ಕರಾವಳಿ

ದ.ಕ.ಜಿಲ್ಲೆ : ನಾಲ್ಕು ಕ್ಷೇತ್ರಗಳಲ್ಲಿ ಬಂಟ ಸಮುದಾಯದ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್

Pinterest LinkedIn Tumblr

ಮಂಗಳೂರು : ಈ ಬಾರಿ ಚುನಾವಣೆಗೆ ಬಿಜೆಪಿ ವರಿಷ್ಠರು ಬಂಟ ಸಮುದಾಯದವರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಾರ್ಟಿಯು ಈ ಭಾರಿ ಬಂಟ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಹರೀಶ್ ಪೂಂಜಾ, ಬಂಟ್ವಾಳ ಕ್ಷೇತ್ರಕ್ಕೆ ರಾಜೇಶ್ ನಾಯ್ಕ್‌ ಉಳಿಪಾಡಿಗುತ್ತು, ಮಂಗಳೂರು ವಿಧಾನ ಸಬಾ ಕ್ಷೇತ್ರದಿಂದ ಸಂತೋಷ್ ರೈ ಬೋಳಿಯಾರ್ ಮತ್ತು ಮಂಗಳೂರು ಉತ್ತರ ಕ್ಷೇತ್ರ ದಿಂದ ಡಾ. ಭರತ್ ಶೆಟ್ಟಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.

ಈ ಎಲ್ಲಾ ಅಭ್ಯರ್ಥಿಗಳು ಪ್ರಭಾವಿ ಬಂಟ ಸಮುದಾಯಕ್ಕೆ ಸೇರಿದವರು ಎಂಬುದು ಗಮನಾರ್ಹ. ಬಿಜೆಪಿ ವರಿಷ್ಠರ ಈ ಧೋರಣೆ ಹಿಂದೆ ಬಂಟ ಸಮುದಾಯಕ್ಕೆ ಸೇರಿದ ಸಂದಸ ನಳಿನ್ ಕುಮಾರ್ ಅವರ ಪ್ರಭಾವ ಇದೆ ಎಂಬ ಮಾತು ಕೇಳಿ ಬಂದಿದೆ.

ಡಾ.ಭರತ್ ಶೆಟ್ಟಿ : ಸುರತ್ಕಲ್

ಮಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಗಿಟ್ಟಿಸಿರುವ ಡಾ. ಭರತ್ ಶೆಟ್ಟಿ ಬಂಟ ಸಮುದಾಯಕ್ಕೆ ಸೇರಿದವರು. ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಭರತ್ ಶೆಟ್ಟಿ ಬಿಜೆಪಿಯ ಯುವ ಮೋರ್ಚಾದ ನಾಯಕತ್ವ ವಹಿಸಿಕೊಂಡಿದ್ದರು. ಜೊತೆಗೆ ಬಿಜೆಪಿ ರಾಜ್ಯ ಘಟಕದಲ್ಲೂ ಪ್ರಭಾವ ಬೀರಬಲ್ಲ ಚಾಕಚಕ್ಯತೆ ಡಾ. ಭರತ್ ಶೆಟ್ಟಿ ಹೊಂದಿದ್ದಾರೆ.

ಮಂಗಳೂರಿನ ಪ್ರತಿಷ್ಠಿತ ಎ.ಜೆ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ಡಿನ್ ಆಗಿ ಸೇವೆ ಸಲ್ಲಿಸುತ್ತಿದ್ದು ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಮರನಾಥ್ ಶೆಟ್ಟಿ ಅವರ ಅಳಿಯ. ಬಿಜೆಪಿ , ಜೆಡಿಎಸ್ ಮೈತ್ರಿ ಸರಕಾರದ ಸಂದರ್ಭದಲ್ಲಿ ಜೆಡಿಎಸ್ ನಲ್ಲಿದ್ದ ಡಾ. ಭರತ್ ಶೆಟ್ಟಿ ಬಳಿಕ ತಮ್ಮ ನಿಷ್ಟೆಯನ್ನು ಬಿಜೆಪಿಗೆ ಬದಲಾಯಿಸಿದ್ದರು.

ಹರೀಶ್ ಪೂಂಜಾ :ಬೆಳ್ತಂಗಡಿ

ಬೆಳ್ತಂಗಡಿ ಕ್ಷೇತ್ರದಿಂದ ಸ್ಪರ್ಧಿಸಲು ಅಣಿಯಾಗಿರುವ ಬಿಜೆಪಿ ಯುವ ಮುಖಂಡ ಹರೀಶ್ ಪೂಂಜಾ ಕೂಡ ಬಂಟ ಸಮುದಾಯಕ್ಕೆ ಸೇರಿದವರು. ವಿದ್ಯಾರ್ಥಿ ಪರಿಷತ್‌ ನಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ ಪೂಂಜಾ ಅರವಿಂದ ಲಿಂಬಾವಳಿ ಅವರ ಅಪ್ತರು ಎನ್ನುವ ಮಾತಿದೆ . ವೃತ್ತಿಯಲ್ಲಿ ಹೈಕೋರ್ಟ್ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಪೂಂಜಾ ರಾಜ್ಯ ನಾಯಕರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ.

ಸಂತೋಷ್ ರೈ ಬೋಳಿಯಾರ್ : ಉಳ್ಳಾಲ

ಸಂತೋಷ್ ರೈ ಬೋಳಿಯಾರ್ ಕೂಡ ಬಂಟ ಸಮುದಾಯಕ್ಕೆ ಸೇರಿದವರು. ಜಿಲ್ಲಾ ಪಂಚಾಯತ್ ಸದಸ್ಯರಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿರುವ ಸಂತೋಷ್ ಕುಮಾರ್ ಅವರಿಗೆ ಕಳೆದ ಬಾರಿ ಟಿಕೆಟ್ ದೊರಕಿರಲಿಲ್ಲ. ಆದರೆ ವಿಧಾನಸಭಾ ಚುನಾವಣೆಯತ್ತ ಆಗಲೇ ಗಮನ ಹರಿಸಿದ್ದ ಸಂತೋಷ್ ರೈ, ಮುಸ್ಲಿಂ ಸಮುದಾಯದವರಲ್ಲೂ ಚಿರಪರಿಚಿತರು

ಉಳಿಪಾಡಿ ಗುತ್ತು ರಾಜೇಶ್ ನಾಯ್ಕ : ಬಂಟ್ವಾಳ

ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಕುತೂಹಲ ಕೆರಳಿಸಿರುವ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ರಾಜೇಶ್ ನಾಯ್ಕ ಅವರನ್ನು ಕಣಕ್ಕಿಳಿಸಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಚಿವ ಬಿ. ರಮಾನಾಥ ರೈ ಅವರಿಗೆ ಎದುರಾಗಿ ಉಳಿಪಾಡಿ ರಾಜೇಶ್ ನಾಯ್ಕ್ ಅಖಾಡಕ್ಕೆ ಇಳಿದಿದ್ದಾರೆ . ಸಾವಯವ ಕೃಷಿಕರಾಗಿರುವ ರಾಜೇಶ್ ನಾಯ್ಕ್‌ ಕಳೆದ ಬಾರಿ 2013 ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ರಮಾನಾಥ್ ರೈ ವಿರುದ್ಧ ಪರಾಭವ ಗೊಂಡಿದ್ದರು. ಆದರೆ ಈ ಬಾರಿ ಮತ್ತೆ ಕ್ಷೇತ್ರದಿಂದ ಸ್ಪರ್ಧಿಸಲು ರಾಜೇಶ್ ನಾಯ್ಕ್ ಟಿಕೆಟ್ ಪಡೆಯಲು ಸಫಲರಾಗಿದ್ದಾರೆ. ಬಂಟ ಸಮುದಾಯಕ್ಕೆ ಸೇರಿದ ರಾಜೇಶ್ ನಾಯ್ಕ್ ಈಗಾಗಲೇ ಕ್ಷೇತ್ರದಾದ್ಯಂತ ತಿರುಗಾಡಿ ಪಕ್ಷ ಸಂಘಟಿಸಿದ್ದಾರೆ.

Comments are closed.