ಕರ್ನಾಟಕ

ಮುಂದಿನ 2 ದಿನ ಕಾಲ 6 ಸಾವಿರ ಕ್ಯೂಸೆಕ್ ನೀರು ಬಿಡಲು ಕರ್ನಾಟಕಕ್ಕೆ ‘ಸುಪ್ರೀಂ’ ಆದೇಶ; ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿಕೆ

Pinterest LinkedIn Tumblr

kaveri

ನವದೆಹಲಿ: ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದ ಮುಂದಿನ 2 ದಿನ 6 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶಿಸಿ, ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿದೆ.

ಸೆ.20ರ ಆದೇಶವನ್ನು ಮಾರ್ಪಡಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿ ಉದಯ್ ಲಲಿತ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ಸೆ.20ರ ಆದೇಶವನ್ನು ಯಾವ ರೀತಿ ಪಾಲಿಸುತ್ತೀರಿ? ಎಂದು ರಾಜ್ಯದ ಪರ ಹಿರಿಯ ವಕೀಲ ಫಾಲಿ ಎಸ್. ನಾರಿಮನ್ ಅವರನ್ನು ಪ್ರಶ್ನಿಸಿತು.

ನವೆಂಬರ್ 2016ರವರೆಗೂ ತಮಿಳುನಾಡಿಗೆ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ವಾದ ಮಂಡಿಸಿದ ನಾರಿಮನ್ ಅವರು, ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ. ಹೀಗಾಗಿ ವಿಧಾನಮಂಡಲ ಅಧಿವೇಶನ ಕಾವೇರಿ ನೀರು ಕುಡಿಯಲು ಮಾತ್ರ ಬಳಸಲಾಗುವುದು ಎಂಬ ನಿರ್ಣಯ ತೆಗೆದುಕೊಂಡಿದೆ. ಸದನದ ನಿರ್ಣಯ ಸುಪ್ರೀಂಕೋರ್ಟ್ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ತಮಿಳುನಾಡು ಪರ ವಕೀಲರು, ನೀರು ಬಿಡಬೇಕೆಂಬ ಕೋರ್ಟ್ ಆದೇಶ ಯಾಕೆ ಪಾಲಿಸಲಿಲ್ಲ? ಎಂದು ಕರ್ನಾಟಕವನ್ನು ಪ್ರಶ್ನಿಸಿದರು. ಅಲ್ಲದೆ ನೀರು ಬಿಡುವವರೆಗೂ ಕರ್ನಾಟಕದ ವಾದವನ್ನು ಆಲಿಸಬಾರದು ಮತ್ತು ಬೆಂಗಳೂರಿಗೆ ಕಾವೇರಿ ನೀರು ಕೇಳುವುದು ಸರಿಯಲ್ಲ ಎಂದು ವಾದಿಸಿದರು.

ವಾದ ಪ್ರತಿವಾದ ಆಲಿಸಿದ ಕೋರ್ಟ್, ತಮಿಳುನಾಡಿಗೆ ನಾಳೆ ಮತ್ತು ನಾಡಿದ್ದು ನಿತ್ಯ 6 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಆದೇಶಿಸಿ, ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿದೆ. ಅಲ್ಲದೆ ನಿಮ್ಮ ನಿರ್ಣಯ ಏನೇ ಇದ್ದರೂ ಮೊದಲು ಕೋರ್ಟ್ ಆದೇಶವನ್ನು ಪಾಲಿಸಿ ಮತ್ತು ನೀರು ಹರಿಸುವಂತೆ ಎಂದು ರಾಜ್ಯ ಸರ್ಕಾರಕ್ಕೆ ಸ್ಪಷ್ಟವಾಗಿ ಸೂಚಿಸಿದೆ.

Comments are closed.