ಮಂಗಳೂರು, ಎಪ್ರಿಲ್.12 :ಸಂಸತ್ತಿನಲ್ಲಿ ಪ್ರತಿಪಕ್ಷ ಸಂಸದರ ಗದ್ದಲ, ಕೋಲಾಹಲದಿಂದ 23 ದಿನಗಳ ಬಜೆಟ ಅಧಿವೇಶನ ಕಲಾಪ ವ್ಯರ್ಥವಾಗಿದೆ ಎಂದು ಆರೋಪಿಸಿ ಹಾಗೂ ಇದನ್ನು ಖಂಡಿಸಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧರಣಿ ಆರಂಭಿಸಿದ್ದರೆ, ಇತ್ತ ಧಾರವಾಡದಲ್ಲಿಯೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತಿದ್ದಾರೆ.
ಪ್ರಧಾನಿ ಮೋದಿ ಸತ್ಯಾಗ್ರಹ ಬೆಂಬಲಿಸಿ ಮಂಗಳೂರಿನಲ್ಲೂ ಸಂಸದ ನಳೀನ್ ಕುಮಾರ್ ಕಟೀಲ್ ಅವರು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆಯಂತೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯಿಂದ ನಗರದ ಪುರಭವನದ ಗಾಂಧಿ ಪ್ರತಿಮೆ ಎದುರು ಗುರುವಾರ ಉಪವಾಸ ಧರಣಿ ಹಮ್ಮಿಕೊಳ್ಳಲಾಗಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಒಂದು ದಿನದ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ.
ಈ ವೇಳೆ ಮಾತನಾಡಿದ ಸಂಸದ ನಳೀನ್ ಕುಮಾರ್ ಕಟೀಲ್, ಕ್ಷುಲ್ಲಕ ರಾಜಕಾರಣಕ್ಕಾಗಿ ದೇಶದ ಹಿತ ಬಲಿಕೊಡುತ್ತಿರುವ ಕಾಂಗ್ರೆಸ್ ಪಕ್ಷ ಬ್ರಿಟಿಷರನ್ನು ಮೀರಿಸುತ್ತಿದೆ. ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ದೇಶವನ್ನು ಲೂಟಿ ಮಾಡಿವೆ. ದೇಶಕ್ಕೆ ಅನ್ಯಾಯ ಮಾಡಿದ ಶಾಪ ಕಾಂಗ್ರೆಸ್‌ಗೆ ತಟ್ಟಲಿದೆ. ಪ್ರಧಾನಿ ಕರೆಯಂತೆ ಒಂದು ತಿಂಗಳ ಸಂಬಳ ಬಿಟ್ಟಿದ್ದೇವೆ. ಕಾಂಗ್ರೆಸ್ ಸಂಸದರು ತಾಕತ್ತಿದ್ದರೆ ಸಂಬಳ ಬಿಟ್ಟುಕೊಡಲಿ. ದೇಶದ ತೆರಿಗೆಯ ಹಣ ಪೋಲಾಗಲು ಬಿಡುವುದಿಲ್ಲ ಎಂದರು.
ದೇಶದ ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಪಕ್ಷ ಹಲವು ವರ್ಷ ಅಧಿಕಾರ ನಡೆಸಿದರೂ, ಪ್ರತಿ ಬಾರಿಯೂ ಡಾ.ಅಂಬೇಡ್ಕರ್ ರಚಿಸಿದ್ದ ಸಂವಿಧಾನಕ್ಕೆ ವ್ಯತಿರಿಕ್ತವಾಗಿ ಪ್ರಜಾಭುತ್ವದ ಕಗ್ಗೊಲೆ ಮಾಡುತ್ತಾ ಬಂದಿದೆ. ನೆಹರು, ಇಂದಿರಾ ಇದರಲ್ಲಿ ಮುಂಚೂಣಿಯಲ್ಲಿದ್ದರು. ಕಾಂಗ್ರೆಸೇತರ ಸರಕಾರ ಬಂದಾಗಲೆಲ್ಲಾ ಸಹಕಾರ ಕೊಡುವ ಬದಲು ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ಪಾಲಿಸುತ್ತಿದೆ. ಹಿಂದುಳಿದ ವರ್ಗಕ್ಕೆ ಕಾಂಗ್ರೆಸ್ ದ್ರೋಹ ಮಾಡಿದೆ ಎಂದು ಅವರು ಆರೋಪಿಸಿದರು.
ಮಹಾತ್ಮ ಗಾಂಧೀಜಿ ಅವರ ಕನಸಿನಂತೆ ಗ್ರಾಮ ಸ್ವರಾಜ್ಯ, ಅಭಿವೃದ್ಧಿ, ಉನ್ನತಿಯಲ್ಲಿ ಭಾರತವನ್ನು ಮುನ್ನಡೆಸುವ ಕಾರ್ಯ ಪ್ರಧಾನಿ ನರೇಂದ್ರ ಮೋದಿ ಅವರಿಂದ ನಡೆಯುತ್ತಿದೆ. ಇದನ್ನು ಸಹಿಸಲಾಗದೆ ಕಾಂಗ್ರೆಸ್ ಸಂಸತ್ತಿನಲ್ಲಿ ಕೋಲಾಹಲ ನಡೆಸುತ್ತಿದೆ. ಅಧಿವೇಶನ ನಡೆಯದ ಹಿನ್ನೆಲೆಯಲ್ಲಿ ನಾವು ನಮ್ಮ ಭತ್ತೆ ತೆಗೆದುಕೊಳ್ಳುತ್ತಿಲ್ಲ. ಕಾಂಗ್ರೆಸ್ ಕೂಡಾ ಅದನ್ನು ಮಾಡಿ ತೋರಿಸಲಿ ಎಂದು ನಳಿನ್ ಹೇಳಿದರು.
ಬಿಜೆಪಿ ಮುಖಂಡರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ರುಕ್ಮಯ ಪೂಜಾರಿ, ಎನ್.ಯೋಗೀಶ್ ಭಟ್, ಬಾಲಕೃಷ್ಣ ಭಟ್, ಪ್ರಭಾಕರ ಬಂಗೇರ, ಬೃಜೇಶ್ ಚೌಟ, ಕಿಶೋರ್ ರೈ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಚಂದ್ರಹಾಸ ಉಳ್ಳಾಲ್, ಪೂಜಾ ಪೈ, ನಿತಿನ್ ಕುಮಾರ್, ಸಂತೋಷ್ ಕುಮಾರ್ ಬೋಳಿಯಾರ್, ಜಿತೇಂದ್ರ ಕೊಟ್ಟಾರಿ, ಹರಿಕೃಷ್ಣ ಬಂಟ್ವಾಳ್, ಡಾ.ಭರತ್ ಶೆಟ್ಟಿ, ಸತ್ಯಜಿತ್ ಸುರತ್ಕಲ್, ರಾಮಚಂದರ್ ಬೈಕಂಪಾಡಿ, ಸತೀಶ್ ಪ್ರಭು, ಸುಚರಿತ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Comments are closed.