ಶಿವಯೋಗಿ ಲೋಹಾರ್ ಅವರುಗಳ ಅಮಾನತ್ತು ಮಾಡಲಾಗಿದ್ದು ಡಿವೈಎಸ್ಪಿ ಶರಣಪ್ಪ ಓಲೇಕಾರ್ ಅವರನ್ನು ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದೆ.
Comments are closed.