ಕರಾವಳಿ

ಚಿನ್ನಕ್ಕಾಗಿ ಸಂಬಂಧಿಗಳ ನೆತ್ತರು ಹರಿಸಿದ ಕಿರಾತಕನಿಗೆ ಜೀವಾವಧಿ ಶಿಕ್ಷೆ

Pinterest LinkedIn Tumblr

ಕುಂದಾಪುರ: ಚಿನ್ನಕ್ಕಾಗಿ ಸಂಬಂಧಿಗಳ ಸುಲಿಗೆ ಮಾಡಿ ಕೊಲೆ ಯತ್ನ ನಡೆಸಿದ ಆರೋಪದಡಿಯಲ್ಲಿ ಬಂಧಿತನಾಗಿದ್ದ ರಂಜಿತ್ ಶೆಟ್ಟಿ ಎಂಬಾತನ ವಿರುದ್ಧದ ಆರೋಪಗಳು ಸಾಭೀತಾಗಿದ್ದು ಮಂಗಳವಾರ ಅಪರಾಧಿ ರಂಜಿತನಿಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ ಖಂಡೇರಿ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ.

ಚಿನ್ನಾಭರಣಕ್ಕಾಗಿ ಸ್ವಂತ ಅಜ್ಜಿ, ಅಜ್ಜ ಹಾಗೂ ಸಂಬಂಧಿಯನ್ನು ಮಾರಣಾಂತಿಕವಾಗಿ ಥಳಿಸಿ ಚಿನ್ನ ದೋಚಿದ ರಂಜಿತ ಶೆಟ್ಟಿ ವಿರುದ್ಧದ ಆರೋಪಗಳು ಸಾಭೀತಾಗಿದ್ದು ಕೊಲೆ ಯತ್ನ ಪ್ರಕರಣವಾದ ಸೆಕ್ಷನ್ 307 ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಲಾಗಿದೆ.

ಅಪರಾಧಿಗೆ ಏನೇನು ಶಿಕ್ಷೆ…
ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಕ್ಷನ್ 397 ಅಡಿಯಲ್ಲಿ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ಮನೆಗೆ ಅಕ್ರಮ ಪ್ರವೇಶ ಮಾಡಿದ್ದಕ್ಕೆ ಸೆಕ್ಷನ್ 450 ಅಡಿಯಲ್ಲಿ  5 ವರ್ಷ ಕಠಿಣ ಕಾರಾಗೃಹ ಮತ್ತು 5 ಸಾವಿರ ದಂಡ, ಬೆದರಿಕೆ ಹಾಕಿದ್ದಕ್ಕೆ ಸೆಕ್ಷನ್ 506 ಅಡಿಯಲ್ಲಿ 1 ವರ್ಷ ಸಜೆ ಮತ್ತು 1 ಸಾವಿರ ದಂಡ, ಸಾಮಾನ್ಯ ಸ್ವರೂಪದ ಗಾಯ ಮಾಡಿದ್ದಕ್ಕೆ ಸೆಕ್ಷನ್ 324 ಅಡಿಯಲ್ಲಿ  2 ವರ್ಷ ಕಠಿಣ ಸಜೆ ಮತ್ತು 3 ಸಾವಿರ ದಂಡ, ತೀವ್ರ ಸ್ವರೂಪದ ಗಾಯ ಮಾಡಿದ್ದಕ್ಕೆ  ಸೆಕ್ಷನ್ 326 ಅಡಿಯಲ್ಲಿ 5 ವರ್ಷ ಸಜೆ ಮತ್ತು 5 ಸಾವಿರ ದಂಡ ವಿಧಿಸಲಾಗಿದೆ.

ಅಲ್ಲದೇ ಗಾಯಾಳುಗಳಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆಯಲು ಆದೇಶಿಸಿದ್ದಾರೆ.

ಅಂದು ನಡೆದಿದ್ದೇನು?
2016 ರ ಜ.4 ರಂದು ಕುಂದಾಪುರ ತಾಲೂಕಿನ ಕೊರ್ಗಿ ಹೊಸ್ಮಠ ಎಂಬಲ್ಲಿ ಈ ದುರ್ಘಟನೆ ನಡೆದಿತ್ತು. ಕುಷ್ಟಪ್ಪ, ಕೊರಗಮ್ಮ ಶೆಟ್ಟಿ, ಚಂದ್ರವತಿ ಮೇಲೆ ಮಾರಣಾಂತಿಕ ಹಲ್ಲೆಗೊಳಗಾಗಿದ್ದು
ಅದೃಷ್ಟವಶಾತ್ ಪಾರಾಗಿದ್ದರು. ಮನೆಯಲ್ಲಿದ್ದ ಲಕ್ಷಾಂತರ ರೂ. ಚಿನ್ನಾಭರಣ ದೋಚಿದ್ದ ರಂಜಿತ್  ಇದು ದರೋಡೆಕೋರರ ಕೃತ್ಯ ಎಂದು ಸುಳ್ಳು ಕಾಗದ ಬರೆಸಿಕೊಂಡು ಸಹಿ ಪಡೆದಿದ್ದ.

ಆರೋಪಗಳ ವಿರುದ್ಧ ಸಾಕ್ಷ್ಯಾಧಾರಗಳು ಬಲವಾಗಿದ್ದು 20 ಮಂದಿ ಸಾಕ್ಷ್ಯಾಧಾರಗಳ ವಿಚಾರಣೆ ನಡೆಸಿದ್ದ ಕೋರ್ಟ್ ಅಪರಾಧಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.

Comments are closed.