ಕುಂದಾಪುರ: ಮುಂಬರುವ ವಿಧಾನಸಭೆ ಚುನಾವಣೆ ಬೆನ್ನಲ್ಲೇ ಕೆಲವಾರು ತಿಂಗಳುಗಳಿಂದ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ವಪಕ್ಷದಲ್ಲೇ ಗೊಂದಲಗಳಿದ್ದು, ಇದಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಮಹತ್ತರ ಬೆಳವಣಿಗೆಯೊಂದು ನಡೆದಿದೆ. ಈ ಹಿಂದೆ ಕುಂದಾಪುರ ಕ್ಷೇತ್ರದಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ದೊಡ್ಡ ಅಂತರದಲ್ಲಿ ಗೆದ್ದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿಗೆ ಮರಳುವ ಗೊಂದಲಕ್ಕೆ ಅಧೀಕ್ರತ ತೆರೆ ಬಿದ್ದಂತಾಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಶಾಸಕ ಹಾಲಾಡಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿರುವುದು. ಎಸ್……ಮಂಗಳವಾರ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದು, ರಾಜಿನಾಮೆ ಅಂಗೀಕಾರದ ಬಳಿಕ ಬಿಜೆಪಿ ಪಕ್ಷ ಸೇರಲಿದ್ದಾರೆ.
ಮಂಗಳವಾರ ವಿಧಾನ ಸಭೆ ಸ್ಪೀಕರ್ ಕೋಳಿವಾಡ ಅವರ ರಾಣಿಬಿನ್ನೂರು ನಿವಾಸಕ್ಕೆ ತೆರಳಿ ಹಾಲಾಡಿಯವರು ರಾಜಿನಾಮೆ ನೀಡಿದ್ದಾರೆ.
ಬಿಜೆಪಿ ಸೇರ್ಪಡೆ ಯಾವಾಗ?
ಸದ್ಯ ವಿಧಾನ ಸಭಾ ಸ್ಪೀಕರ್ ಅವರ ಬಳಿ ರಾಜಿನಾಮೆ ಸಲ್ಲಿಸಲು ನಿರ್ಧರಿಸಿದ್ದು, ಅವರು ರಾಣಿಬೆನ್ನೂರು ತಮ್ಮ ಮನೆಗೆ ಬರಲು ತಿಳಿಸಿದ್ದಾರೆ. ಅವರ ಮನೆಗೆ ತೆರಳಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಲಿದ್ದೇನೆ. ರಾಜಿನಾಮೆ ಅಂಗೀಕಾರದ ನಂತರ ಬಿಜೆಪಿ ಪಕ್ಷ ಸೇರಲಿದಿದ್ದು, ಎಂದು ಹಾಗೂ ಎಲ್ಲಿ ಎನ್ನುವದನ್ನು ಬಳಿಕ ನಿರ್ಧಾರ ಮಾಡುವುದಾಗಿ ಹಾಲಾಡಿ ಹೇಳಿದ್ದಾರೆ.
ಬಿಜೆಪಿಗೆ ಬೈ ಹೇಳಿದ್ದ ಹಾಲಾಡಿ…!
ಮೂರು ಬಾರಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ವಿಜಯಿಯಾಗಿ ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಈ ಹಿಂದಿನ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಸಚಿವ ಸ್ಥಾನ ಕೈತಪ್ಪಿದ ಕಾರಣ ಮುನಿಸಿಕೊಂಡಿದ್ದರು. ಸಚಿವ ಸ್ಥಾನ ನೀಡುವುದಾಗಿ ಬೆಂಗಳೂರಿಗೆ ಕರೆಸಿಕೊಂಡು ಸಚಿವ ಸ್ಥಾನ ನೀಡದಿರುವುದು ಅವರನ್ನು ಸಹಿತ ಅವರ ಬೆಂಬಲಿಗರನ್ನು ಅಭಿಮಾನಿಗಳ ಮನಸ್ಸಿಗೆ ನೋವುಂಟು ಮಾಡಿತ್ತು. ಇದರಿಂದ ಬೇಸತ್ತ ಹಾಲಾಡಿ ಶಾಸಕ ಹಾಗೂ ಬಿಜೆಪಿ ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿದ್ದರು. ಮುಂದಿನ ಬೆಳವಣಿಗೆಯಲ್ಲಿ ಹಾಲಾಡಿ ಪರವಾಗಿ ನಿಂತ ಅಭಿಮಾನಿಗಳು ಬಂದ್ ನಡೆಸಿ ಪ್ರತಿಭಟಿಸಿದ್ದರು. ಇದು ರಾಜ್ಯ ಮಟ್ಟದಲ್ಲಿ ಹಾಲಾಡಿ ವರ್ಚಸ್ಸು ಏನೆಂಬುದನ್ನು ಸಾಭೀತು ಮಾಡಿತ್ತು. ಈ ಹಿಂದಿನ ಚುನಾವಣೆಯಲ್ಲಿ ಕುಂದಾಪುರ ವಿಧಾನ ಸಭೆಗೆ ಪಕ್ಷೇತರರಾಗಿ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿರುದ್ಧ ೪೦ ಸಾವಿರಕ್ಕೂ ಮಿಕ್ಕ ಮತಗಳ ಅಂತರಿದಿಂದ ಗೆಲವು ಸಾಧಿಸಿದ್ದರು.
ಹಾಲಾಡಿಗೆ ಬಿಜೆಪಿ ಬುಲಾವ್!
ಕಳೆದ ಚುನಾವಣೆ ಸಂದರ್ಭ ಹಾಲಾಡಿ ಬಿಜೆಪಿ ಪಕ್ಷ ತೊರೆದಿದ್ದು ಅವರನ್ನು ಮತ್ತೆ ಬಿಜೆಪಿಗೆ ಕರೆತರುವ ಪ್ರಯತ್ನವನ್ನೂ ರಾಜ್ಯ ಹಾಗೂ ರಾಷ್ಟ್ರ ಬಿಜೆಪಿ ಮುಖಂಡರು ಮಾಡಿದರೂ ಇದಕ್ಕೆ ಹಾಲಾಡಿ ಸುತರಾಂ ಒಪ್ಪಿರಲಿಲ್ಲ. ಈ ಹಿಂದೆಯೇ ಬಿ.ಎಸ್. ಯಡಿಯೂರಪ್ಪ, ಸದಾನಂದ ಗೌಡ, ಸುರೇಶ್ ಕುಮಾರ್, ಶೋಭಾ ಕರಂದ್ಲಾಜೆ ಹಾಗೂ ಇನ್ನಿತರ ಮುಖಂಡರು ಹಾಲಾಡಿ ಮನೆಗೆ ಖುದ್ದು ಭೇಟಿ ನೀಡಿ ಅವರನ್ನು ಬಿಜೆಪಿಗೆ ಮರಳಿ ಕರೆತರುವ ಸರ್ವ ಪ್ರಯತ್ನ ಮಾಡಿದ್ದರೂ ಅದಕ್ಕೆ ಹಾಲಾಡಿ ಬಗ್ಗಿರಲಿಲ್ಲ. ಕಳೆದ ಲೋಕಸಭೆ ಚುನಾವಣೆ ಸಮಯದಲ್ಲಿ ಕೂಡಾ ಹಾಲಾಡಿ ಬಿಜೆಪಿಗೆ ಕರೆತರುವ ಪ್ರಯತ್ನ ನಡೆದಿದ್ದರೂ, ತಾಂತ್ರಿಕ ಕಾರಣದ ಹಿನ್ನೆಲೆಯಲ್ಲಿ ಹಾಲಾಡಿ ಬಿಜೆಪಿ ಸೇರಿರಲಿಲ್ಲ. ಆದರೆ ಜಿಪಂ, ತಾಪಂ, ಹಾಗೂ ಗ್ರಾಪಂ, ರಾಜ್ಯ ಸಭಾ ಚುನಾವಣೆಯಲ್ಲಿ ಹಾಲಾಡಿ ಪರೋಕ್ಷವಾಗಿಯೇ ಬಿಜೆಪಿ ಬೆಂಬಲಿಸಿದ್ದರು.
ಬಿಜೆಪಿ ಬಗ್ಗೆ ಹಾಲಾಡಿಗೆ ಒಲವು!
ಕಳೆದ ನಾಲ್ಕೂವರೆ ವರ್ಷಗಳಿಂದಲೂ ಪಕ್ಷೇತರ ಶಾಸಕರಾಗಿರುವ ಹಾಲಾಡಿ ಬಿಜೆಪಿಯನ್ನು ಬೈದವರಲ್ಲ. ಬದಲಾಗಿ ಈ ಬಾರಿ ಮಾತ್ರ ಪಕ್ಷೇತರನಾಗಿರುವೆ…ಮುಂದಿನ ಅವಧಿಯಲ್ಲಿ ನಾನು ಪಕ್ಷ ಸೇರ್ಪಡೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವೆ ಎಂದಿದ್ದರು. ಅದರಂತೆಯೇ ಎಲ್ಲಾ ಚುನಾವಣೆಯಲ್ಲಿಯೂ ಅವರ ಬೆಂಬಲಿಗರೊಡಗೂಡಿ ಬಿಜೆಪಿಗೆ ‘ಸಪೋರ್ಟ್’ ಮಾಡಿದ್ದರು. ಐದಾರು ತಿಂಗಳ ಹಿಂದೆ ಮಾಧ್ಯಮಕ್ಕೆ ಹೇಳಿಕೆ ನೀಡಿದ ಸಂದರ್ಭವೂ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಒಲವು ತಳ್ಳಿಹಾಕಿದ್ದ ಹಾಲಾಡಿ ಬಿಜೆಪಿ ಬಗ್ಗೆ ಅತೀವ ಒಲವು ತಾಳಿದ್ದಾರೆಂಬುದು ಗಮನಿಸಬೇಕಾದ ಸಂಗತಿ. ಇತ್ತೀಚೆಗೆ ಕುಂದಾಪುರದಲ್ಲಿ ನಡೆದ ಪರಿವರ್ತನಾ ಯಾತ್ರೆ ಹಾಗೂ ಕೋಡಿ ಬೀಚ್‌ನಲ್ಲಿ ನಡೆದ ಬಿಜೆಪಿ ಮತ್ಸ್ಯ ಸಂಗಮ, ಕೋಟೇಶ್ವರದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮ ಸೇರಿದಂತೆ ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಬ್ರಹತ್ ಸಮಾವೇಶದಲ್ಲಿ ಹಾಲಾಡಿ ಭಾಗಿಯಾಗಿದ್ದು ವಿಶೇಷ.
2 ಬಾರಿ ಅವಧಿ ಮೊದಲು ರಾಜಿನಾಮೆ..!
ಹಲವು ತಿಂಗಳಿನಿಂದಲೂ ಹಾಲಾಡಿ ಚುನಾವಣೆ ಘೋಷಣೆ ಬಳಿಕ ಬಿಜೆಪಿ ಸೇರುತ್ತಾರೆ ಎನ್ನುವ ಮಾತು ಕೇಳಿಬಂದಿತ್ತು. ಈ ಹಿಂದೆಯೂ ಇವರು ಶಾಸಕ ಸ್ಥಾನದ ಅವಧಿಗೂ ಮುನ್ನಾ ರಾಜಿನಾಮೆ ಸಲ್ಲಿಸಿದ್ದರು. ಈ ಬಾರಿ ಕೂಡ ನಾಕು ತಿಂಗಳು ಅವಧಿ ಇರುವಾಗಲೇ ರಾಜಿನಾಮೆ ನೀಡಿದ್ದು ಎರಡು ಬಾರಿಯೂ ಅವಧಿಗೂ ಮುನ್ನಾ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಈ ವಿಚಾರವನ್ನು ಹಾಲಾಡಿ ವಿರೋಧಿ ಬಣದವರು ಚರ್ಚೆ ಮಾಡುತ್ತಿದ್ದು ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅಜಾತ ಶತ್ರುವಿಗೂ ಶತ್ರುಗಳು!!
ಕುಂದಾಪುರದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಹಾಲಾಡಿ ಬಿಜೆಪಿಗೆ ಬರುತ್ತಾರೆ, ಅವರು ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆ ಅಖಾಡಕ್ಕೆ ದುಮುಕುತ್ತಾರೆಂಬ ಬಹಿರಂಗ ಹೇಳಿಕೆಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೀಡಿದ್ದರು. ಇದನ್ನು ಹಾಲಾಡಿ ವಿರೋಧಿ ಬಣ ವಿರೋಧಿಸಿದ್ದು, ಯಡಿಯೂರಪ್ಪ ಎದುರೇ ಅಸಮಾಧಾನ ಸ್ಪೋಟಗೊಂಡಿತ್ತು. ಮುಂದುವರಿದ ಬೆಳವಣಿಗೆಯಲ್ಲಿ ಸಮಾಜಿಕ ಜಾಲತಾಣದಲ್ಲಿ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆಯ ಮಾನಹಾನಿಕರ ಫೋಟೋ ಹಾಕಿದ ಹಿನ್ನೆಲೆಯಲ್ಲಿ ಮೂಲ ಬಿಜೆಪಿಗರು ಎಂದು ಗುರುತಿಸಿಕೊಂಡವರ ಮೇಲೆ ದೂರು ದಾಖಲಾಗಿತ್ತು.
ಮೂಲ ಬಿಜೆಪಿಗರು ಈ ಬಗ್ಗೆ ಏನಂತಾರೆ?
‘ಪಕ್ಷಕ್ಕೆ ಯಾರು ಬೇಕಾದರೂ ಬರಬಹುದು, ಯಾರೂ ಬಂದರೂ ಬರಲಿ…ನಾವು ಸ್ವಾಗತಿಸುತ್ತೇವೆ. ಆದರೆ ಟಿಕೆಟ್ ಆಂಕಾಂಕ್ಷಿಯಾಗಿ ಪಕ್ಷಕ್ಕೆ ಬರುವುದು ಸರಿಯಲ್ಲ. ಕ್ಷೇತ್ರದಲ್ಲಿ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಗೆ ಈ ಬಾರಿ ಹೈಕಮಾಂಡ್ ಟಿಕೆಟ್ ನೀಡುವುದು ಗ್ಯಾರೆಂಟಿ. ಯಾರಿಗೆ ಬಿಜೆಪಿಯಿಂದ ಅವಕಾಶ ಸಿಕ್ಕರೂ ಎಲ್ಲರೂ ಒಗ್ಗೂಡಿ ಬಿಜೆಪಿ ಗೆಲುವಿಗೆ ಪ್ರಯತ್ನ ಮಾಡುವ ಇಚ್ಚಾಶಕ್ತಿ ಅಗತ್ಯವಾಗಿದೆ ಎಂದು ಬಿಜೆಪಿ ಮುಖಂಡ, ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ ಹೇಳಿಕೆ ನೀಡಿದ್ದಾರೆ.
ವರದಿ- ಯೋಗೀಶ್ ಕುಂಭಾಸಿ
Comments are closed.