ಕುಂದಾಪುರ: ಕಳೆದ ಎರಡೂವರೆ ವರ್ಷಗಳ ಹಿಂದೆ ತಾಲೂಕಿನ ಕೆದೂರು ಸಮೀಪದ ಕೊರ್ಗಿಯ ಹೊಸ್ಮಠ ಗ್ರಾಮದಲ್ಲಿದ್ದ ಸಂಬಂಧಿಕರ ಮನೆಗೆ ಪ್ರವೇಶಿಸಿ ಸುಲಿಗೆ ಹಾಗೂ ಕೊಲೆ ಯತ್ನ ನಡೆಸಿದ ಆರೋಪ ಎದುರಿಸುತ್ತಿದ್ದ ರಂಜಿತ್ ಶೆಟ್ಟಿ ಎಂಬಾತನ ವಿರುದ್ದ ಮಾಡಲಾಗಿರುವ ಆರೋಪಗಳು ಸಾಬೀತಾಗಿದ್ದು, ಎಪ್ರಿಲ್ 24 ರಂದು ಅಪರಾಧಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ಗುರುವಾರ ಕುಂದಾಪುರದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ್ ಖಂಡೇರಿ ತೀರ್ಪು ಪ್ರಕಟಿಸಿದ್ದಾರೆ.
ಕೊರ್ಗಿ ಹೊಸ್ಮಠ ಸಮೀಪದ ಕುಷ್ಟಪ್ಪ ಅಲಿಯಾಸ್ ಕೃಷ್ಣಯ್ಯ ಶೆಟ್ಟಿ(67), ಕೊರಗಮ್ಮ ಶೆಡ್ತಿ ಹಾಗೂ ಅವರ ಪುತ್ರಿ ಚಂದ್ರಮತಿ ಶೆಟ್ಟಿ ಇದ್ದ ಮನೆಗೆ 2016 ರ ಜ.4 ರಂದು ಮಧ್ಯರಾತ್ರಿ ವೇಳೆಯಲ್ಲಿ ಮಾರಕಾಯುಧಗಳೊಂದಿಗೆ ಮನೆಗೆ ನುಗ್ಗಿದ್ದ ಕುಷ್ಟಪ್ಪ ಶೆಟ್ಟಿ ಹಾಗೂ ಕೊರಗಮ್ಮ ಶೆಡ್ತಿ ಅವರ ಹಿರಿಯ ಪುತ್ರಿಯ ಮಗ ರಂಜಿತ್ ಶೆಟ್ಟಿ ತನ್ನ ಖರ್ಚಿಗಾಗಿ ಚಿನ್ನದ ಒಡವೆಗಳನ್ನು ಕೊಡಲು ಬೇಡಿಕೆ ಇಟ್ಟಿದ್ದಾನೆ. ಮನೆಯವರು ಕೊಡಲು ನಿರಾಕರಿಸಿದ್ದರಿಂದ ಮರದ ಒನಕೆ ಹಾಗೂ ಮಾರಕಾಯುಧಗಳಿಂದ ಮೂವರ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿ ಮನೆಯಲ್ಲಿ ಇದ್ದ ತನ್ನ ತಾಯಿಯ ಒಡವೆಯೂ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಒಡವೆಗಳನ್ನು ದೋಚಿಕೊಂಡು ಪರಾರಿಯಾಗಿದ್ದ.
(ಫೈಲ್ ಫೋಟೋಗಳು)
ಮನೆಯಲ್ಲಿ ನಡೆಯಲಿದ್ದ ಸಮಾರಂಭಕ್ಕೆಂದು ಪುನಾದಿಂದ ಊರಿಗೆ ಬಂದಿದ್ದ ನಾರಾಯಣ ಶೆಟ್ಟಿ ಎನ್ನುವವರು ಕುಷ್ಟಪ್ಪ ಶೆಟ್ಟಿಯವರ ಮನೆ ಸಮೀಪ ಬಂದಿದ್ದಾಗ ರಕ್ತದ ಮಡುವಿನಲ್ಲಿದ್ದ ಈ ಮೂವರ ಸ್ಥಿತಿ ತಿಳಿದಿತ್ತು. ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪ್ರಕರಣವನ್ನು ದಾಖಲಿಸಿಕೊಂಡಿದ್ದ ಕುಂದಾಪುರ ಪೊಲೀಸರು ಡಿವೈಎಸ್ಪಿ ಮಂಜುನಾಥ ಶೆಟ್ಟಿ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಎಸ್.ಐ ದೇವರಾಜ್ ಹಾಗೂ ಸಿಬ್ಬಂದಿಗಳು ಆರೋಪಿಯನ್ನು ಕೋಟೇಶ್ವರದಲ್ಲಿ ಚಿನ್ನಾಭರಣಗಳೊಂದಿಗೆ ಬಂಧಿಸಿದ್ದರು.
ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಸರ್ಕಲ್ ಇನ್ಸ್‌ಪೆಕ್ಟರ್ ಪಿ.ಎಂ.ದಿವಾಕರ ಆರೋಪಿಯ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಜಿಲ್ಲಾ ಸರ್ಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಪ್ರಾಸಿಕ್ಯೂಶನ್ ಪರವಾಗಿ ವಾದಿಸಿದ್ದರು.
Comments are closed.