ಲಕ್ನೋ: 35 ವರ್ಷದ ಮಗಳನ್ನು ತಂದೆಯೇ ತನ್ನ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಿ ಆಕೆಯ ಮೇಲೆ ಗ್ಯಾಂಗ್ರೇಪ್ ಮಾಡಿಸಿದ ಘಟನೆ ಸೋಮವಾರ ಉತ್ತರಪ್ರದೇಶದ ಲಕ್ನೋದಿಂದ 70ಕಿ.ಮೀ ದೂರದಲ್ಲಿರುವ ಸಿತಾಪುರ್ ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
50 ವರ್ಷದ ವ್ಯಕ್ತಿ ಏಪ್ರಿಲ್ 15ರಂದು ತನ್ನ ಮಗಳನ್ನು ಜಾತ್ರೆಗೆಂದು ಕಮಲಾಪುರಕ್ಕೆ ಕರೆದುಕೊಂಡು ಹೋಗಿದ್ದಾನೆ. ಜಾತ್ರೆಗೆ ಹೋಗಿ ಹಿಂತಿರುಗುವಾಗ ಆತ ತನ್ನ ಸ್ನೇಹಿತ ಮನ್ ಸಿಂಗ್ಗೆ ಕರೆ ಮಾಡಿ ಭೇಟಿಯಾಗಲು ಹೇಳಿದ್ದಾನೆ. ನಂತರ ಮಗಳನ್ನು ತನ್ನ ಸ್ನೇಹಿತರ ಜೊತೆ ಬರುವಂತೆ ಮನವೊಲಿಸಿ, ತನ್ನ ಮತ್ತೊಬ್ಬ ಸ್ನೇಹಿತ ಮೀರಜ್ ಮನೆಗೆ ಕರೆದುಕೊಂಡು ಹೋಗಿದ್ದಾನೆ ಎಂದು ವರದಿಯಾಗಿದೆ.
ನಂತರ ತಂದೆ ತನ್ನ ಮಗಳನ್ನು ಸ್ನೇಹಿತರಿಗೆ ಉಡುಗೊರೆಯಾಗಿ ನೀಡಿದ್ದ. ಬಳಿಕ ಒಬ್ಬೊಬ್ಬರಾಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಮಹಿಳೆಯನ್ನು ಮೀರಜ್ ಮನೆಯಲ್ಲಿ 18 ಗಂಟೆಗಳ ಕಾಲ ಕೂಡಿಹಾಕಿ ಅತ್ಯಾಚಾರವೆಸಗಿದ್ದಾರೆ. ನಂತರ ಮಹಿಳೆ ಸೋಮವಾರ ರಾತ್ರಿ ಅಲ್ಲಿಂದ ತಪ್ಪಿಸಿಕೊಂಡು ಬಂದು, ತನ್ನ ತಾಯಿಯ ಹತ್ತಿರ ನಡೆದ ಘಟನೆ ಬಗ್ಗೆ ತಿಳಿಸಿದ್ದಾರೆ. ಅದೇ ದಿನ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೀರಜ್ನನ್ನು ಮಂಗಳವಾರ ಬಂಧಿಸಿದ್ದೇವೆ. ಮಹಿಳೆಯ ತಂದೆ ಹಾಗೂ ಮನ್ ಸಿಂಗ್ ತಪ್ಪಿಸಿಕೊಂಡಿದ್ದು, ಆ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಮೀರಜ್ ವೈದ್ಯ ಎಂದು ಹೇಳಿಕೊಳ್ಳುತ್ತಿದ್ದಾನೆ. ಆದರೆ ಅವನು ತನ್ನ ಪದವಿಯನ್ನು ಸಹ ಪೂರ್ಣಗೊಳಿಸಿಲ್ಲ. ಮಹಿಳೆ ಮೇಲೆ ಈ ಕೃತ್ಯವೆಸಗುವಾಗ ಮೀರಜ್ ಕುಟುಂಬದವರು ಊರಿನಲ್ಲಿ ಇರಲಿಲ್ಲ ಎಂದು ಎಸ್ಎಚ್ಒ ಸಂಜೀತ್ ಸೋನ್ಕರ್ ತಿಳಿಸಿದ್ದಾರೆ.
ಮಹಿಳೆ 16ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಆದರೆ ಮದುವೆಯಾದ 2 ವರ್ಷದಲ್ಲೇ ದಾಂಪತ್ಯದಲ್ಲಿ ಬಿರುಕು ಕಾಣಿಸಿದ ಹಿನ್ನೆಲೆಯಲ್ಲಿ ತವರು ಮನೆ ಸೇರಿದ್ದಳು. ನಂತರ ನವೆಂಬರ್ 2017ರಲ್ಲಿ ತಂದೆ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪ ಕೇಳಿ ಬಂದಿತ್ತು. ನಂತರ ಆಕೆಗೆ ಹಳ್ಳಿಯಲ್ಲಿ ಬಹಿಷ್ಕಾರ ಹಾಕಿ ತಂದೆಯನ್ನು ಜೈಲಿಗೆ ಕಳುಹಿಸಲಾಗಿತ್ತು.
ಈ ಘಟನೆಯ ಬಳಿಕ ಮಹಿಳೆ ತನ್ನ 14 ವರ್ಷದ ಮಗನ ಜೊತೆ ಬೇರೆ ಮನೆಯಲ್ಲಿ ವಾಸಿಸುತ್ತಿದ್ದಳು. ಫೆಬ್ರವರಿಯಲ್ಲಿ ತಂದೆ ಜಾಮೀನು ಪಡೆದು ಹೊರಬಂದಿದ್ದ ಎಂದು ಸಿತಾಪುರದ ಎಸ್ಪಿ ಸುರೇಶ್ರಾವ್ ಕುಲಕರ್ಣಿ ತಿಳಿಸಿದ್ದಾರೆ.
Comments are closed.