ಕುಂದಾಪುರ: ಅಲ್ಲಿ ಒಂದಷ್ಟು ಮಂದಿ ಬರಿಗಾಲಲ್ಲಿ ಪಾದಯಾತ್ರೆ ಹೊರಟಿದ್ರು. ಅದು ಬರೋಬ್ಬರಿ 35 ಕಿಲೋಮೀಟರ್ ದೂರದ ದೇವಸ್ಥಾನಕ್ಕೆ. ಆದರೆ ಅವರ್‍ಯಾರು ಹರಕೆ ಹೊತ್ತು ಪಾದಯಾತ್ರೆ ಮಾಡಿಲ್ಲ. ಬದಲಾಗಿ ದೇವರ ಬಳಿ ದೂರು ನೀಡಲು ತೆರಳಿದ್ರು. ಅದೇನು ದೂರು? ಯಾರ ವಿರುದ್ಧ ದೇವರಿಗೆ ದೂರು ನೀಡಿದ್ರು ಅನ್ನೋದರ ಕುರಿತ ಇಂಟರೆಸ್ಟಿಂಗ್ ಸ್ಟೋರಿಯಿಲ್ಲಿದೆ.
ಹೀಗೆ ಸಾಲುಸಾಲಾಗಿ ಕಾಲಿಗೆ ಚಪ್ಪಲಿಯನ್ನೂ ಹಾಕದೇ ನಡೆದುಬರುತ್ತಿರೋ ಇವರೆಲ್ಲಾ ಗಂಗೊಳ್ಳಿಯವರು. ಮಂಗಳವಾರ ಬೆಳ್ಳಂಬೆಳಿಗ್ಗೆ ಈ ಜನರು ಹೊರಟಿದ್ದು ತಾಲೂಕಿನ ಕಾರಣಿಕ ಕ್ಷೇತ್ರ ಮಾರಣಕಟ್ಟೆಗೆ. ಆದರೆ ಇವರ್‍ಯಾರು ಹರಕೆ ಹೊತ್ತು ಪಾದಯಾತ್ರೆ ಮಾಡಿಲ್ಲ. ಇವರಿಗಾದ ಅನ್ಯಾಯದ ವಿರುದ್ಧ ದೇವರಿಗೆ ಮೊರೆಯನ್ನಿಡಲು ಈ ತಂಡ ಸಾಗಿದ್ದು ಬರೋಬ್ಬರಿ 35 ಕಿಲೋಮೀಟರ್. ಅಷ್ಟಕ್ಕೂ ಇವರಿಗಾಗಿದೆ ಅನ್ನೋ ಅನ್ಯಾಯ ಏನು ಅಂತಾ ಕೇಳಿದ್ರೆ, ಕಳೆದೆರಡು ತಿಂಗಳ ಹಿಂದೆ ಗಂಗೊಳ್ಳಿ ವ್ಯಾಪ್ತಿಯಲ್ಲಿ ವಾರಗಳ ಅಂತರದಲ್ಲಿ ಅನ್ಯಕೋಮಿನವರಿಗೆ ಸೇರಿದ ನಾಲ್ಕೈದು ಬೈಕುಗಳನ್ನು ಅದ್ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟಿದ್ದರು. ಈ ಪ್ರಕರಣದಲ್ಲಿ ಗಂಗೊಳ್ಳಿ ಗುರುರಾಜ್ ಖಾರ್ವಿ ಎಂಬಾತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಈತನ ಬಂಧನದ ತರುವಾಯದಲ್ಲಿ ಈತ ನಿರಪರಾಧಿ ಎಂಬ ಮಾತುಗಳು ಆ ಭಾಗದಲ್ಲಿ ಕೇಳಿಬಂದಿದ್ದವು. ಸುಮಾರು ಎರಡು ತಿಂಗಳ ಕಾಲ ಜೈಲಿನಲ್ಲಿದ್ದ ಗುರುರಾಜ ಇತ್ತೀಚೆಗೆ ಜಾಮೀನಿನ ಮೇಲೆ ಹೊರಬಂದಿದ್ದ. ಆದರೇ ತಾನೇನು ತಪ್ಪು ಮಾಡಿಲ್ಲ ಎಂದು ಆತ ಎಲ್ಲರ ಬಳಿ ಹೇಳಿದಾಗ ಆತನ ಸ್ನೇಹಿತರು ಹಾಗೂ ಊರಿನವರು ಈ ಬಗ್ಗೆ ದೇವರ ಮೊರೆಯಿಡಲು ಸೂಚಿಸುತ್ತಾರೆ. ಈ ಮೂಲಕ ಗುರುರಾಜ್ ತನ್ನ ಪ್ರಾಮಾಣಿಕತೆ ಪರೀಕ್ಷೆಗೆ ಸದ್ಯ ದೇವರ ಮುಂದೆ ಬಂದು ನಿಂತಿದ್ದ.
ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ. ಹೌದು… ನೊಂದು ಬರುವ ಭಕ್ತರಿಗೆ ಬ್ರಹ್ಮಲಿಂಗ ಎಂದೂ ಕೈಬಿಡಲಾರ. ಮಾಡದ ತಪ್ಪಿಗೆ ಆರೋಪ ಬಂದಾಗ ಅದೆಷ್ಟೋ ಮಂದಿ ಇಲ್ಲಿ ಬಂದು ದೂರು ನೀಡುವ ಪರಿಪಾಠವಿದೆ. ಅದಕ್ಕೆ ಹುಯಿಲು ನೀಡುವುದು ಅಥವಾ ದೂರು ನೀಡುವುದು ಅಂತಾರೆ. ಗಂಗೊಳ್ಳಿ ಗುರುರಾಜ ಖಾರ್ವಿ ಹಾಗೂ ಸುಮಾರು ೭೦ ಮಂದಿ ಸಂಗಡಿಗರು ಮಾರಣಕಟ್ಟೆ ಕ್ಷೇತ್ರಕ್ಕೆ ಬಂದು ತಮ್ಮ ನೋವನ್ನು ತೋಡಿಕೊಂಡು ದೇವರಿಗೆ ಪೂಜೆ ಸಲ್ಲಿಸಿ ಗಂಟೆ ಬಾರಿಸುತ್ತಾರೆ. ನಮ್ಮ ತಪ್ಪಿಲ್ಲದಿದ್ದರೂ ರಾಜಕೀಯ ಉದ್ದೇಶಕ್ಕೆ ಬಲಿಪಶು ಮಾಡುತ್ತಿದ್ದಾರೆ. ಅದಕ್ಕೆ ಪೊಲೀಸ್ ಇಲಾಖೆಯೂ ಸಾಥ್ ನೀಡುತ್ತಿದೆ. ನಾವೇನು ತಪ್ಪು ಮಾಡಿಲ್ಲ…ತಪ್ಪು ಮಾಡಿದವರಿಗೆ ನೀನೆ ಶಿಕ್ಷೆ ನೀಡು ಬ್ರಹ್ಮಲಿಂಗ ಎಂದು ಕೋರಿಕೊಳ್ಳುತ್ತಾರೆ. ಅರ್ಚಕರು ಕೂಡ ಇವರೆಲ್ಲರ ನಿವೇಧನೆಯನ್ನು ಆಲಿಸಿ ಇದಕ್ಕೆ ಶೀಘ್ರ ಪರಿಹಾರವನ್ನು ದೇವರು ನೀಡುವ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಅಂತೂ ಆರೋಪಿ ನಾನಲ್ಲ ಎಂಬುದು ಸದ್ಯ ಗುರುರಾಜ್ ಮಾಡುತ್ತಿರುವ ವಾದವಾಗಿದೆ. ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜ್ಯನ್ಯ ನಡೆಯುತ್ತಿದೆ ಎಂದು ಗುರುರಾಜನಿಗೆ ಹಿಂದೂಪರ ಸಂಘಟನೆ ಹಾಗೂ ಬಿಜೆಪಿಯೂ ಸಾಥ್ ನೀಡಿದ್ದು ಆತನ ಮೇಲೆ ಬೆಂಕಿ ಹಚಿದ ಆರೋಪವನ್ನು ಸುಖಾಸುಮ್ಮನೆ ಹೊರಿಸಿದ್ದಾರೆ. ಇದರ ಹಿಂದೆ ರಾಜಕಾರಣಿಗಳು ಮತ್ತು ವ್ಯವಸ್ಥೆಯ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ.
ಒಟ್ಟಿನಲ್ಲಿ ಕುಂದಾಪುರವನ್ನು ಬೆಚ್ಚಿಬೀಳಿಸಿದ ಸರಣಿ ಬೆಂಕಿ ಪ್ರಕರಣ ಇದೀಗ ಟ್ವಿಸ್ಟ್ ಪಡೆದಿದೆ. ಆರೋಪಿ ದೇವರ ಮೊರೆಗೆ ಹೋಗುವಷ್ಟರ ಮಟ್ಟಿಗೆ ನೊಂದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು..ಆತನಿಗೆ ನ್ಯಾಯ ಇನ್ನದರೂ ಸಿಗುತ್ತಾ ಕಾದುನೋಡಬೇಕಿದೆ.
Comments are closed.