ಕರ್ನಾಟಕ

ದಲಿತನೆಂಬ ಕಾರಣಕ್ಕೆ ರಾಷ್ಟ್ರ​ಧ್ವಜ ಹಾರಿ​ಸಲು ಅವ​ಕಾಶ ನಿರಾಕರಣೆ !

Pinterest LinkedIn Tumblr

flag

ಚಿತ್ರದುರ್ಗ: “ಎಲ್ಲಿಗೆ ಬಂತು, ಯಾರಿಗೆ ಬಂತು 47ರ ಸ್ವಾತಂತ್ರ್ಯ,” ಎಂಬ ಆಕ್ರೋಶದ ಕೂಗು ಅಗಾಗ ಅಲ್ಲಲ್ಲಿ ವ್ಯಕ್ತವಾಗುತ್ತಲೇ ಇರುತ್ತದೆ. ಇದಕ್ಕೆ ಇಂಬು ನೀಡುವ ಘಟನೆಯೊಂದು ಸಮಾಜ ಕಲ್ಯಾಣ ಸಚಿವರ ತವರು ಕ್ಷೇತ್ರ ಹೊಳಲ್ಕೆರೆ ತಾಲೂಕಿನ ತೊಡರನಹಾಳ್‌ನಲ್ಲಿ ನಡೆದಿದೆ. ದಲಿತರಿಗೆ ಯಾವೆಲ್ಲಾ ನಿರ್ಬಂಧಗಳಿವೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ. ತೊಡರನಹಾಳ್‌ನಲ್ಲಿರುವ ಶಾಲೆಯಲ್ಲಿ ರಾಷ್ಟ್ರಧ್ವಜ ಹಾರಿಸಲೂ ದಲಿತರೊಬ್ಬರಿಗೆ ಅವಕಾಶ ನೀಡದ ಪ್ರಸಂಗವೊಂದು ನಡೆದುಹೋಗಿದೆ.

ಶಾಲೆ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಹುದ್ದೆ ಅಲಂಕರಿಸಿದವರಿಗೆ ಅವರ ಶಾಲೆಯಲ್ಲಿ ಧ್ವಜಾರೋಹಣ ಮಾಡುವು ಹಕ್ಕು ನಿಯಮಾನುಸಾರವಾಗಿಯೇ ಲಭ್ಯ. ಆದರೆ, ತೊಡರನಹಾಳ್‌ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಹಂತೇಶ್‌ ಅವರು ದಲಿತ ಸಮುದಾಯದವರು. ಈ ಒಂದೇ ಕಾರಣಕ್ಕೆ ರಾಷ್ಟ್ರಧ್ವಜಾರೋಹಣ ಮಾಡುವ ಹಕ್ಕನ್ನು ಅವರಿಂದ ಕಸಿಯಲಾಗಿದೆ. ಮಹಂತೇಶ್‌ ಬದಲು ಗ್ರಾಮದ ಮೇಲ್ಜಾತಿಯ ವ್ಯಕ್ತಿಯೊಬ್ಬರ ಕೈಯಿಂದ ಸೋಮವಾರ ಪೊಲೀಸರು, ಊರಿನ ಮುಖಂಡರ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಿಸಲಾಗಿದೆ.

ಧ್ವಜಾರೋಹಣ ಮಾಡದಂತೆ ಗ್ರಾಮದ 30ಕ್ಕೂ ಹೆಚ್ಚು ಮಂದಿ ಸವರ್ಣೀಯರಿಂದ ನಾಲ್ಕು ದಿನಗಳಿಂದಲೂ ಮಹಂತೇಶ್‌ ಮೇಲೆ ಒತ್ತಡ ಹೇರಲಾಗಿತ್ತು ಎಂಬ ಆಂಶವೂ ಬಹೀರಂಗಗೊಂಡಿದೆ. ನಿಮಗೆ ಧ್ವಜಾರೋಹಣ ನೆರವೇರಿಸುವ ಹಕ್ಕು ಇಲ್ಲ ಎಂದು ಮಹಂತೇಶ್‌ರಿಗೆ ಅವರು ಎಚ್ಚರಿಕೆಯನ್ನೂ ನೀಡಲಾಗಿದೆ. ದಲಿತ ಸಮುದಾಯದ ವ್ಯಕ್ತಿಯೊಬ್ಬ ರಾಷ್ಟ್ರಧ್ವಜವನ್ನು ಹಾರಿಸುವುದು ಗ್ರಾಮದ ಕೆಲವರಿಗೆ ಇಷ್ಟವಿರಲಿಲ್ಲ. ಹೀಗಾಗಿ ಕೆಲ ಯುವಕರು ಯಾರ ಮಾತನ್ನೂ ಕೇಳದೆ ಪೊಲೀಸರ ಎದುರೇ ಊರಿನ ಹಿರಿಯ ವ್ಯಕ್ತಿಯೊಬ್ಬರಿಂದ ಧ್ವಜಾರೋಹಣ ಮಾಡಿಸಿದ್ದಾರೆ. ದಲಿತ ವ್ಯಕ್ತಿಯೊಬ್ಬರ ಕೈಯಿಂದ ಧ್ವಜಾರೋಹಣ ಮಾಡಿಸಬಾರದು ಎಂದು ಗ್ರಾಮದ ಕೆಲವರು ತೀರ್ಮಾನ ತೆಗೆದುಕೊಂಡದ್ದು ಶಿಕ್ಷಣ ಇಲಾಖೆ ಮತ್ತು ಪೊಲೀಸರು ಇಬ್ಬರಿಗೂ ಗೊತ್ತಿತ್ತು ಎನ್ನಲಾಗಿದೆ.

ಶಾಲೆಯಲ್ಲಿ 70 ವಿದ್ಯಾರ್ಥಿಗಳಿದ್ದು, ಆ ಪೈಕಿ 49 ವಿದ್ಯಾರ್ಥಿಗಳು ಹಿಂದುಳಿದ ವರ್ಗಕ್ಕೆ ಸೇರಿದವರು. ಮೇಲ್ಜಾತಿಗೆ ಸೇರಿದ 21 ವಿದ್ಯಾರ್ಥಿಗಳು ಈ ಶಾಲೆಯಲ್ಲಿದ್ದಾರೆ. ಈ ಘಟನೆಗೆ ಅಡ್ಡಿಪಡಿಸಿದ ವ್ಯಕ್ತಿಗಳ ಕುಟುಂಬದವರ ಮಕ್ಕಳು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದುತ್ತಿದ್ದಾರೆ. ಅಲ್ಲದೆ, ಬಡ ಮಕ್ಕಳ ಪೋಷಕರಿಗೆ ಶಾಲೆಯ ಅಭಿವೃದ್ಧಿ ವಿಚಾರದಲ್ಲಿ ಮೂಗು ತೂರಿಸದಂತೆ ಸವರ್ಣೀಯರು ಒತ್ತಡ ಹೇರುತ್ತಲೇ ಬಂದಿದ್ದಾರೆ.

ಇದೇ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯ ತಂದೆ ಎಂಬ ಕಾರಣಕ್ಕೆ ದಲಿತ ಕುಟುಂಬಕ್ಕೆ ಸೇರಿದ ಮಹಂತೇಶ್‌ ಅವರಿಗೆ ಎಸ್‌ಡಿಎಂಸಿ ಅಧ್ಯಕ್ಷರಾಗಲು ಅವಕಾಶ ನೀಡಲಾಗಿತ್ತು. ಆದರೆ ಅವರಿಗೆ ಯಾವುದೇ ಕೆಲಸ ಕಾರ್ಯ ನಿರ್ವಹಿಸಲು ಅವಕಾಶ ನೀಡಿರಲಿಲ್ಲ. ಸವರ್ಣೀಯರನ್ನು ಎದುರು ಹಾಕಿಕೊಂಡು ಊರಿನಲ್ಲಿ ಬದುಕುವುದು ಕಷ್ಟಎನ್ನುವ ಕಾರಣಕ್ಕೆ ಮಹಂತೇಶ್‌ ಅವರು ಈ ಅನ್ಯಾಯಗಳನ್ನು ಸಹಿಸಿಕೊಂಡು ಬಂದಿದ್ದರು.

ಅಧಿಕಾರಿಗಳೇ ಬರೆದು ಹೋಗಿದ್ದರು
ತೊಡರನಹಾಳ್‌ ಶಾಲೆಗೆ ಶನಿವಾರ ಸಂಜೆ ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎ. ತಿಮ್ಮಣ್ಣ, ವಲಯ ಸಂಪನ್ಮೂಲ ಅಧಿಕಾರಿ ಟಿ. ದಿನೇಶ್‌, ಕ್ಲಸ್ಟರ್‌ ಸಂಪನ್ಮೂಲ ಅಧಿಕಾರಿ ಸುಧಾಕರ್‌ ಭೇಟಿ ಪುಸ್ತಕದಲ್ಲಿ ಧ್ವಜಾರೋಹಣವನ್ನು ಎಸ್‌ಡಿಎಂಸಿ ಅಧ್ಯಕ್ಷರೇ ಮಾಡಬೇಕು. ಅವರ ಗೈರಿನಲ್ಲಿ ಮುಖ್ಯ ಶಿಕ್ಷಕರು ಧ್ವಜಾರೋಹಣ ನೆರವೇರಿಸಬೇಕು. ತಪ್ಪಿದಲ್ಲಿ ಮುಖ್ಯ ಶಿಕ್ಷಕರೇ ಹೊಣೆಗಾರರು ಎಂದು ನಮೂದಿಸಿದ್ದರು. ಹೀಗಿದ್ದರೂ ಸೋಮವಾರ ಬೆಳಗ್ಗೆ ಎಸ್‌ಡಿಎಂಸಿ ಅಧ್ಯಕ್ಷರು, ಪೊಲೀಸರು, ಮಾಧ್ಯಮ ಪ್ರತಿನಿಧಿಗಳು ಎಲ್ಲರೂ ಇದ್ದಾಗಲೂ ಊರಿನ ಸವರ್ಣೀಯರೊಬ್ಬರಿಂದ ಧ್ವಜಾರೋಹಣ ಮಾಡಿಸಲಾಗಿದೆ.

ಮಾಧ್ಯಮದವರ ಜತೆಗೂ ವಾಗ್ವಾದ: ಘಟನೆ ಕುರಿತು ವರದಿ ಮಾಡಲು ಹೋದ ಮಾಧ್ಯಮ ಪ್ರತಿನಿಧಿಗಳನ್ನು ಕಂಡ ಗ್ರಾಮಸ್ಥರು ನೀವೇಕೆ ಇಲ್ಲಿಗೆ ಬಂದಿದ್ದೀರಿ, ಯಾರು ನಿಮ್ಮನ್ನು ಕರೆಸಿದರು ಎಂದು ಪ್ರಶ್ನಿಸಿ ಕ್ಯಾಮೆರಾಗಳನ್ನು ಬಂದ್‌ ಮಾಡಿಸಿ ಹಲ್ಲೆಗೂ ಮುಂದಾದರು. ನಂತರ ಪೊಲೀಸರೇ ಮಧ್ಯ ಪ್ರವೇಶಿಸಿ ಬಿಡಿಸಿದರು.

ನಿಯಮ ಏನು ಹೇಳುತ್ತದೆ?
ಶಿಕ್ಷಣ ಇಲಾಖೆ ನಿಯಮಾನುಸಾರ ಸ್ವಾತಂತ್ರ್ಯ ದಿನದಂದು ಎಸ್‌ಡಿಎಂಸಿ ಅಧ್ಯಕ್ಷರೇ ಧ್ವಜಾರೋಹಣ ಮಾಡಬೇಕು. ಅವರ ಗೈರು ಹಾಜರಿಯಲ್ಲಿ ಮುಖ್ಯ ಶಿಕ್ಷಕರು ಧ್ವಜಾರೋಹಣ ಮಾಡಬಹುದು.

ಎಸ್’ಡಿಎಂಸಿ ಅಧ್ಯಕ್ಷರ ಪ್ರತಿಕ್ರಿಯೆ:
ರಾಜಿನಾಮೆ ಕೊಡುವಂತೆ ಮೊದಲಿನಿಂದಲೂ ಒತ್ತಡ ಇತ್ತು. ಯಾವ ಕೆಲಸವನ್ನೂ ಮಾಡದಂತೆ ನೋಡಿಕೊಳ್ಳಲಾಗಿತ್ತು. ಧ್ವಜಾರೋಹಣ ಮಾಡುವ ಅಧಿಕಾರ ನಿಮಗಿಲ್ಲ, ಯಾಕೆ ಧ್ವಜಾರೋಹಣ ಮಾಡುತ್ತೀರಿ ಎಂದು ಬೆದರಿಕೆಯನ್ನೂ ಹಾಕಿದ್ದರು. ಇದೇ ಊರಿನಲ್ಲಿ ಬದುಕಬೇಕು ಎಂಬ ಭಯದಿಂದ ಯಾವ ವಿಷಯವನ್ನೂ ಹೊರಗಡೆ ಹೇಳುವ ಸ್ಥಿತಿಯಲ್ಲಿ ನಾನಿಲ್ಲ ಎಂದು ಎಸ್’ಡಿಎಂಸಿ ಅಧ್ಯಕ್ಷ ಮಹಂತೇಶ್ ಹೇಳುತ್ತಾರೆ.

ಪೊಲೀಸ್ ಹೇಳೋದೇನು?
ಶನಿವಾರ ಸಂಜೆ ಇಲಾಖೆಯಿಂದ ಗ್ರಾಮದಲ್ಲಿ ಸಭೆ ನಡೆಸಲಾಗಿದೆ. ಊರಿನ ಹಿರಿಯರು ಧ್ವಜಾರೋಹಣ ಮಾಡಲಿ ನಿರ್ಧಾರ ಕೈಗೊಂಡ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಆದರೆ, ಎಸ್‌ಡಿಎಂಸಿ ಅಧ್ಯಕ್ಷರ ಮೇಲೆ ಒತ್ತಡ ತಂದಿದ್ದು ನಿಜವಾದರೆ ಯಾರು ಒತ್ತಡ ತಂದಿದ್ದಾರೋ ಅವರ ಮೇಲೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಒತ್ತಡ ತಂದಿದ್ದು ನಿಜವೇ ಆದರೆ ದೌರ್ಜನ್ಯ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್‌. ಅನುಚೇತ್‌ ತಿಳಿಸಿದ್ದಾರೆ.
(ಕನ್ನಡಪ್ರಭ)

Comments are closed.