ಕರಾವಳಿ

ಲೋಬೋರ “ಸಾಧನೆಯ ಹಾದಿ” ಪುಸ್ತಕದಲ್ಲಿ ಪರಿಹಾರ ನೀಡದೇ ಫೋಟೊ ದುರ್ಬಳಕೆ : ಶರತ್ ಮೆಂಡನ್ ದಂಪತಿ ಆರೋಪ

Pinterest LinkedIn Tumblr

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಜೆ.ಆರ್. ಲೋಬೋ ಅವರ “ಸಾಧನೆಯ ಹಾದಿ” ಪುಸ್ತಕದಲ್ಲಿ ಸುಳ್ಳು ಮಾಹಿತಿ ನೀಡುವ ಮೂಲಕ ತಮಗೆ ಅವಮಾನ ಮಾಡಲಾಗಿದೆ ಎಂದು ಬೆಂಗರೆಯ ತೋಟ ನಿವಾಸಿ ಶರತ್ ಮೆಂಡನ್ ದಂಪತಿ ಆರೋಪಿಸಿದ್ದಾರೆ.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಬಿಡುಗಡೆ ಮಾಡಿರುವ ತಮ್ಮ ಸಾಧನೆಯ ಹಾದಿ ಪುಸ್ತಕದಲ್ಲಿ ನಮಗೆ ಯಾವೂದೇ ರೀತಿಯ ಪರಿಹಾರ, ಸಹಾಯ ಹಸ್ತ ನೀಡದೇ ನಮ್ಮ ಚಿತ್ರ ಹಾಕುವ ಮೂಲಕ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದರು.

ಮೂರು ವರ್ಷದ ಹಿಂದೆ ಬೆಂಗರೆ ತೋಟದಲ್ಲಿರುವ ನಮ್ಮ ಮನೆ ಬೆಂಕಿ ಅನಾಹುತದಲ್ಲಿ ಸಂಪೂರ್ಣ ಸುಟ್ಟು ಹೋಗಿದೆ. ನಾವು ಬೇರೆ ದಾರಿಯಿಲ್ಲದೆ ಅಕ್ಷರಶ: ಬೀದಿ ಪಾಲಾದೆವು. ಮೀನುಗಾರಿಕೆಯಿಂದ ಬರುವ ಅಲ್ಪ ಅದಾಯ ನಮ್ಮ ಬದುಕಿಗೆ ದಾರಿಯಾಗಿತ್ತು. ಘಟನೆ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ಶಾಸಕ ಜೆ.ಆರ್.ಲೋಬೋ ಅವರು ಮನೆ ಕಟ್ಟಲು ಸಹಾಯ ಹಾಗೂ ಬೆಂಕಿ ಅವಘಡ ಸಂಬಂಧ ಪರಿಹಾರ ನೀಡುವ ಭರವಸೆ ನೀಡಿದ್ದರು. ಇದರ ಬಳಿಕ ನಾವು ಹಲವಾರು ಬಾರಿ ಅವರಲ್ಲಿ ಈ ಬಗ್ಗೆ ಮನವಿ ಸಲ್ಲಿಸಿದ್ದೇನೆ. ಇವತ್ತಿಗೆ ಮೂರು ವರ್ಷ ಕಳೆದಿದೆ. ಒಂದು ರೂಪಾಯಿ ನಮಗೆ ಬಂದಿಲ್ಲ ಎಂದು ವಿವರಿಸಿದರು.

ಶಾಸಕರು ತಮ್ಮ ಸಾಧನೆಗಳು ಎಂದು ಪ್ರಕಟಿಸಿರುವ ಪುಸ್ತಕದಲ್ಲಿ ನಮ್ಮ ಚಿತ್ರ ಹಾಕಿರುವುದು ಗಮನಕ್ಕೆ ಬಂತು. ಏನು ಸಹಾಯ ಮಾಡದೇ ಬರೇ ರಾಜಕೀಯ ಉದ್ದೇಶಕ್ಕಾಗಿ ನಮ್ಮ ಚಿತ್ರವನ್ನು ಬಳಸಿಕೊಳ್ಳಲಾಗಿದೆ. ಇದು ಏನ್ನನ್ನು ಸೂಚಿಸುತ್ತದೆ ಎನ್ನುವುದನ್ನು ಶಾಸಕರೇ ಹೇಳಬೇಕು.

ಯಾವುದೇ ಕೆಲಸ ಮಾಡದೇ ಈ ರೀತಿ ಪ್ರಚಾರಗಿಟ್ಟಿಸಿಕೊಳ್ಳುವುದು ಶಾಸಕರಿಗೆ ಶೋಭೆ ತರುವುದೇ ? ನಾವು ಅವರನ್ನು ಟೀಕಿಸುವ ಉದ್ದೇಶದಿಂದ ಇಲ್ಲಿ ಬಂದಿಲ್ಲ. ಅದರೆ ನಮ್ಮ ಫೋಟೋ ಹಾಕಿ ಅವರು ಮತ ಪಡೆಯಲು ಮುಂದಾಗಿರುವುದು ನಮಗೆ ನೋವಾಗಿದೆ. ಯಾವ ನಾಯಕರೇ ಅಗಲಿ ಇಂತಹ ಕೆಲಸಗಳಿಗೆ ಕೈ ಹಾಕಬಾರದು ಎಂದು ಶರತ್ ಮೆಂಡನ್ ಹೇಳಿದರು.

Comments are closed.