ನವದೆಹಲಿ: ರಿಯೋ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಭಾರತದ ಎಲ್ಲ ಅಥ್ಲೀಟ್‍ಗಳ ಬಗ್ಗೆ ಅಪಾರ ಹೆಮ್ಮೆ ಇದೆ ಎಂದು ಪ್ರಶಂಸಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, `ಫಲಿತಾಂಶದ ಬಗ್ಗೆ ಚಿಂತನೆಯ ಹೊರೆ ಬೇಡ’ ಎಂದು ಹೇಳಿ ಕ್ರೀಡಾಪಟುಗಳಿಗೆ ನೈತಿಕ ಸ್ಥೈರ್ಯ ತುಂಬಿದ್ದಾರೆ.
ತಮ್ಮ ವೈಯಕ್ತಿಕ ಟ್ವೀಟರ್ ಖಾತೆಯಿಂದ ಟ್ವೀಟ್ ಸರಣಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿರುವ ಮೋದಿ, ಸ್ವಾತಂತ್ರ್ಯ ಭಾಷಣದಲ್ಲಿ ಭಾರತೀಯ ಒಲಿಂಪಿಕ್ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬಬೇಕು ಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮಾಡಿರುವ ಮನವಿಯನ್ನು ಪ್ರಸ್ತಾಪಿಸಿದ್ದಾರೆ. `ನಾನು ಸಚಿನ್ ಅವರ ಮನವಿಗೆ ಪ್ರಶಂಸೆ ವ್ಯಕ್ತಪಡಿಸುತ್ತೇನೆ. ಇದಕ್ಕಾಗಿ ಆ.15ರ ಭಾಷಣದ ತನಕ ಏಕೆ ಕಾಯಬೇಕು. ಈಗಲೇ ನಮ್ಮ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬುತ್ತೇವೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ರಿಯೋದಲ್ಲಿ ಭಾಗವಹಿಸಿರುವ ಭಾರತದ ಎಲ್ಲ ಕ್ರೀಡಾಪಟುಗಳ ಬಗ್ಗೆ ಇಡೀ ದೇಶಕ್ಕೆ ಹೆಮ್ಮೆ ಇದೆ. ಅವರ ಅಪಾರ ಪರಿಶ್ರಮದಿಂದ ಅವರು ಒಲಂಪಿಕ್ ಕ್ರೀಡಾಕೂಟದಲ್ಲಿ ಸ್ಥಾನ ಪಡೆದಿದ್ದಾರೆ. ಸೋಲು-ಗೆಲುವು ಇವೆಲ್ಲವೂ ಜೀವನದ ಒಂದು ಭಾಗ ಎಂದು ಪ್ರಧಾನಿ ತಿಳಿಸಿದ್ದಾರೆ. ಅಲ್ಲಿರುವ ಭಾರತದ ಪಟುಗಳು ತಮ್ಮ ಪ್ರಯತ್ನಗಳನ್ನು ಮಂದುವರೆಸಲಿ. ದೃಢ ಸಂಕಲ್ಪದಿಂದ ಸ್ಪರ್ಧಿಸಿ. ಫಲಿತಾಂಶದ ಬಗ್ಗೆ ಚಿಂತೆಯ ಹೊರೆ ಬೇಡ’ ಎಂದು ಅವರು ಸ್ಥೈರ್ಯ ತುಂಬಿದ್ದಾರೆ.
Comments are closed.