ಕುಂದಾಪುರ: ಕಾಡುಕೋಣವೊಂದು 40 ಅಡಿ ಆಳವಿರುವ ಕುಡಿಯುವ ನೀರಿನ ಬಾವಿಗೆ ಬಿದ್ದ ಘಟನೆ ಉಡುಪಿ ಜಿಲ್ಲೆಯ ಕೋಟದ ಕಾಸನಗುಂಡಿ ಎಂಬಲ್ಲಿ ಭಾನುವಾರ ರಾತ್ರಿ ನಡೆದಿದ್ದು ಸೋಮವಾರ ಸಂಜೆಯವರೆಗೂ ಕಾಡುಕೋಣದ ರಕ್ಷಣಾ ಕಾರ್ಯ ನಡೆಯುತ್ತಿದೆ.
ಕೋಟದ ಸರಕಾರಿ ಆಸ್ಪತ್ರೆಯ ಪಕ್ಕದಲ್ಲಿರುವ ಬಾವಿಗೆ ತಡರಾತ್ರಿ ಬೃಹತ್ ಬಾವಿಗೆ ಕಾಡುಕೋಣ ಬಿದ್ದಿದ್ದು ವಿಚಾರ ತಿಳಿಯುತ್ತಲೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಕಾಡುಕೋಣವನ್ನು ಮೇಲಕ್ಕೆತ್ತಲು ಪ್ರಯತ್ನಿಸಿದರೂ ಕೂಡ ಬಾವಿಯಲ್ಲಿ 10 ಅಡಿಗೂ ಅಧಿಕ ನೀರಿದ್ದ ಕಾರಣ ಸಾಧ್ಯವಾಗಿಲ್ಲ. ಬಳಿಕ ಬಾವಿಯಿಂದ ವಿದ್ಯುತ್ ಮೋಟಾರ್ ಮೂಲಕ ನೀರು ಹೊರಗಡೆ ಹಾಯಿಸಿ ನೀರು ಕಾಲಿ ಮಾಡುವ ಕಾರ್ಯ ಮಾಡಿದ್ದು ಸೋಮವಾರ ಮಧ್ಯಾಹ್ನದವರೆಗೂ ಈ ಪ್ರಕ್ರಿಯೆ ನಡೆದಿದೆ.
ಅರವಳಿಕೆ ಮದ್ದು ಸಾಕಾಗಿಲ್ಲ..!
ಬಾವಿಗೆ ಬಿದ್ದು ಒದ್ದಾಡುತ್ತಿರುವ ಕಾಡುಕೋಣಕ್ಕೆ 2 ಬಾರಿ ಅರವಳಿಕೆ ಚುಚುಮದ್ದನ್ನು ಅರಣ್ಯಾಧಿಕಾರಿಗಳು ನೀಡಿದರೂ ಕೂಡ ಅರವಳಿಕೆ ಮದ್ದಿಗೆ ಕಾಡುಕೋಣ ಸ್ಪಂದಿಸಿಲ್ಲ. ಕೋಣಕ್ಕೆ ಮತ್ತು ಬಾರದೇ ಮೇಲಕ್ಕೆತ್ತುವ ಕಾರ್ಯ ಸಮಸ್ಯೆಗೆ ದಾರಿ ಮಾಡಿ ಕೊಡುವ ಕಾರಣದಿಂದಾಗಿ ಪಿಲಿಕೊಳದಿಂದ ಇನ್ನಷ್ಟು ಅರವಳಿಎ ಮದ್ದು ಕೋಟಕ್ಕೆ ತರಿಸಲಾಗುತ್ತಿದೆಯೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೋಟ ಭಾಗದಲ್ಲಿ ಕಾಡುಕೋಣ ಸಂಚಾರ ಇದೇ ಮೊದಲು ಎನ್ನಲಾಗುತ್ತಿದ್ದು ಆಹಾರ ಅರಸಿ ಬಂದಿರುವ ಶಂಕೆ ವ್ಯಕ್ತವಾಗಿದೆ. ರಾತ್ರಿಯಿಂದಲೂ ನಡೆಯುತ್ತಿರುವ ರಕ್ಷಣಾ ಕಾರ್ಯ ಸಂಜೆ ವೇಳೆಗೆ ಮುಕ್ತಾಯವಾಗುವ ಸಾಧ್ಯತೆಗಳಿದೆ. ಕುಂದಾಪುರ ಉಪವಿಭಾಗದ ಎಸಿಎಪ್ ಅಚ್ಚಪ್ಪ. ಎ.ಎ ಗೋಪಾಲ್, ವಲಯ ಅರಣ್ಯಾಧಿಕಾರಿ ಗೋಪಾಲ್, ಅರಣ್ಯ ವೀಕ್ಷಕರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಚಿತ್ರ, ವರದಿ- ಯೋಗೀಶ್ ಕುಂಭಾಸಿ
Comments are closed.