ಗಲ್ಫ್

ಡಾ| ಸುನಿತಾ ಶೆಟ್ಟಿಯವರಿಗೆ ಯು.ಎ.ಇ. ಬಂಟ್ಸ್ ನ ಪ್ರತಿಷ್ಟಿತ “ಬಂಟ ವಿಭೂಷಣ ಪ್ರಶಸ್ತಿ” ಪ್ರದಾನ

Pinterest LinkedIn Tumblr

ಕರ್ನಾಟಕದ ಕರಾವಳಿ ತೀರದ ತುಳುನಾಡಿನ ಹಿರಿಯ ಸಾಹಿತಿ, ಕವಯತ್ರಿ, ಡಾ| ಸುನಿತಾ ಶೆಟ್ಟಿಯವರಿಗೆ ಯು.ಎ.ಇ. ಬಂಟ್ಸ್ ಆಶ್ರಯದಲ್ಲಿ ನೀಡಲಾಗುವ 2018ನೇ ಸಾಲಿನ ಪ್ರತಿಷ್ಠಿತ “ಬಂಟ ವಿಭೂಷಣ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಗುವುದು.

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಬಂಟ್ ಸಮುದಾಯದವರ 44ನೇ ವಾರ್ಷಿಕ ಸಮ್ಮಿಲನ ಮತ್ತು ಬಂಟ ವಿಭೂಷಣ ಪ್ರಶಸ್ತಿ ಪ್ರದಾನ 2018 ಮೇ 11ನೇ ತಾರೀಕು ಶುಕ್ರವಾರ ದುಬಾಯಿಯಲ್ಲಿರುವ ಮೇರಿಯಟ್ ಹೋಟೆಲ್ ಸಭಾಂಗಣದಲ್ಲಿ ಯು.ಎ.ಇ. ಬಂಟ್ಸ್‍ನ ಮಹಾಪೋಷಕರಾದ ಡಾ. ಬಿ. ಆರ್. ಶೆಟ್ಟಿಯವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಮಾರಂಭದ ಮುಖ್ಯ ಅತಿಥಿಯಾಗಿ ಅಲ್ ಕಾರ್ಗೊ ಲಾಜಿಸ್ಟಿಕ್ ಗ್ಲೋಬಲ್ ನ ಸಿ.ಎ.ಒ. ಮತ್ತು ವ್ಯ್ವಸ್ಥಾಪಕ ನಿರ್ದೇಶಕರಾದ ಶ್ರೀ ಶಶಿಕಿರಣ್ ಶೆಟ್ಟಿ ಹಾಗೂ ಗೌರವ ಅತಿಥಿಯಾಗಿ ವಲ್ರ್ಡ್ ಬಂಟ್ಸ್ ಫೆಡರೆಶನ್ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಆಗಮಿಸಲಿದ್ದಾರೆ.

ಅತಿಥಿಗಳಾಗಿ ಶ್ರೀ ಕರ್ನೂರ್ ಮೋಹನ್ ರೈ ಮತ್ತು ಚಲನ ಚಿತ್ರನಾಯಕ ನಟ ಅಶೋಕ್ ಶೆಟ್ಟಿ ಹಾಗೂ ಕಾರ್ಯಕ್ರಮ ನಿರೂಪರಾಗಿ ನಮ್ಮ ಟಿ.ವಿ. ಯ ಶ್ರೀ ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.

ಡಾ| ಸುನಿತಾ ಶೆಟ್ಟಿ ಶೆಟ್ಟಿಯವರ ಹೆಜ್ಜೆ ಗುರುತುಗಳು…

ಕರಾವಳಿ ಕರ್ನಾಟಕದ ಮಂಗಳೂರಿನ ಹತ್ತಿರ ಕಳವಾರು ವಿನಲ್ಲಿ 1939ರಲ್ಲಿ ಜನಿಸಿದವರು. ಉತ್ತಮ ಸಂಸ್ಕೃತಿಯ ಮನೆತನದಲ್ಲಿ ಬೆಳೆದು ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಎಕಾನಮಿಕ್ಸ್, ಪೊಲಿಟಿಕಲ್ ಸೈನ್ಸ್ ಹಾಗೂ ಕನ್ನಡ ಮೇಜರ್ ನಲ್ಲಿ ಪದವಿಯನ್ನು ಪಡೆದರು.

ಡಾ| ಸುನಿತಾ ಶೆಟ್ಟಿಯವರ ಸಹೋದರ ಮುಂಬೈಯಲ್ಲಿ ನೆಲೆಸಿದ್ದುದರಿಂದ ತಾವು ಮುಂಬೈ ನತ್ತ ಪಯಣ ಬೆಳೆಸಿ ತಮ್ಮ ವೃತ್ತಿ ಜೀವನ ಶಿಕ್ಷಕಿಯಾಗಿ ಪ್ರಾರಂಭಿಸಿದರು. ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಮುಂಬೈ ವಿಶ್ವ ವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತರ ಪದವಿಯನ್ನು ಪಡೆದರು. ಮುಂಬೈ ವಿಶ್ವವಿದ್ಯಾಲಯದಲ್ಲಿ ಅಹ್ವಾನದ ಮೇರೆಗೆ ಪ್ರೊಫೆಸರ್ ಆಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿ ತನ್ನ 60ನೇ ವಯಸ್ಸಿನಲ್ಲಿ ಸೇವೆಯಿಂದ ನಿವೃತ್ತಿ ಪಡೆದರು.

ಸಾಮಾಜಿಕ ಚಿಂತನೆಯಲ್ಲಿ….

ಸಮಾಜದ ಕೆಲವು ಪದ್ದತಿಗಳಲ್ಲಿ ತುಂಬಾ ಕಳವಳ ಮೂಡಿಸಿದ್ದು ಹೆಚ್ಚಿನ ಹೆಣ್ಣು ಮಕ್ಕಳಿಗೆ ವರದಕ್ಷಿಣೆ ನೀಡಲಾಗದೆ ವಯಸ್ಸು ಮೀರಿದ್ದರೂ ಮದುವೆಯಾಗದೆ ಉಳಿದದ್ದು. ಈ ಚಿಂತೆ ಡಾ. ಸುನಿತಾ ಶೆಟ್ಟಿಯವರಿಗೆ ತುಂಬಾ ಕಾಡಿತ್ತು. ವರನ ಕಡೆಯವರು ಅಪಾರ ಮೊತ್ತದ ಬೇಡಿಕೆ ಇಟ್ಟು ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಸಮಾಜದ ದಬ್ಬಾಳಿಕೆಯನ್ನು ವಿರೋಧಿಸಿ ಹೋರಾಟಕ್ಕೆ ಇಳಿದು ” ಯಂಗ್ ಕಾಂಗ್ರೆಸ್ ಸ್ವಯಮ್ ಸೇವಕ್” ಆಂದೋಲನ ಪ್ರಾರಂಭಿಸಿದರು. ಸ್ವತಹ ತಾವೇ ಮದುವೆಯಾಗದೆ ಉಳಿಯಲು ತೀರ್ಮಾನಿಸಿದರು. ಇವರ ಹೋರಾಟದ ಫಲವಾಗಿ ಅನೇಕ ಯುವಕರು ಮುಂದೆ ಬಂದು ಇವರ ಹೋರಾಟಕ್ಕೆ ಬೆಂಬಲ ಸೂಚಿಸಿ ವರದಕ್ಷಿಣೆ ಪಡೆಯದೆ ವಿವಾಹವಾಗಲು ತೀರ್ಮಾಸಿದರು. ಸಮಾಜದಲ್ಲಿ ವರದಕ್ಷಿಣೆ ಪಿಡುಗಿನ ನಿವಾರಣೆಯಲ್ಲಿ ಬದಲಾವಣೆಯ ಚಿತ್ರಣ ಮೂಡಿಸುವ ಲಕ್ಷಣಗಳು ಕಾಣತೊಡಗಿದವು. ಇದೇ ಸಂದರ್ಭದಲ್ಲಿ ಡಾ. ಸುನಿತಾ ಶೆಟ್ಟಿಯವರ ಚಿಕ್ಕಪ್ಪನವರು ವರದಕ್ಷಿಣೆ ಇಲ್ಲದೆ ವಿವಾಹವಾಗುವ ಓರ್ವ ಯುವಕನನ್ನು ಕರೆತಂದುದರ ಫಲವಾಗಿ ಇವರು ಒಪ್ಪಿಗೆ ನೀಡಿ 1957 ರಲ್ಲಿ ವಿವಾಹವಾದರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಮೂರು ಮಕ್ಕಳ ತಾಯಿಯಾದರು.

ಸಾಹಿತ್ಯ ಲೋಕದಲ್ಲಿ ಪಯಣ…

ಡಾ| ಸುನಿತಾ ಶೆಟ್ಟಿಯವರ ಸಾಹಿತ್ಯ ಕೃಷಿ ಪ್ರಾರಂಭವಾಗಿದ್ದು “ಪ್ರಜಾಮತ” ವಾರಪತ್ರಿಕೆಯಲ್ಲಿ ಕಥೆಗಳನ್ನು ಪ್ರಕಟಿಸುವ ಮೂಲಕ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕವನ ವಾಚಿಸುವುದರ ಮೂಲಕ ಮನ ಗೆದ್ದು ನಂತರ ವಿದ್ಯಾರ್ಥಿಗಳಲ್ಲಿ ಕವನದ ಬಗ್ಗೆ ಹೆಚ್ಚು ಹೆಚ್ಚು ಆಸಕ್ತಿ ಮೂಡಿಸುವಲ್ಲಿ ತೃಪ್ತಿಕಂಡರು. ಪ್ರಾರಂಭದಲ್ಲಿ ಕನ್ನಡ ಭಾಷೆಯ ಕವನಗಳನ್ನು ರಚಿಸುತಿದ್ದರು ನಂತರ ತನ್ನ ಮಾತೃಭಾಷೆ ತುಳುವಿನಲ್ಲಿಯೂ ಕವನ ರಚಿಸಿದರು. ಪ್ರಥಮಬಾರಿಗೆ ಕವನ ಸಂಕಲನ “ಪಿಂಗಾರ” ಪ್ರಕಟನೆಗೊಂಡು ಪುಸ್ತಕ ಲೋಕದಲ್ಲಿ ಭದ್ರಬುನಾದಿ ಹಾಕಿದಂತಾಯಿತು. ನಂತರದ ಪ್ರಕಟಣೆಗಳು ‘ನಿನಾದ’, ‘ಅಂತರಗಂಗೆ’, ‘ಪಯಣ’, ‘ನನ್ನ ದೋಣಿ ನಿನ್ನ ತೀರ’ ಇಂತಹ ಕವನಗಳ ಜೊತೆಗೆ ಸಣ್ಣ ಕಥೆ, ಪ್ರಬಂಧ, ನಾಟಕ, ಪ್ರವಾಸ ಕಥನ ಇತ್ಯಾದಿ 23 ಪುಸ್ತಕಗಳು ಲೋಕಾರ್ಪಣೆಯಾಗಿದೆ.

ಡಾ| ಸುನಿತಾ ಶೆಟ್ಟಿಯವರು ಹೆಚ್ಚು ಪ್ರವಾಸದ ಮೂಲಕ ತಮ್ಮ ಸಾಹಿತ್ಯ ಜ್ಞಾನದ ಅನುಭವವನ್ನು ಹೆಚ್ಚಿಸಿಕೊಂಡವರು. ಅಮೇರಿಕಾದಲ್ಲಿ ನಡೆದ ವಿಶ್ವ ಬಂಟರ ಸಮ್ಮೇಳನದಲ್ಲಿ ಆಮಂತ್ರಿತ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ನಂತರದ ವರ್ಷಗಳಲ್ಲಿ ಯೂರೋಪ್ ರಾಷ್ಟ್ರಗಳು, ದುಬಾಯಿ, ಕುವೈತ್, ಬಹರೈನ್, ಅಂಡಮಾನ್ ನಿಕೋಬಾರ್ ದ್ವೀಪಗಳು, ಹಾಂಗಕಾಂಗ್, ಮಲೇಶಿಯಾ, ನೇಪಾಳ್ ಹಾಗೂ ಭಾರತದ ಉದ್ದ ಅಗಲಗಳಲ್ಲಿ ಪ್ರವಾಸವನ್ನು ಮಾಡಿದ್ದಾರೆ. ಏಕಾಂಗಿಯಾಗಿ ಪ್ರವಾಸ ಮಾಡಿರುವುದು ಅವರ ಆತ್ಮಸ್ಥೈರ್ಯಕ್ಕೆ ಸಾಕ್ಷಿಯಾಗಿದೆ.

ಡಾ| ಸುನಿತಾ ಶೆಟ್ಟಿಯವರ ತಮ್ಮ ಪ್ರವಾಸದ ಅನುಭವವನ್ನು ಪ್ರವಾಸ ಕಥನದ ಮಾಲಿಕೆಯಲ್ಲಿ ಪ್ರಕಟಿಸಿದ ಪ್ರಥಮ ಪುಸ್ತಕ “ಪ್ರವಾಸಿಯ ಹೆಜ್ಜೆಗಳು” ಜನಪ್ರಿಯತೆಗೆ ಸಾಕ್ಷಿಯಾಗಿ “ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ” ಪಡೆದಿದ್ದಾರೆ. ನಂತರದ ಪ್ರವಾಸಿ ಕಥನ ತಮ್ಮ ಪ್ರವಾಸದಲ್ಲಿ ಕಂಡಿರುವ ವೈವಿಧ್ಯಮಯ ಕಲೆ ಸಂಸ್ಕೃತಿಯ ಬಗ್ಗೆ “ಸಂಸ್ಕೃತಿ ಪಯಣ” ಸಾಂಸ್ಕೃತಿಕ ಲೋಕದ ಅನಾವರಣಗೊಂಡಿದೆ. ಪ್ರಖ್ಯಾತ ಚಿತ್ರ ಕಲಾವಿದ ಕೆ. ಕೆ. ಹೆಬ್ಬಾರ್ ರವರ ಜೀವನ ಚರಿತ್ರೆ ಇಂತಹ ಹಲವು ಪ್ರಕಟಿತ ಪುಸ್ತಕಗಳ ಸಾಹಿತ್ಯ ಶೈಲಿ, ಅಧ್ಯಯನದ ಅನುಭವವನ್ನು ಸಾಹಿತ್ಯ ಅಕಾಡೆಮಿ ಗುರುತ್ತಿಸಿ, ಇವರಿಗೆ ಕನ್ನಡ ಮತ್ತು ತುಳು ಭಾಷೆಯಲ್ಲಿ, ಭಾಷೆ, ಜನಪದ, ಸಂಸ್ಕೃತಿಯ ಬಗ್ಗೆ ವಿಶ್ಲೇಷಣೆ ಸಾಹಿತ್ಯ ರಚಿಸಲು ನಿಯೋಜಿಸಿ ಅವಕಾಶ ಕಲ್ಪಿಸಿದರು.

ಸಾಧಕಿಗೆ ಸಂದಿರುವ ಪ್ರಶಸ್ತಿ ಸನ್ಮಾನ ಗೌರವಗಳು…

ಮುಂಬೈನಲ್ಲಿ ಕಳೆದ ಐದು ದಶಕಗಳಿಂದ ನೆಲೆಸಿರುವ ಡಾ| ಸುನಿತಾ ಶೆಟ್ಟಿಯವರು ತನ್ನ 79ರ ವಯಸ್ಸಿನಲ್ಲೂ ಸಹ ಸಕ್ರೀಯಾ ಬರಹಗಾರರಾಗಿ, ತಮ್ಮ ಸಾಹಿತ್ಯದ ಪ್ರಕಟಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸಾಧನೆಯ ಹಾದಿಯಲ್ಲಿ ಕೋಟ್ಯಾಂತರ ಕನ್ನಡಿಗರು ತುಳುವರ ಅಭಿಮಾನ, ಗೌರವಕ್ಕೆ ಪಾತ್ರರಾಗಿದ್ದಾರೆ. ಇವರಿಗೆ ಸರ್ಕಾರ, ಸಂಘ ಸಂಸ್ಥೆಗಳು ಪ್ರಶಸ್ತಿ, ಸನ್ಮಾನ ಗೌರವಗಳನ್ನು ನೀಡಿದೆ.

* ವೀರರಾಣಿ ಅಬ್ಬಕ್ಕ ಪ್ರಶಸ್ತಿ -1998 (ಅಬ್ಬಕ್ಕ ಪ್ರತಿಷ್ಠಾನ – ಕರ್ನಾಟಕ)
* ಜಯದೇವಿ ತಾಯಿ ಲಿಗಾಡೆ ಪ್ರಶಸ್ತಿ – 2012 (ವಿದ್ಯಾಧರ ಕನ್ನಡ ಪ್ರತಿಷ್ಠಾನ)
* ಕರ್ನಾಟಕ ಕಲಾಶ್ರೀ ಪ್ರಶಸ್ತಿ -2012
* ಸಿರಿ- 2018 (ಬಂಟರ ಯಾನೆ ನಾಡವರ ಸಂಘ-ಮಂಗಳೂರು)
* ಆಳ್ವಾಸ್ ನುಡಿಸಿರಿ ಪ್ರಶಸ್ತಿ
* ಗುರುನಾರಾಯಣ ಸಾಹಿತ್ಯ ಪ್ರಶಸ್ತಿ – ಮುಂಬೈ
* ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ – (ಕರ್ನಾಟಕ ಸರ್ಕಾರ)
* ಪುಸ್ತಕ ಪ್ರಶಸ್ತಿ (ತುಳು ಸಾಹಿತ್ಯ ಅಕಾಡೆಮೆ)
* ಕಿಲ್ಲೆ ಪ್ರಶಸ್ತಿ – (ಕಿಲ್ಲೆ ಪ್ರತಿಷ್ಠಾನ – ಪುತ್ತೂರು)
* ಸಾಧಕ ಪ್ರಶಸ್ತಿ – (ಕರ್ನಾಟಕ ಸಂಘ ಮುಂಬೈ)
* ಸಾಹಿತ್ಯ ಪ್ರಶಸ್ತಿ – (ಶ್ರೀ ಕೃಷ್ಣ ಪ್ರತಿಷ್ಠಾನ – ಮುಂಬೈ)
* ನೇತಾಜಿ ಪುರಸ್ಕಾರ
* ವಾಸಿ ಕನ್ನಡ ಸಂಘ – ಸನ್ಮಾನ
* ತುಳುಕೂಟ ಕುವೈತ್ – ಸನ್ಮಾನ
ಹಾಗೂ ಇನ್ನಿತರ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ.
ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ 2012, ಸೂರತ್ : ಅಧ್ಯಕ್ಷತೆ ಗೌರವ.

ಡಾ| ಸುನಿತಾ ಶೆಟ್ಟಿಯವರು ಯುವ ಪೀಳಿಗೆಯ ಬರಹಗಳನ್ನು ಮೆಚ್ಚಿಕೊಳ್ಳುವುದರ ಮೂಲಕ ಪ್ರೋತಾಹ ನೀಡುತಿದ್ದಾರೆ.

ಸಮಾಜದಲ್ಲಿ ನಡೆಯುವ ಹೆಣ್ಣಿನ ಶೋಷಣೆ ವಿರುದ್ಧ ಧ್ವನಿ ಎತ್ತಿರುವ ಇನ್ನಿತರ ಲೇಖಕಿಯರ ಜೊತೆಗೆ ಕೈಜೋಡಿಸಿ ಸಮಾಜದಲ್ಲಿ ಅಸಹಿಷ್ಣುತೆ, ದುಷ್ಕೃತ್ಯಗಳಿಗೆ ಬಲಿಯಾಗುವವರ ಪರ ನಿಂತು ಹೋರಾಟ ಇಂದಿಗೂ ಮಾಡುತ್ತಿದ್ದಾರೆ.

ಸಾಹಿತ್ಯ ಲೋಕದ ಹಿರಿಯ ಅನುಭವಿ, ಸಮಾಜ ಸೇವಕಿ ಸಮಾಜದ ಸರ್ವರ ಪಾಲಿಗೆ ಪ್ರೀತಿ, ಗೌರವ ಅಭಿಮಾನದ ಜ್ಞಾನಭಂಡಾರದ ಅಮ್ಮನಾಗಿರುವ ಡಾ| ಸುನಿತಾ ಶೆಟ್ಟಿಯವರಿಗೆ “ಬಂಟ ವಿಭೂಷಣ ಪ್ರಶಸ್ತಿ” ಯನ್ನು ದುಬಾಯಿಯಲ್ಲಿ ಪ್ರಧಾನಿಸಲಾಗುವ ಈ ಶುಭ ಸಂದರ್ಭದಲ್ಲಿ ಸಮಸ್ಥ ಅನಿವಾಸಿ ಕನ್ನಡಿಗರು, ತುಳುವರ ಪರವಾಗಿ ಅಭಿನಂದನೆಗಳು.

ಬಿ. ಕೆ. ಗಣೇಶ್ ರೈ – ಯು.ಎ.ಇ.

Comments are closed.