ಕರಾವಳಿ

ತಾಯಿ-ಮಗಳ ಕೊಲೆ ಪ್ರಕರಣ – ತನಿಖೆ ದಿಕ್ಕು ತಪ್ಪಿಸಿದ ಶಾಸಕ ಮೊಯ್ದಿನ್ ಬಾವ: ಆರೋಪ

Pinterest LinkedIn Tumblr

ಮಂಗಳೂರು, ಎಪ್ರಿಲ್. 13: ಪಂಜಿಮೊಗರು ನಡೆದ ತಾಯಿ ಮಗಳ ಜೋಡಿ ಕೊಲೆಯ ತನಿಖೆಯನ್ನು ದಿಕ್ಕು ತಪ್ಪಿಸಿದ್ದು ಶಾಸಕ ಮೊಯ್ದಿನ್ ಬಾವ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ. ಅವರು ಪಂಜಿಮೊಗರುವಿನಲ್ಲಿ ಆಯೋಜಿಸಲಾಗಿದ್ದ ವಾರ್ಡ್ ಮಟ್ಟದ ಚುನಾವಣಾ ಸಿದ್ಧತಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಕಳೆದ ವಿಧಾನಸಭಾ ಚುನಾವಣೆಯ ಮುಂಚಿತವಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮೊಯ್ದಿನ್ ಬಾವ ನಾನು ಶಾಸಕನಾಗಿ ಆಯ್ಕೆಯಾದರೆ ಪಂಜಿಮೊಗರು ತಾಯಿ, ಮಗಳ ಕೊಲೆ ಪ್ರಕರಣದ ಆರೋಪಿಗಳನ್ನು ಜೈಲಿಗಟ್ಟುವೆ. ಸಿಬಿಐ ತನಿಖೆ ನಡೆಸುವೆ ಎಂದು ಭಾಷಣ ಮಾಡಿದ್ದರು, ಕುಟುಂಬಕ್ಕೆ ನ್ಯಾಯ ಒದಗಿಸುವ ಮಾತು ನೀಡಿದ್ದರು.

ಆದರೆ ಗೆಲುವು ಸಾಧಿಸಿದ ನಂತರ ಅಮಾಯಕ ತಾಯಿ ಮಗಳ ಕೊಲೆಯನ್ನು ಮರೆತು ಬಿಟ್ಟರು. ಶಾಸಕರು ಮನಸ್ಸು ಮಾಡಿದ್ದರೆ, ಸಿಐಡಿಯಲ್ಲಿ ಇದ್ದ ಪ್ರಕರಣವನ್ನು ದಕ್ಷ ಅಧಿಕಾರಿಗಳ ತಂಡದಿಂದ ತನಿಖೆ ಮಾಡಿಸಿ ಕೊಲೆಗಡುಕರನ್ನು ಪತ್ತೆ ಹಚ್ಚಬಹುದಿತ್ತು. ಡಿವೈಎಫ್‌ಐ ಈ ಕುರಿತು ಹಲವು ಬಾರಿ ಶಾಸಕರ ಗಮನ ಸೆಳೆದಿತ್ತು. ಆದರೆ ಆಂತಹ ಯಾವ ಪ್ರಯತ್ನವನ್ನೂ ಮಾಡದ ಮೊಯ್ದಿನ್ ಬಾವ ಜೋಡಿ ಕೊಲೆ ಪ್ರಕರಣದ ತನಿಖೆಯನ್ನು ಹಳ್ಳ ಹಿಡಿಸಿದರು ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದರು.

ಪಂಜಿಮೊಗರು ಜೋಡಿಕೊಲೆ, ಬೆಂಜನಪದವು ರಾಜೇಶ್ ಪೂಜಾರಿ ಕೊಲೆ, ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾ ಪೂಜಾರಿ ಸಾವು ನಡೆದಾಗ ಸಮಗ್ರ ತನಿಖೆ ಗಾಗಿ ಧ್ವನಿ ಎತ್ತಿದ್ದು ಕಮ್ಯೂನಿಸ್ಟರು. ಆದರೆ ಕಾಂಗ್ರೆಸ್ ಜನಪ್ರತಿನಿಧಿಗಳ ಬೇಜವಾಬ್ದಾರಿತನ, ಕಾಳಜಿಯ ಕೊರತೆಯಿಂದ ಈ ಪ್ರಕರಣಗಳ ಹಿಂದಿನ ಸತ್ಯಸಂಗತಿಗಳು ಹೊರಬರಲಿಲ್ಲ. ಆ ಕುಟುಂಬಗಳಿಗೆ ನ್ಯಾಯ ದೊರಕಲಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಈ ಬಾರಿ ಮಂಗಳೂರು ಉತ್ತರ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐಎಂ ಗೆಲುವು ಸಾಧಿಸಿದರೆ ಈ ಎಲ್ಲಾ ಪ್ರಕರಣಗಳು ಮರುಜೀವ ಪಡೆಯಲಿವೆ ಎಂದು ಹೇಳಿದರು. ಸ್ಥಳೀಯ ಪಾಲಿಕೆ ಸದಸ್ಯ ದಯಾನಂದ ಶೆಟ್ಟಿ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಅನಿಲ್ ಡಿಸೋಜ, ಬಶೀರ್ ಪಂಜಿಮೊಗರು, ಚರಣ್ ಶೆಟ್ಟಿ, ಜಯಂತ್, ಸಂತೋಷ್ ಡಿಸೋಜ, ಬಶೀರ್‌ ಮತ್ತಿತರರು ಉಪಸ್ಥಿತರಿದ್ದರು.

Comments are closed.