ಕರಾವಳಿ

ಕಾಂಗ್ರೆಸ್ ಅಭ್ಯರ್ಥಿ ಲೋಬೋರಿಗೆ ವಾಮಾಚಾರ ಆರೋಪ : ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಈ ಬಗ್ಗೆ ಹೇಳಿದ್ದೇನು..

Pinterest LinkedIn Tumblr

ಮಂಗಳೂರು, ಮೇ 04 : ನಗರದ ಅತ್ತಾವರ ನಂದಿಗುಡ್ಡ ಹಿಂದೂ ರುದ್ರಭೂಮಿಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಜೆ.ಆರ್. ಲೋಬೋ ವಿರುದ್ಧ ವಾಮಾಚಾರಗೈಯಲಾಗಿದೆ ಎಂಬ ಕಾಂಗ್ರೆಸ್ ಆರೋಪದ ಬಗ್ಗೆ ಖ್ಯಾತ ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಇದೊಂದು ಮೂಢನಂಬಿಕೆ. ಇದನ್ನು ನಂಬಿ ಭಯಪಟ್ಟು ಪ್ರಾಣ ಕಳಕೊಳ್ಳಬೇಡಿ ಎಂದು ಹೇಳಿದ್ದಾರೆ.

ಸುಮಾರು 10 ದಿನಗಳ ಹಿಂದೆ ಇಲ್ಲಿ ಶಾಸಕ ಲೋಬೋಗೆ ವಾಮಾಚಾರ ಮಾಡಲಾಗಿದೆ ಎಂಬ ಮಾಹಿತಿ ಬಹಿರಂಗಗೊಂಡ ಬಳಿಕ ಕಾಂಗ್ರೆಸ್ಸಿಗರು ಇಲ್ಲಿ ತೀವ್ರ ಹುಡುಕಾಟ ನಡೆಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಮಧ್ಯೆ ಗುರುವಾರ ಮಧ್ಯಾಹ್ನ ಇಲ್ಲಿ ವಾಮಾಚಾರದ ಕೆಲವು ಕುರುಹುಗಳು ಕಾಣಿಸಿಕೊಂಡೊಡನೆ ಕಾವಲುಗಾರರು ಮತ್ತು ಕೂಲಿಯಾಳುಗಳು ಕಾಂಗ್ರೆಸ್ಸಿಗರ ಗಮನ ಸೆಳೆದಿದ್ದರು. ಅದರಂತೆ ಕಾಂಗ್ರೆಸ್ ಕಾರ್ಯಕರ್ತರು ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಅವರೊಂದಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ನಂದಿಗುಡ್ಡೆ ಸ್ಮಶಾನದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಜೆ.ಆರ್.ಲೋಬೊಗೆ ವಾಮಾಚಾರ ನಡೆದಿದೆ ಎಂದು ಕಾಂಗ್ರೆಸ್ಸಿಗರು ಆರೋಪಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ. ಅಲ್ಲಿ ವಾಮಾಚಾರ ಮಾಡಲಾಗಿದೆ ಎಂದು ಸಂಶಕಿಸಲಾದ ಪ್ರತಿಕೃತಿಯನ್ನು ಅವರು ಬಿಡಿಸಿ ನೋಡಿದಾಗ ಅದರಲ್ಲಿ ಮಲಯಾಳಂ ಭಾಷೆಯಲ್ಲಿ ಜೆ ಆರ್ ಲೋಬೋ ಹೆಸರು ಬರೆದಿರುವುದು ಬಯಲಾಗಿದೆ. ಇದೊಂದು ಮೂಢನಂಬಿಕೆ ಎಂದು ತೋರಿಸಲು ಪ್ರತಿಕೃತಿಗೆ ಹಾಕಲಾದ ದಾರ, ಬಟ್ಟೆಯನ್ನು ಬಿಚ್ಚಿ ನೋಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಇದು ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಲೋಬೋ ಹೆಸರಿರುವ ಚೀಟಿ ಕಾಣಿಸಿಕೊಂಡಿರುವುದರಿಂದ ಇದು ಅವರ ವಿರುದ್ಧ ಮಾಡಲಾದ ವಾಮಾಚಾರ ಎಂಬ ಸಂಶಯ ವ್ಯಕ್ತವಾಗಿದೆ.

ಪರಿಶೀಲನೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪ್ರೊ. ನರೇಂದ್ರ ನಾಯಕ್ ಅವರು, ನನಗೆ ಇದರಲ್ಲೆಲ್ಲಾ ನಂಬಿಕೆ ಇಲ್ಲ. ಹಾಗಾಗಿ ನಾನು ಇಂತಹ ವಿಚಾರ ಗಮನಕ್ಕೆ ಬಂದ ತಕ್ಷಣ ಸ್ಥಳಕ್ಕೆ ತೆರಳಿ ವಾಮಚಾರದ್ದು ಎನ್ನಲಾದ ಸಾಮಗ್ರಿಗಳನ್ನು ತುಳಿಯುತ್ತೇನೆ. ರಾಜಕೀಯ ಕಾರಣಕ್ಕಾಗಿ ಇಲ್ಲಿ ವಾಮಚಾರ ಮಾಡಲಾಗಿದೆ ಎಂಬ ಮಾಹಿತಿ ಎ.23ರಂದು ನನಗೆ ಲಭಿಸಿತ್ತು. ಅದರಂತೆ ನಾನು ಇಲ್ಲಿಗೆ ಆಗಮಿಸಿ ಆ ಸಾಮಗ್ರಿಗಾಗಿ ಹುಡುಕಾಟ ನಡೆಸಿದ್ದೆ. ಆದರೆ ಸಿಕ್ಕಿರಲಿಲ್ಲ.

ಆದರೆ ಈಗ ಇಲ್ಲಿ ವಾಮಾಚಾರ ನಡೆಸಿರುವುದರ ಕುರುಹು ಇದೆ ಎಂದು ತಿಳಿದೊಡನೆ ಮತ್ತೆ ಆಗಮಿಸಿ ಈ ಸಾಮಗ್ರಿಗಳಿಗೆ ತುಳಿದೆ. ಯಾಕೆಂದರೆ, ಇದೊಂದು ಮೂಢನಂಬಿಕೆ. ಇದನ್ನು ತುಳಿದರೆ ಏನೂ ಆಗುವುದಿಲ್ಲ ಎಂಬುದರ ಬಗ್ಗೆ ಜನರಲ್ಲಿ ಪ್ರಜ್ಞೆ ಹುಟ್ಟಿಸಬೇಕಿದೆ. ಇದನ್ನು ನಂಬಿ ಭಯಪಟ್ಟು ಪ್ರಾಣ ಕಳಕೊಳ್ಳಬೇಡಿ ಎಂಬ ಸಂದೇಶ ರವಾನಿಸುವ ಸಲುವಾಗಿ ಹೀಗೆ ಮಾಡಿದೆ. ಅಂದಹಾಗೆ, ಇದು ಭಾರತೀಯ ವಾಮಾಚಾರದ ಸಾಮಗ್ರಿಗಳಲ್ಲ. ಆಫ್ರಿಕನ್ ಮೂಲದ ಸಾಮಗ್ರಿಗಳಿವು. ಮೌಢ್ಯಕ್ಕೆ ಸಂಬಂಧಿಸಿದ ಈ ಸಾಮಗ್ರಿಗಳು ವಿದೇಶದಿಂದಲೂ ಆಮದಾಗುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಯಾರೂ ಇದನ್ನು ನಂಬಬೇಡಿ’ ಎಂದು ಹೇಳಿದ್ದಾರೆ.

Comments are closed.