ಕರಾವಳಿ

‘ಸಬ್‌ ಕೇ ಸಾಥ್‌ ಸಬ್‌ ಕೇ ವಿಕಾಸ್‌’ ಎನ್ನುವವರು ಕ್ರೈಸ್ತರಿಗೆ ಪಕ್ಷದ ಟಿಕೆಟ್ ನೀಡಿಲ್ಲ: ಐವನ್‌ ಡಿಸೋಜಾ

Pinterest LinkedIn Tumblr

ಕುಂದಾಪುರ: ಪ್ರದೇಶದಿಂದ ಪ್ರದೇಶಕ್ಕೆ ಭಾಷಣಗಳನ್ನು ಬದಲಾಯಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸ್ಥಳೀಯರು ನಾಯಕರು ಸಿದ್ದ ಪಡಿಸಿದ ಭಾಷಣಗಳನ್ನು ಮಂಡಿಸುವ ಕೆಲವನ್ನಷ್ಟೇ ಮಾಡುತ್ತಿದ್ದಾರೆ. ಅಭಿವೃದ್ಧಿಯ ಚಿಂತನೆ ಇಲ್ಲದ ಇವರ ಭಾಷಣಗಳಲ್ಲಿ ಯಾವುದೆ ಹುರುಳಿಲ್ಲ ಎಂದು ವಿಧಾನಪರಿಷತ್‌ ಮುಖ್ಯ ಸಚೇತನ ಐವನ್‌ ಡಿಸೋಜಾ ಆರೋಪಿಸಿದರು. ಇಲ್ಲಿನ ಖಾಸಗಿ ಹೋಟೇಲ್‌ನಲ್ಲಿ ಮಂಗಳವಾರ ಸಂಜೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಳೆದ 4 ವರ್ಷಗಳಲ್ಲಿ ಕೇಂದ್ರದಲ್ಲಿ ಅಧಿಕಾರ ನಡೆಸಿದ ಮೋದಿ ನೇತ್ರತ್ವದ ಅಭಿವೃದ್ಧಿ ಕಾರ್ಯಕ್ರಮಗಳು ಏನು ಎನ್ನುವುದನ್ನು ಜನರ ಮುಂದಿಡಲು ಹಿಂಜರಿಯುತ್ತಿದ್ದಾರೆ. ಯಾವುದೆ ನಿರ್ದಿಷ್ಟ ಅಜೆಂಡಾಗಳನ್ನು ಹೇಳದೆ. ಕೃತಕ ಆರೋಪಗಳನ್ನು ಮಾಡಿ ಜನರಿಗೆ ಭ್ರಮಾ ಲೋಕವನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಧಾನಿಯ ಸ್ಥಾನಕ್ಕೆ ಚ್ಯುತಿ ಬರುವಂತಹ ಶಬ್ದಗಳ ಬಳಕೆ ಮಾಡುತ್ತಿದ್ದಾರೆ. ಅವರ ಮಾತನಲ್ಲಿ ಬದ್ದತೆ ಕಾಣಿಸುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಸ್ಥಳೀಯ ನಾಯಕರೇ ಇಲ್ಲ. ಮೋದಿ ಹಾಗೂ ಶಾ ಅವರನ್ನು ಪರೋಕ್ಷವಾಗಿ ಒಪ್ಪಿಕೊಂಡಿರುವ ಸ್ಥಳೀಯರು ಅವರು ಹೇಳುವ ಸುಳ್ಳಿನ ಸರಮಾಲೆಯನ್ನೆ ವೇದವಾಕ್ಯವಾಗಿ ಪರಿಗಣಿಸುತ್ತಿದ್ದಾರೆ. ಜೈಲಿಗೆ ಹೋಗಿ ಬಂದಿರುವ ಬಿಎಸ್‌ವೈ ಅವರನ್ನು ಮುಖ್ಯಮಂತ್ರಿಯನ್ನಾಗಿ ಬಿಂಬಿಸುವುದರಿಂದ ಪಕ್ಷಕ್ಕೆ ಪ್ರಯೋಜವಿಲ್ಲ ಎಂದು ಚಿಂತನೆ ನಡೆಸಿದ ಮೋದಿ ಹಾಗೂ ಶಾ ಜೋಡಿ ಇದೀಗ ಬಳ್ಳಾರಿಯ ರೆಡ್ಡಿ ಬ್ರದರ್ಸ್‌ ಅವರನ್ನು ಅಪ್ಪಿಕೊಂಡಿದೆ ಎಂದು ಲೇವಡಿ ಮಾಡಿದರು.

ರಾಜ್ಯದ ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಕಾನೂನು ವ್ಯವಸ್ಥೆ ಸೇರಿದಂತೆ ಎಲ್ಲವೂ ಸರಿ ಇಲ್ಲ ಎನ್ನುವ ಅಪಾದನೆ ಮಾಡುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ ಇಷ್ಟು ದಿನ ಏನು ಮಾಡುತ್ತಾ ಇತ್ತು ಎನ್ನುವುದನ್ನು ಜನರಿಗೆ ತಿಳಿಸಬೇಕು. ಗೋ ಹತ್ಯೆ ನಿಷೇಧ ಕಾಯಿದೆ, ಕೋಮವಾದಿ ಸಂಘಟನೆಗಳ ನಿಷೇಧ ಸೇರಿದಂತೆ ಬಿಜೆಪಿ ಒತ್ತಾಯ ಮಾಡುತ್ತಿರುವ ಹಲವು ವಿಚಾರಗಳನ್ನು ಕೇಂದ್ರ ಸರ್ಕಾರ ಏಕ ಪಕ್ಷೀಯವಾಗಿ ಜಾರಿಗೆ ತರುವ ಅವಕಾಶಗಳಿದ್ದರೂ, ಮುಂದಾಗದೆ ಇರುವ ಕುರಿತು ಕಾರಣಗಳನ್ನು ದೇಶದ ಜನರ ಮುಂದಿಡಲಿ. ಸಮುದಾಯಗಳನ್ನು ಎತ್ತಿ ಕಟ್ಟಿ ಬೆಂಕಿ ಹಚ್ಚುವ ಕೆಲಸ ಕರಾವಳಿಯಲ್ಲಿ ಈ ಬಾರಿ ನಡೆಯುವುದಿಲ್ಲ. ರಾಜ್ಯದ ಜನಸಂಖ್ಯೆಯಲ್ಲಿ ಶೇ.17 ರಷ್ಟು ಇರುವ ಮುಸ್ಲಿಂ ಹಾಗೂ ಕ್ರೈಸ್ತರಿಗೆ ಒಂದೆ ಒಂದು ಸ್ಥಾನವನ್ನು ಕೊಡದ ಬಿಜೆಪಿ ‘ಸಬ್‌ ಕೇ ಸಾಥ್‌ ಸಬ್‌ ಕೇ ವಿಕಾಸ್‌’ ಎನ್ನುತ್ತಿದೆ. ಜೆಡಿಎಸ್‌ ಕೂಡ ಇದಕ್ಕೆ ಹೊರತಾಗಿಲ್ಲ ಪಕ್ಷದ ಹೆಸರಿನೊಂದಿಗೆ ಜಾತ್ಯಾತೀತ ಎನ್ನುವ ಈ ಪಕ್ಷ ಕ್ರೈಸ್ತರಿಗೆ ಒಂದೆ ಒಂದು ಸ್ಥಾನವನ್ನು ನೀಡಿಲ್ಲ ಎಂದರು.

ವಿನಾಯಕ ಬಾಳಿಗ ಹತ್ಯೆ ಪ್ರಕರಣದ ಸಮಗ್ರ ತನಿಖೆ ನಡೆಸಿ ಹತ್ಯೆಯ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಲು ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳಬೇಕು. ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಾಮಕ್ಕಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಮನೆಯ ಮೇಲೆ ದಾಳಿ ನಡೆದಿರುವುದು ಖಂಡನೀಯ. ಈ ರೀತಿಯ ದಬ್ಬಾಳಿಕೆಯ ಮನೋಭಾವ ಒಳ್ಳೆಯದಲ್ಲ. ಪೊಲೀಸ್‌ ಇಲಾಖೆ ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ ಅಪರಾಧಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ವೆರೋನಿಕಾ ಕರ್ನೋಲಿಯಾ, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ವೀಕ್ಷಕ ಪ್ರಸನ್ನಕುಮಾರ ಜೈನ್‌, ವಿನೋದ ಕ್ರಾಸ್ತಾ, ಜೇರಾಲ್ಡ್‌ ಕ್ರಾಸ್ತಾ, ಜೋನ್ಸ್‌ನ್‌ ಡಿ ಆಲ್ಮೇಡಾ ಇದ್ದರು.

Comments are closed.