ಹೈದರಾಬಾದ್: ಮೂತ್ರ ಮಿಶ್ರಿತ ಹಣ್ಣಿನ ಜ್ಯೂಸ್ನ್ನು ವಿದ್ಯಾರ್ಥಿಗೆ ಒತ್ತಾಯಪೂರ್ವಕವಾಗಿ ಕುಡಿಸಿದ ದೈಹಿಕ ಶಿಕ್ಷಕನನ್ನು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.
ವಿಜಯ್ ಕುಮಾರ್ ಬಂಧಿತ ಶಿಕ್ಷಕ. ಇವರು ಚಿರಾಲ–ಪೆರಾಲ ನಗರದಲ್ಲಿರುವ ಎಸ್ಪಿಆರ್ ವಿದ್ಯಾ ಕಾನ್ಸೆಪ್ಟ್ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯ ನೀರಿನ ಬಾಟಲಿಯಲ್ಲಿದ್ದ ಹಣ್ಣಿನ ಜ್ಯೂಸ್ಗೆ ಮೂತ್ರವನ್ನು ಮಿಶ್ರಣ ಮಾಡಿದ್ದನು. ಬಳಿಕ ಆಕೆಗೆ ಇದನ್ನು ಕುಡಿಯಬೇಡ ಎಂದೂ ಹೇಳಿದ್ದನು.
ತನ್ನ ಸ್ನೇಹಿತನ ವರ್ತನೆಯಿಂದ ಬೇಸರಗೊಂಡ ಆಕೆ ಈತನ ಮೇಲೆ ದೈಹಿಕ ಶಿಕ್ಷಕ ವಿಜಯ್ ಕುಮಾರ್ ಬಳಿ ದೂರು ಹೇಳಿದ್ದಾಳೆ. ಆಗ ವಿದ್ಯಾರ್ಥಿಯನ್ನು ಕರೆಸಿದ ಶಿಕ್ಷಕ ವಿದ್ಯಾರ್ಥಿ ಕ್ಷಮೆ ಕೇಳಿದರೂ ಕಿವಿಗೊಡದೆ ಮೂತ್ರ ಮಿಶ್ರಿತ ಜ್ಯೂಸ್ನ್ನು ಒತ್ತಾಯಪೂರ್ವಕವಾಗಿ ಕುಡಿಸಿದ್ದಾನೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಪಿಎ ಸೂರ್ಯನಾರಾಯಣ ತಿಳಿಸಿದ್ದಾರೆ.
ಈ ವಿಚಾರವನ್ನು ತಿಳಿದ ಪೋಷಕರು ದೂರು ನೀಡಿದ್ದರು. ನಂತರ ಶಿಕ್ಷಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಎರಡು ವಾರಗಳ ಕಾಲ ಆತನನ್ನು ನ್ಯಾಯಾಂಗ ಬಂಧನದಲ್ಲಿಡುವಂತೆ ಸ್ಥಳೀಯ ನ್ಯಾಯ ತೀರ್ಪು ನೀಡಿದೆ ಎಂದು ಹೇಳಿದ್ದಾರೆ.
Comments are closed.