ಕುಂದಾಪುರ: ಮೂರು ವರ್ಷಗಳ ಹಿಂದೆ ಕುಂದಾಪುರದ ಪ್ರಸಿದ್ಧ ಲಾಡ್ಜ್‌ನ ಕೋಣೆಯೊಳಗೆ ಗಂಗೊಳ್ಳಿ ಮಹಿಳೆ ಲಲಿತಾ ದೇವಾಡಿಗ ಕೊಲೆ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಝರ್ ಫಜಲ್ ಖಾನ್ ಅಲಿಯಾಸ್ ಅಜಯ್ ಬಾಬು(42) ಎಂಬಾತನ ವಿರುದ್ಧ ಮಾಡಲಾದ ಆರೋಗಳು ಸಾಭೀತಾಗಿದ್ದು ಆತ ದೋಷಿಯೆಂದು ಕುಂದಾಪುರ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶ ಪ್ರಕಾಶ್ ಖಂಡೇರಿ ತೀರ್ಪು ಪ್ರಕಟಿಸಿದ್ದು, ಮಾರ್ಚ್ 26ರಂದು ಆರೋಪಿಗೆ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.
ಲಲಿತಾ ದೇವಾಡಿಗ ಕೊಲೆ ಹಾಗೂ ಚಿನ್ನ ಲಪಟಾಯಿಸಿದ ಪ್ರಕರಣ ಹಾಗೂ ನಕಲಿ ಡೆತ್ ನೋಟ್ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಅಂದಿನ ಸಿಪಿಐ ದಿವಾಕರ್ ಪಿ.ಎಮ್ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಜಿಲ್ಲಾ ಸರ್ಕಾರಿ ಅಭಿಯೋಜಕರಾಗಿ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.
ಮಗಳ ಮೇಲಿನ ಮೋಹಕೆ ತಾಯಿ ಕೊಲೆ..
ಗುಜರಾತ್ ನಿವಾಸಿ ಅಝರ್ ಅಫ್ಜಲ್ ಖಾನ್ ಮುಂಬೈಯ ಗಾರ್ಮೆಂಟ್ಸ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಅದೇ ಸಮಯದಲ್ಲಿ ಲಲಿತಾ ದೇವಾಡಿಗರ ಮಗಳು ವೈಷ್ಣವಿ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಬಳಿಕ ಅಝರ್ ಖಾನ್ ಬೇರೊಂದು ಕಂಪನಿಗೆ ಕೆಲಸಕ್ಕೆ ತೆರಳಿದ್ದು ಇಬ್ಬರ ಸಂಪರ್ಕ ಇರಲಿಲ್ಲ. ನಂತರದ ದಿನಗಳಲ್ಲಿ ವೈಷ್ಣವಿ ಮರಾಠಿ ಮೂಲದ ಯುವಕನೊಂದಿಗೆ ವಿವಾವಾಗಿದ್ದಳು. ಕೆಲ ವರ್ಷಗಳ ಬಳಿಕ ಅಝರ್ ಪುನಃ ವೈಷ್ಣವಿಯನ್ನು ಸಂಪರ್ಕಿಸಿ, ವೈಷ್ಣವಿಯಲ್ಲಿ ತಾನು ಪ್ರೀತಿಸುತ್ತಿರುವುದಾಗಿ ಹೇಳಿದ್ದನು. ಮದುವೆಯಾಗುವ ವಿಚಾರವನ್ನು ಅಝರ್ ಹೇಳಿದಾಗ ವೈಷ್ಣವಿ ತನ್ನ ತಾಯಿ ಒಪ್ಪಬೇಕು ಎಂದಿದ್ದಳು.
ಕೊಂದು..ಆಭರಣ ಕದ್ದ..
ವೈಷ್ಣವಿ ತಾಯಿಯನ್ನು ಒಪ್ಪಿಸಲು ಅಝರ್ ಸ್ಕೆಚ್ ರೂಪಿಸಿದ್ದ. ಗಂಗೊಳ್ಳಿಯಲ್ಲಿ ನಿರ್ಮಾಣವಾಗಲಿದ್ದ ದೇವಸ್ಥಾನವೊಂದಕ್ಕೆ ಆರ್ಥಿಕ ಸಹಕಾರ ನೀಡುವುದಾಗಿ ನಂಬಿಸಿ ಲಲಿತಾ ಅವರನ್ನು ಕುಂದಾಪುರಕ್ಕೆ ಬರುವಂತೆ ತಿಳಿಸಿದ್ದ. ಎಪ್ರಿಲ್ 14ರಂದು ಕುಂದಾಪುರದ ಜೆಕೆ ವಸತಿಗೃಹದ ಕೋಣೆಯನ್ನ ಬಾಡಿಗೆ ಪಡೆದಿದ್ದ. ಮಾರನೇ ದಿನ ಅಲ್ಲಿಗೆ ಬಂದ ಲಲಿತಾ ದೇವಾಡಿಗರೊಂದಿಗೆ ಊಟ ಮಾಡಿದ ನಂತರ ವೈಷ್ಣವಿ ಜೊತೆ ಮದುವೆಯಾಗುವ ವಿಚಾರವನ್ನು ಪ್ರಸ್ತಾಪಿಸಿದ್ದನು. ಅದಕ್ಕೆ ಲಲಿತಾ ದೇವಾಡಿಗ ಸಮ್ಮತಿ ಸೂಚಿಸಿರಲಿಲ್ಲ. ಮೊದಲೇ ಯೋಜಿತ ನಿರ್ಧಾರ ಮಾಡಿದ್ದ ಅಝರ್ ವಯರ್‌ನಿಂದ ಆಕೆಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ, ಲಲಿತಾ ಧರಿಸಿದ್ದ ಆಭರಣಗಳನ್ನು ಕದ್ದುಕೊಂಡು ಪರಾರಿಯಾಗಿದ್ದನು.
ವಯರ್ ಬಿಗಿದು ಹತ್ಯೆಗೈದಿದ್ದ ಆರೋಪಿ
ಗುಜರಾತ್ ಮೂಲದ ಅಝರ್ ಫಝಲ್ ಖಾನ್ ಲಲಿತಾ ದೇವಾಡಿಗರನ್ನು ವಯರ್ ಮೂಲಕ ಕುತ್ತಿಗೆಯನ್ನು ಬಿಗಿದು ಹತ್ಯೆ ಮಾಡಿದ್ದನು. ಪ್ರಾರಂಭದಲ್ಲಿ ಲಲಿತಾ ಹೃದಯಾಘಾತದಿಂದ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿತ್ತಾದರೂ ಕುತ್ತಿಗೆಯಲ್ಲಿ ಕಂಡು ಬಂದ ಗಾಯದ ಗುರುತು ಇದೊಂದು ಕೊಲೆ ಎನ್ನುವ ಸಂಶಯ ಮೂಡಿತ್ತು. ಪ್ರಕರಣದ ತನಿಖೆ ನಡೆಸಿದ ಕುಂದಾಪುರ ಪೊಲೀಸರ ತಂಡ ಕಾರ್ಯಾಚರಣೆಗಿಳಿದು ಅಜರ್ ಖಾನ್ ಎಂಬಾತನನ್ನು ಮುಂಬೈಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಬಂಧಿತ ಆರೋಪಿ ಅಝರ್ ಕೊಲೆ ಮಾಡಲು ಬಳಸಿದ ವಯರ್ ಗುರುತಿಸಿದ್ದು, ಕೊಲೆಯ ಯೋಜನೆಯನ್ನು ಮುಂಚಿತವಾಗಿ ತಯಾರಿಸಿದ್ದು, ಯಾವುದೇ ಹಣ ಇಲ್ಲದಿದ್ದರಿಂದ ಕದ್ದ ಚಿನ್ನವನ್ನು ಮುಂಬೈಯಲ್ಲಿ ಮಾರಾಟ ಮಾಡಿರುವುದಾಗಿ ಪೊಲೀಸ್ ತನಿಖೆಯ ವೇಳೆ ಬಾಯ್ಬಿಟ್ಟಿದ್ದನು.
Comments are closed.