ಪ್ರಮುಖ ವರದಿಗಳು

ಮೋದಿ ಕನಸಿನ ಬುಲೆಟ್​ ಟ್ರೈನಿಗೆ ಲೋಗೊ ರಚಿಸಿದ ವಿದ್ಯಾರ್ಥಿಯ ಹಿಂದಿನ ಕತೆಯನ್ನೊಮ್ಮೆ ಕೇಳಿ…

Pinterest LinkedIn Tumblr

ಹೈದರಾಬಾದ್: ಈ ವಿದ್ಯಾರ್ಥಿ ಅಂತಿಮ ನಗೆ ಸೂಸುವ ಮುನ್ನ ಬರೋಬ್ಬರಿ 30 ಲೋಗೊ ವಿನ್ಯಾಸಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದರೆ ಒಂದರಲ್ಲಿಯೂ ವಿಜೇತರಾಗಿರಲಿಲ್ಲ. ಆದರೂ ನಿರುತ್ಸಾಹಗೊಳ್ಳದೆ 31ನೇ ಬಾರಿ ಮತ್ತೊಂದು ಸ್ಪರ್ಧೆಯಲ್ಲಿ ಭಾಗವಹಿಸಿದರು. ಈ ಬಾರಿ ಅದೃಷ್ಟ ಅವರ ಕೈ ಹಿಡಿಯಿತು. ಮುಂಬೈ-ಅಹಮದಾಬಾದ್​ ನಡುವೆ ಚಿರತೆಯ ವೇಗದಲ್ಲಿ ಓಡಲಿರುವ ಬುಲೆಟ್​ ಟ್ರೈನಿಗೆ ಇವರು ರಚಿಸಿರುವ ಲೋಗೊ ಆಯ್ಕೆಗೊಂಡಿತು.

ಇದು ಚಕ್ರಧರ್​ ಆಲಾ ಎಂಬ ವಿದ್ಯಾರ್ಥಿಯ ಕತೆ. ಇವರು ನ್ಯಾಶನಲ್​ ಇನ್ಟಿಟ್ಯೂಟ್​ ಆಫ್​ ಡಿಸೈನ್​ನ ಎರಡನೇ ವರ್ಷದ ವಿದ್ಯಾರ್ಥಿ. ಇವರು ರಚಿಸಿರುವ ಚಿರತೆಯ ಲೋಗೊ ಇನ್ನು ಬುಲೆಟ್​ ಟ್ರೈನಿನ ಮೇಲೆ ರಾರಾಜಿಸಲಿದೆ.

ರೈಲು ಸೇರಿದಂತೆ ಸರ್ಕಾರದ ಎಲ್ಲ ಬುಲೆಟ್​ ರೈಲು ದಾಖಲೆಗಳು, ನಿಲ್ದಾಣಗಳು, ಟಿಕೆಟ್​ಗಳ ಮೇಲೆ ನನ್ನ ವಿನ್ಯಾಸವನ್ನು ನೋಡಲು ಕಾತರಿಸುತ್ತಿದ್ದೇನೆ ಎಂದು ಚಕ್ರಧರ್​ ಅತ್ಯುತ್ಸಾಹದಿಂದ ಹೇಳುತ್ತಾರೆ. ಅಂದ ಹಾಗೆ ಬುಲೆಟ್​ ರೈಲು ತನ್ನ ಯಾನವನ್ನು 2022ರ ಆಗಸ್ಟ್​ನಿಂದ ಪ್ರಾರಂಭಿಸಲಿದೆ

ಲೋಗೊ ಮ್ಯಾನ್ ಚಕ್ರಧರ್​ ಆಲಾ!
ಲೋಗೊ ಬಗ್ಗೆ ಮಾತನಾಡುವ ಅವರು ಅದರ ಸಣ್ಣ ಸಣ್ಣ ವಿವರಗಳನ್ನು ಹೇಳುತ್ತಾ ಹೋಗುತ್ತಾರೆ. ಲೋಗೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ರೈಲು ಸಂಚಾರಿ ಮ್ಯಾಪ್​ನಂತೆ ಗೋಚರಿಸುತ್ತದೆ. ಮತ್ತು ಅದರಲ್ಲಿರುವ ಸಣ್ಣ ಚುಕ್ಕೆಗಳು ಮಾರ್ಗ ಮಧ್ಯದ ರೈಲು ನಿಲ್ದಾಣಗಳನ್ನು ಪ್ರತಿಬಿಂಬಿಸುತ್ತವೆ. ಇನ್ನು ಪ್ರಧಾನವಾಗಿ ಕಾಣುವ ಚಿರತೆಯ ಚಿತ್ರ ವೇಗ, ವಿಶ್ವಾಸಾರ್ಹತೆ ಮತ್ತು ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎನ್ನುತ್ತಾರೆ.

ಲೋಗೋಗಳ ಚಕ್ರಸುಳಿ ಚಕ್ರಧರ್​:
ಚಕ್ರಧರ್​ ಮೂಲತಃ ಹೈದರಾಬಾದ್​ನವರು. ಅವರ ತಂದೆ ಸರ್ಕಾರಿ ಅಧಿಕಾರಿ ಮತ್ತು ತಾಯಿ ಶಾಲೆಯ ಪ್ರಿನ್ಸಿಪಾಲ್​ ಆಗಿದ್ದಾರೆ. ಬಾಲ್ಯದಿಂದಲೇ ಲೋಗೊ ವಿನ್ಯಾಸದ ಗೀಳು ಹಚ್ಚಿಕೊಂಡಿದ್ದ ಚಕ್ರಧರ್​ ಅವರನ್ನು ಕುಟುಂಬದವರು ಹಾಗೂ ಗೆಳೆಯರು ಲೋಗೊ ಮ್ಯಾನ್​ ಎಂದೇ ಕರೆಯುತ್ತಿದ್ದರು.

ಚಕ್ರಧರ್​ ಪೋರ್ಟ್​ ಫೋಲಿಯೋ ನೋಡಿಬಿಟ್ಟರೆ ಅದರ ತುಂಬಾ ಬರೀ ಲೋಗೋಗಳ ಚಕ್ರಸುಳಿಯೇ ಕಾಣಿಸಿಕೊಳ್ಳುತ್ತದೆ. ಅದು MyGov.in ಪೋರ್ಟಲ್​ಗಾಗಿ ರಚಿಸಿದ ಲೋಗೊಗಳಿಂದ ತುಂಬಿದೆ. ಇದರ ಬಗ್ಗೆ ಹೆಮ್ಮೆಪಡುವ ಅವರು ಸ್ವಚ್ಛ ಭಾರತ, ಬೇಟಿ ಬಚಾವ್​ ಸೇರಿದಂತೆ ಹಲವಾರು ಯೋಜನೆಗಳಿಗಾಗಿ ಲೋಗೊ ರಚಿಸಿದ್ದೇನೆ. ಬುಲೆಟ್​ ರೈಲಿಗೆ ವಿನ್ಯಾಸಗೊಳಿಸಿದ ಚಿರತೆಯ ಲೋಗೊ ನನ್ನ ಮೊದಲ ಗೆಲುವು. ಅದಕ್ಕೂ ಮುನ್ನಾ ಸ್ಪರ್ಧೆಗಳಲ್ಲಿ ಅಂತಿಮ ಸುತ್ತುಗಳಿಗೆ ಆಯ್ಕೆಯಾಗುತ್ತಿದೆ. ಆದರೆ ನಿರಾಶೆ ಕಟ್ಟಿಟ್ಟಬುತ್ತಿಯಾಗುತ್ತಿತ್ತು. ಇದೀಗ… ಸಂತೋಷಕ್ಕೆ ಪಾರವೇ ಇಲ್ಲ ಎಂಬಂತಾಗಿದೆ ಎನ್ನುತ್ತಾರವರು!

Comments are closed.