ಕುಂದಾಪುರ: ಕುಂದಾಪುರ ತಾಲೂಕಿನ ಪ್ರಸಿದ್ಧ ತ್ರಾಸಿ ಮರವಂತೆಯ ಸಮುದ್ರ ಕಿನಾರೆಯಲ್ಲಿ ಆಟವಾಡುತ್ತಿದ್ದ ಪುಟಾಣಿಗಳ ಮೇಲೆ ಎರಗಿದ ಸಮುದ್ರದ ಬ್ರಹತ್ ಅಲೆಗಳು ಓರ್ವ ಬಾಲಕನನ್ನು ನೀರು ಪಾಲಾಗಿಸಿದ್ದು ಇಬ್ಬರು ಬಾಲಕರು ಅಲೆಗಳ ಹೊಡೆತಕ್ಕೆ ಸಿಕ್ಕು ತೀವ್ರ ಅಸ್ವಸ್ಥಗೊಂಡಿದ್ದಾರೆ.
ಮಂಗಳೂರು ಬೋಳಿಯಾರು ಮಹಮ್ಮದ್ ಜುನೇದ್ (12) ಎಂಬಾತನೇ ಕಡಲಿನ ಅಬ್ಬರದ ತೆರೆಗೆ ಸಿಲುಕಿ ನಾಪತ್ತೆಯಾದ ಬಾಲಕ. ಉನೈಸ್ (14), ಇಯಾಝ್ (14) ಗಾಯಾಳು ಬಾಲಕರು. ಜುನೇದ್ ಸಮುದ್ರದಲೆಯಲ್ಲಿ ಕೊಚ್ಚಿ ಹೋದ ಶಂಕೆ ವ್ಯಕ್ತವಾಗಿದೆ.
ಜುನೇದ್ ಹಾಗೂ ಕುಟುಂಬಿಕರು ಉಪ್ಪಿನಂಗಡಿಯಿಂದ ಬೈಂದೂರು ಸಮೀಪದ ಶಿರೂರಿಗೆ ಮದುವೆಗೆ ಬಂದಿದ್ದರು. ಮದುವೆ ಕಾರ್ಯ ಮುಗಿಸಿ ವಾಪಸ್ ತೆರಳುವಾಗ ಬಸ್ಸು ನಿಲ್ಲಿಸಿ ಪ್ರಸಿದ್ಧ ತ್ರಾಸಿ ಬೀಚ್ ವಿಹಾರಕ್ಕೆ ತೆರಳಿದ್ದು ಈ ಮೂವರು ಸಮುದ್ರ ತೀರದಲ್ಲಿ ಆಟವಾಡುತ್ತಿದ್ದರು. ಇದೇ ವೇಳೆ
ಸಮುದ್ರದ ರಕ್ಕಸ ಅಲೆಗಳಿಗೆ ಸಿಲುಕಿದ ಜುನೇದ್ ನಾಪತ್ತೆಯಾದರೆ ಇನ್ನಿಬ್ಬರು ಮಕ್ಕಳು ಅಲೆಗಳ ಹೊಡೆತಕ್ಕೆ ಸಿಕ್ಕು ಅಸ್ವಸ್ಥಗೊಂಡಿದ್ದಾರೆ. ಅವರನ್ನು ಕೂಡಲೇ ಗಂಗೊಳ್ಳಿಯಲ್ಲಿನ ೧೦೮ ಅಂಬುಲೆನ್ಸ್ ಹಾಗೂ ಜೀವರಕ್ಷಕ ೨೪*೭ ಅಂಬುಲೆನ್ಸ್ ಮೂಲಕ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕರಾವಳಿ ಕಾವಲು ಪಡೆ, ಗಂಗೊಳ್ಳಿ ಪೊಲೀಸರು, ಸ್ಥಳೀಯರು, ಅಗ್ನಿಶಾಮಕದಳದಿಂದ ತೀವ್ರ ಶೋಧ ಕಾರ್ಯ ರಾತ್ರಿಯವರೆಗೂ ನಡೆದಿದೆ.
Comments are closed.