ಲಖ್ನೊ: ನಾಲ್ಕು ದಿನಗಳ ಹಿಂದೆ ಉತ್ತರ ಪ್ರದೇಶದ ಬುಲಂದ್ ಶರ್ಹ ನಲ್ಲಿ ತಾಯಿ- ಮಗಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ ಬರೇಲಿಯಿಂದ ವರದಿಯಾಗಿದ್ದ ಶಿಕ್ಷಕಿ ಮೇಲಿನ ಅತ್ಯಾಚಾರ ಪ್ರಕರಣ ಕಟ್ಟು ಕಥೆ ಎಂಬುದು ಪೊಲೀಸರ ತನಿಖೆಯಿಂದ ಸಾಬೀತಾಗಿದೆ.
ತಾನು ಪ್ರೀತಿಸಿದಾತನನ್ನು ವಿವಾಹವಾಗಲು ಬಯಸಿದ್ದ ಶಿಕ್ಷಕಿ, ಜಾತಿಯ ಕಾರಣಕ್ಕೆ ತನ್ನ ಮನೆಯವರು ವಿರೋಧ ವ್ಯಕ್ತಪಡಿಸಿದ್ದ ಕಾರಣ ಸಾಮೂಹಿಕ ಅತ್ಯಾಚಾರದ ಕಟ್ಟು ಕಥೆ ಕಟ್ಟಿದ್ದಳೆಂಬುದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ. ತನ್ನ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಶಿಕ್ಷಕಿಯ ತಾಯಿ ದೂರು ನೀಡಿದ ವೇಳೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಅತ್ಯಾಚಾರಕ್ಕೊಳಗಾಗಿದ್ದೇನೆಂದು ಹೇಳುತ್ತಿದ್ದ ಶಿಕ್ಷಕಿ, ಪದೇ ಪದೇ ತನ್ನ ಹೇಳಿಕೆ ಬದಲಾಯಿಸುತ್ತಿದ್ದುದು ಹಾಗೂ ಆಕೆ ಅತ್ಯಾಚಾರ ನಡೆದಿದೆ ಎಂದು ಹೇಳಿದ ಸ್ಥಳಕ್ಕೂ ಹಾಗೂ ಆಕೆಯ ಮೊಬೈಲ್ ಟವರ್ ಲೋಕೇಷನ್ ಗೂ ತಾಳೆಯಾಗದಿದ್ದ ಕಾರಣ ಅನುಮಾನಗೊಂಡ ಪೊಲೀಸರು ಆಕೆಯ ಪ್ರೇಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆಗ ಶಿಕ್ಷಕಿ ಹಾಗೂ ಆಕೆಯ ಪ್ರೇಮಿ ಇಬ್ಬರೂ ಸೇರಿ ಈ ಕಟ್ಟು ಕಥೆ ಕಟ್ಟಿರುವುದು ಬೆಳಕಿಗೆ ಬಂದಿದೆ. ತನ್ನ ಮೇಲೆ ಅತ್ಯಾಚಾರವೆಸಗಿ ಅದನ್ನು ಮೊಬೈಲ್ ನಲ್ಲಿ ದುಷ್ಕರ್ಮಿಗಳು ಚಿತ್ರೀಕರಿಸಿಕೊಂಡಿದ್ದರೆಂದು ಶಿಕ್ಷಕಿ ತಿಳಿಸಿದ್ದಳು. ಹೀಗೆ ಹೇಳಿದರೆ ಮನೆಯಲ್ಲಿ ವಿವಾಹವನ್ನು ಅನಿವಾರ್ಯವಾಗಿ ತನ್ನ ಪ್ರೇಮಿ ಜೊತೆ ನೆರವೇರಿಸುತ್ತಾರೆಂಬ ನಂಬಿಕೆ ಅವರದ್ದಾಗಿತ್ತು ಎನ್ನಲಾಗಿದೆ.
Comments are closed.