ಕರಾವಳಿ

ಮೋದಿಯವರ ಭಾಷಣ ಕೇಳಲು ಮಂಗಳೂರಿನ ಕೇಂದ್ರ ಮೈದಾನಕ್ಕೆ ಹರಿದು ಬಂದ ಜನಸಾಗರ

Pinterest LinkedIn Tumblr

ಮಂಗಳೂರು, ಮೇ 06: ಮಂಗಳೂರಿನಲ್ಲಿ ಶನಿವಾರ ಸಂಜೆ ನಡೆದ ಬಿಜೆಪಿ ಸಮಾವೇಶಕ್ಕೆ ಬೃಹತ್ ಜನಸಾಗರವೇ ಹರಿದು ಬಂದಿದ್ದು, ನಗರದ ಕೇಂದ್ರ ಮೈದಾನದಲ್ಲಿ ಅಯೋಜಿಸಿದ್ದ ಬಿಜೆಪಿ ಚುನಾವಣಾ ಸಭೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಆಡಳಿತಕ್ಕೆ ಬರಲಿದೆ ಎಂಬ ಪ್ರಚಾರದ ಮೂಲಕ ಮತದಾರರನ್ನು ನಿರಾಶರನ್ನಾಗಿಸುವ ಪ್ರಯತ್ನ ನಡೆಸಲಾಗುತ್ತಿದೆ. ಆದರೆ ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುವುದರೊಂದಿಗೆ ಬಿಜೆಪಿಯ ಮಿಶನ್ ಸುರಕ್ಷಿತ ಕರ್ನಾಟಕ ನಿರ್ಮಾಣ ಎಂದು ಹೇಳಿದ ಅವರು, ಮೇ 12ರ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿರುವ ಪಾಪಕ್ಕೆ ಶಿಕ್ಷೆ ದೊರೆಯಲಿದೆ. ರಾಜ್ಯದಲ್ಲಿ ಹತ್ಯೆಯಾದ ಸಂಘ ಪರಿವಾರದ ಕಾರ್ಯಕರ್ತರ ಹತ್ಯಾಕೋರರಿಗೆ ಮೇ 15ರ ಬಳಿಕ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ಆಗಲಿದೆ ಎಂದರು.

ಮಹಾರಾಷ್ಟ್ರ, ಗೋವಾ, ಮಧ್ಯ ಪ್ರದೇಶ, ರಾಜಸ್ತಾನ್, ಚತ್ತೀಸ್‌ಗಡ, ಉತ್ತರಾಕಾಂಡ, ಹಿಮಾಚಲ ಪ್ರದೇಶ, ತ್ರಿಪುರಾ ಮೊದಲಾದ ರಾಜ್ಯಗಳಲ್ಲಿ ಬಿಜೆಪಿ ಈಗಾಗಲೇ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಕಾಂಗ್ರೆಸ್ ನೀರಿಲ್ಲದ ಮೀನಿನಂತೆ ಒದ್ದಾಡುತ್ತಿದೆ. ಇನ್ನು ಕರ್ನಾಟಕದ ಸರದಿ. ಒಂದರ ಮೇಲೊಂದರಂತೆ ರಾಜ್ಯಗಳಲ್ಲಿ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ಸಿಗರು ಮಾನಸಿಕ ಸಂತುಲವನ್ನು ಕಳೆದುಕೊಂಡಿದ್ದು, ಇದು ವೈದ್ಯರಿಗೆ ತಪಾಸಣೆಯ ವಿಷಯವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಸಮುದ್ರ ವ್ಯಾಪಾರಕ್ಕೆ ಹೊಸ ರೂಪು ದೊರೆಯಲಿದ್ದು, ಸಮುದ್ರದ ಮೂಲಕ ನಡೆಯುವ ವ್ಯಾಪಾರ ವಹಿವಾಟು ಹೆಚ್ಚಲಿದೆ. ನಾಲ್ಕು ಹೊಸ ಮೀನುಗಾರಿಕಾ ಬಂದರು, ಆಳ ಸಮುದ್ರದ ಮೀನುಗಾರರಿಗೆ ಬೋಟು ಖರೀದಿಗೆ ಆರ್ಥಿಕ ನೆರವು, ಅಡಿಕೆ ಬೆಳೆಗಾರರು ಸೇರಿದಂತೆ ರೈತರ ರಕ್ಷಣೆಗೆ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಮುಂದಿನ ಸರಕಾರ ಬದ್ಧವಾಗಲಿದೆ ಎಂದು ಅವರು ಹೇಳಿದರು.

ಸ್ವಚ್ಛತಾ ಅಭಿಯಾನ ಮಾಡಿದರೆ ವಿರೋಧಿಸುತ್ತಾರೆ, ಗೇಲಿ ಮಾಡುತ್ತಾರೆ, ಮಹಿಳೆಯರು ಬಯಲಿನಲ್ಲಿ ಶೌಚಾಲಯ ಮಾಡುವವರಿಗೆ ಗೌರವ ಸಿಗುವುದಾದರೆ ನಾನು ಶೌಚಾಲಯದ ಬಗ್ಗೆ ಮಾತನಾಡಿದರೆ ಕಾಂಗ್ರೆಸ್ಸಿಗರು ತಮಾಷೆ ಮಾಡುತ್ತಾರೆ. ಯೋಗದ ಬಗ್ಗೆ ಮಾತನಾಡಿದರೂ ವಿರೋಧಿಸುತ್ತಾರೆ. ಯಾವುದೇ ವಿಷಯದಲ್ಲಿ ಮೋದಿ ಶಬ್ಧ ಕೇಳಿದಾಕ್ಷಣ ವಿರೋಧ ಮಾಡುವುದು ಕಾಂಗ್ರೆಸ್ಸಿಗರ ಸ್ವಭಾವ. ನೋಟು ಅಮ್ಯಾನೀಕರಣದ ಬಗ್ಗೆ ಇಂದಿಗೂ ಅಳುತ್ತಿದ್ದಾರೆ.

ನೋಟು ಅಮಾನ್ಯೀಕರಣದ ಬಳಿಕ ಅದೆಷ್ಟು ಕಾಂಗ್ರೆಸ್ ದಿಗ್ಗಜರ ಬಳಿಯಿಂದ ನೋಟುಗಳ ಬಂಡಲು ಹೊರಬಿದ್ದಿದೆ ಎಂಬುದು ತಮಗೆಲ್ಲಾ ತಿಳಿದಿದೆ. ಅದಕ್ಕಾಗಿ ಅವರ ಸಿಟ್ಟು ಇನ್ನೂ ಕಡಿಮೆಯಾಗಿಲ್ಲ. ಬಡವರನ್ನು ಲೂಟಿ ಮಾಡಿದವರಿಂದ ಬಡವರಿಗೆ ಅದನ್ನು ಹಿಂತಿರಿಸುಗಿಸಲು ನಾನು ನಿರ್ಣಯಿಸಿದ್ದೇನೆ. ಮೋದಿ ವಿರೋಧದ ಹೊರತು ಕಾಂಗ್ರೆಸ್‌ಗೆ ಬೇರೆ ಅಜೆಂಡಾವೇ ಉಳಿದಿಲ್ಲ. ದೇಶದಲ್ಲಿದ್ದರೂ, ಯಾವ ರಾಜ್ಯದಲ್ಲಿದ್ದರೂ, ವಿದೇಶದಲ್ಲಿದ್ದರೂ ವಿರೋಧಿಸುತ್ತಾರೆ ಎಂದು ಮೋದಿ ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಶನಿವಾರ ಅಪರಾಹ್ನದ ಬಳಿಕ ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ನೆಹರೂ ಮೈದಾನ ಪ್ರವೇಶಿಸಿದ್ದರು. ಸಂಜೆ 6 ಗಂಟೆಯ ಹೊತ್ತಿಗೆ ಜನ ಸಮೂಹದಿಂದ ಮೈದಾನ ತುಂಬಿತ್ತು. ಸಂಜೆ 6:50ರ ಹೊತ್ತಿಗೆ ಪ್ರಧಾನಿ ಆಗಮನ ಆಗುತ್ತಿದ್ದಂತೆ ಮತ್ತೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮೈದಾನವನ್ನು ಪ್ರವೇಶಿಸಿದರು. ನೂರಾರು ಕಾರ್ಯಕರ್ತರು ನೆಹರೂ ಮೈದಾನ ಸುತ್ತಲಿನ ಗೇಟ್ ಹತ್ತಿ ತಮ್ಮ ನೆಚ್ಚಿನ ನಾಯಕನನ್ನು ಕಂಡು ಖುಷಿಪಟ್ಟರು. ನರೇಂದ್ರ ಮೋದಿ ಅವರ ಭಾಷಣದುದ್ದಕ್ಕೂ ಕಾರ್ಯಕರ್ತರಿಂದ ಹರ್ಷೋದ್ಘಾರ ಮೊಳಗಿದ್ದವು.

Comments are closed.