ಕರಾವಳಿ

ಸ್ವಚ್ಛತಾ ಸಮೀಕ್ಷೆಯಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ದೇಶದಲ್ಲೇ ನಂಬರ್ 1 ಸ್ಥಾನ

Pinterest LinkedIn Tumblr

ಮಂಗಳೂರು : ಸ್ವಚ್ಛತಾ ಸಮೀಕ್ಷೆಯಲ್ಲಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೇಶದಲ್ಲೇ ನಂಬರ್ ಒನ್ ಸ್ವಚ್ಛ ನಿಲ್ದಾಣ ಎಂಬ ಖ್ಯಾತಿ ಲಭಿಸಿದ್ದು, ಇದರಿಂದ ವಿಮಾನ ನಿಲ್ದಾಣದ ಕಾರ್ಯನಿರ್ವಹಣೆಗೆ ಮತ್ತಷ್ಟು ಪ್ರೇರಣೆ ದೊರಕಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ. ರಾವ್ ಹೇಳಿದರು.

ಕೇಂದ್ರ ಸರ್ಕಾರ ಫೆಬ್ರವರಿಯಲ್ಲಿ ನಡೆಸಿದ ಸ್ವಚ್ಛತಾ ಸಮೀಕ್ಷೆಯಲ್ಲಿ ಸ್ವಚ್ಛತೆ ಹಾಗೂ ನಿರ್ವಹಣಾ ವಿಭಾಗದಲ್ಲಿ ಈ ಮೊದಲ ಸ್ಥಾನ ಲಭಿಸಿದೆ. ದ್ವಿತೀಯ ಸ್ಥಾನ ಕೇರಳದ ತಿರುವನಂತಪುರಂ ಹಾಗೂ ಅಸ್ಸಾಂನ ಗುವಾಹಟಿ ವಿಮಾನ ನಿಲ್ದಾಣಕ್ಕೆ ತೃತೀಯ ಸ್ಥಾನ ಲಭಿಸಿವೆ ಎಂದು ಅವರು ಹೇಳಿದರು.

ಸಭಾಂಗಣದ ವಿಸ್ತರಣೆ ಕಾಮಗಾರಿಗೆ ಶೀಘ್ರದಲ್ಲೇ ಟೆಂಡರ್ :

ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಗಮನ ಸಭಾಂಗಣದ ವಿಸ್ತರಣೆ ಕಾಮಗಾರಿಗೆ ಶೀಘ್ರವೇ ಟೆಂಡರ್ ಕರೆಯಲಾಗುವುದು. ಸುಮಾರು 132 ಕೋಟಿ ರೂ. ವೆಚ್ಚದಲ್ಲಿ 18 ತಿಂಗಳಲ್ಲಿ ಈ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಹೊಸ ಆಗಮನ ಸಭಾಂಗಣವು ಅಂತಾರಾಷ್ಟ್ರೀಯ ವಿಮಾನಗಳ ಪ್ರಯಾಣಿಕರ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲಿದೆ. ಪ್ರಸಕ್ತ ಇರುವ ಸಭಾಂಗಣದಲ್ಲಿ ವಿಮಾನ ಆಗಮಿಸಿದಾಗ 250 ಹಾಗೂ ಹೊಸ ಸಭಾಂಗಣದಲ್ಲಿ 500 ಮಂದಿ ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಲಿದೆ. ಪ್ರಯಾಣಿಕರ ದಟ್ಟಣೆಯ ಹಿನ್ನೆಲೆಯಲ್ಲಿ ಸಭಾಂಗಣ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

2017-18ನೆ ಸಾಲಿನಲ್ಲಿ 23.5 ಲಕ್ಷ ಪ್ರಯಾಣಿಕರು ಮಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಸಿದ್ದಾರೆ. 2018-19ನೆ ಸಾಲಿನಲ್ಲಿ 3 ಮಿಲಿಯನ್ ಪ್ರಯಾಣಿಕರ ಗುರಿಯನ್ನು ಹೊಂದಲಾಗಿದೆ. ದೇಶೀಯ, ವಿದೇಶಿ ಹಾಗೂ ವಾಣಿಜ್ಯ ವಿಮಾನಗಳು ಸೇರಿ ಒಟ್ಟು 40 ವಿಮಾನಗಳು ಪ್ರತಿನಿತ್ಯ ಹಾರಾಟ ನಡೆಸುತ್ತಿವೆ. ಸರಕು ಸಾಗಾಟದಲ್ಲಿ ಶೇ.30ರಷ್ಟು ಹೆಚ್ಚಳವಾಗಿದೆ ಎಂದು ಅವರು ಹೇಳಿದರು.

Comments are closed.