ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಅತಿ ಹೆಚ್ಚು ಕಾಡುತ್ತವೆ. ದೇಹದ ರೋಗ ನಿರೋಧಕ ಶಕ್ತಿಗಳು ಕುಂಠಿತಗೊಳ್ಳುತ್ತವೆ. ಹಾಗಾಗಿ ಅಗತ್ಯ ಮುನ್ನೆಚ್ಚರಿಕೆ ವಹಿಸಿದರೆ ಮುಂಗಾರು ಮಳೆಯ ಸಂದರ್ಭದಲ್ಲಿ ಬರುವ ರೋಗಗಳನ್ನು ದೂರ ಇಡಬಹುದು.
ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ರೋಗದಲ್ಲಿ ಮಲೇರಿಯಾಗೆ ಮೊದಲ ಸ್ಥಾನ. ಮಲೇರಿಯಾಗೆ ಮುಖ್ಯ ಕಾರಣ ಸೊಳ್ಳೆ. ಹಾಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ ಸೊಳ್ಳೆಯ ಉತ್ಪತ್ತಿಯನ್ನು ತಡೆಯಬಹುದು. ಮಲಗುವಾಗ ಸೊಳ್ಳೆ ಪರದೆ ಹಾಗೂ ಸೊಳ್ಳೆ ನಿರೋಧಕಗಳನ್ನು ಬಳಸುವುದರಿಂದ ಸೊಳ್ಳೆಯಿಂದ ಬರುವ ರೋಗಗಳಿಂದ ಪಾರಾಗಬಹುದು. ಆದಷ್ಟು ಪರಿಸರವನ್ನು ಸ್ವಚ್ಛವಾಗಿರಿಸಿ ಸೊಳ್ಳೆ ಉತ್ಪತ್ತಿಯನ್ನು ತಡೆದರೆ ಮಲೇರಿಯಾದಿಂದ ದೂರವಿರಬಹುದು.
ಮಳೆಗಾಲದ ಸಂದರ್ಭದಲ್ಲಿ ಅತಿಸಾರ ಬೇಧಿಯೂ ಹಲವರಲ್ಲಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಅನಾರೋಗ್ಯಕರ ಕೊಳಕು ಆಹಾರ, ಇಲ್ಲವೆ ಅಶುದ್ಧವಾದ ನೀರು ಕುಡಿಯುವುದು. ಈ ಅತಿಸಾರದಲ್ಲಿ ಎರಡು ವಿಧಗಳಿವೆ. ಒಂದು ತೀಕ್ಷ್ಮ ಮತ್ತೊಂದು ದೀರ್ಘಕಾಲಿಕ. ಈ ಅತಿಸಾರವನ್ನು ತಡೆಯಲು ಆದಷ್ಟು ಶುದ್ಧವಾದ ನೀರನ್ನು ಕುಡಿಯಬೇಕು. ಹಾಗೆಯೇ ಸ್ವಚ್ಛ ಪರಿಸರದಲ್ಲಿ ಆಹಾರ ಸೇವನೆ ಮುಖ್ಯ. ಆಹಾರ ತಿನ್ನುವ ಮುನ್ನ ಕೈಕಾಲುಗಳನ್ನು ತೊಳೆದು ಆಹಾರ ಸೇವಿಸುವುದರಿಂದ ಅತಿಸಾರ ಸಮಸ್ಯೆಯನ್ನು ದೂರವಿಡಬಹುದು.
ಮಳೆಗಾಲದಲ್ಲಿ ಡೆಂಗ್ಯೂ ಹಾಗೂ ಚಿಕನ್ ಗುನ್ಯಾಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಸೊಳ್ಳೆಯಿಂದ ದೂರವಿದ್ದಷ್ಟೂ ಡೆಂಗ್ಯೂ ಹಾಗೂ ಚಿಗನ್ ಗುನ್ಯಾವನ್ನು ತಡೆಯಬಹುದು.
ಮಳೆಗಾಲದಲ್ಲಿ ಟೈಫಾಯಿಡ್ ಸಹ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಶುದ್ಧ ನೀರು ಹಾಗೂ ಆಹಾರ ಸೇವನೆಯಿಂದ ಟೈಪಾಯಿಡ್‌ನ್ನು ದೂರ ಇಡಬಹುದು. ಆದಷ್ಟು ಕಾಯಿಸಿ ಆರಿಸಿದ ನೀರನ್ನು ಬಳಸುವುದರಿಂದ ಟೈಫಾಯಿಡ್ ಬಾರದಂತೆ ಎಚ್ಚರ ವಹಿಸಬಹುದು.
ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಆಹಾರ, ಪಾನೀಯಗಳನ್ನು ಸೇವಿಸಬಾರದು. ಇದರಿಂದ ಆರೋಗ್ಯ ಕೆಡುವ ಸಾಧ್ಯತೆ ಹೆಚ್ಚು.
ಮಳೆಗಾಲದಲ್ಲಿ ಸಾಮಾನ್ಯವಾಗಿ ಎಲ್ಲರಲ್ಲೂ ವೈರಲ್ ಜ್ವರ ಕಾಣಿಸಿಕೊಳ್ಳುತ್ತದೆ. ವೈರಲ್ ಜ್ವರ ಸಾಮಾನ್ಯವಾಗಿ 3 ರಿಂದ 7 ದಿನಗಳವರೆಗೂ ಇರುತ್ತದೆ. ಜ್ವರದ ಜೊತೆ ಶೀತ ಮತ್ತು ಕೆಮ್ಮು ಬರಬಹುದು. ವೈದ್ಯರನ್ನು ಸಂಪರ್ಕಿಸಿ ಅಗತ್ಯ ಔಷಧೋಪಚಾರಗಳಿಂದ ಇದನ್ನು ನಿಯಂತ್ರಿಸಬಹುದು.
ಮಾರಣಾಂತಿಕ ಎಂದು ಹೇಳಬಹುದಾದ ಕಾಲರ ಸಹ ಮುಂಗಾರಿನಲ್ಲಿ ಅತಿಯಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಅಶುದ್ಧ ನೀರು ಹಾಗೂ ಕೊಳಕು ಆಹಾರ ಸೇವನೆ. ಅತಿಯಾದ ಬೇಧಿ, ವಾಂತಿ ಕಾಲರಾದ ಲಕ್ಷಣಗಳು. ಈ ಲಕ್ಷಣಗಳು ಕಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದರೆ ಕಾಲರಾದಿಂದ ಪಾರಾಗಬಹುದು.
Comments are closed.