ಕರಾವಳಿ

ದ.ಕ. : ಶೇ. 77.63 ಮತದಾನ : ಮತದಾನದ ಸಮಗ್ರ ಚಿತ್ರಣ ( ಮತದಾನ ಪ್ರಕ್ರಿಯೆಯ100ಕ್ಕೂ ಹೆಚ್ಚು ಚಿತ್ರಗಳ ಫೋಟೊ ಆಲ್ಬಂ)

Pinterest LinkedIn Tumblr

ಮಂಗಳೂರು, ಮೇ 12: ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಲ್ಲಿ ಮತದಾರರು ಮುಂಜಾನೆಯಿಂದಲೇ ಸರದಿ ಸಾಲಿನಲ್ಲಿ ನಿಂತು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1848 ಮತಗಟ್ಟೆಗಳಲ್ಲಿ ಬಿಗು ಭದ್ರತೆಯಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಜಿಲ್ಲೆಯಲ್ಲಿ ಶೇ. 77.63 ಮತದಾನವಾಗಿದೆ.

 ವಿಧಾನಸಭಾ ಕ್ಷೇತ್ರವಾರು ಶೇಕಡಾವಾರು ವಿವರ ಹೀಗಿದೆ:

ಬೆಳ್ತಂಗಡಿ 81.40, ಮೂಡಬಿದ್ರೆ 75.41, ಮಂಗಳೂರು ನಗರ ಉತ್ತರ 74.55, ಮಂಗಳೂರು ನಗರ ದಕ್ಷಿಣ 67.47, ಮಂಗಳೂರು 75.73, ಬಂಟ್ವಾಳ 81.89, ಪುತ್ತೂರು 81.70 ಹಾಗೂ ಸುಳ್ಯ 83.00.ಚುನಾವಣೆ ಘೋಷಣೆಯಾದಾಗಿನಿಂದ ಇಂದಿನವರೆಗೆ ಚುನಾವಣೆ ಶಾಂತಿಯುತ ಮತ್ತು ಸುಸೂತ್ರವಾಗಿ ನಡೆಯಲು ಸಹಕರಿಸಿದ ಎಲ್ಲಾ ಮತದಾರರಿಗೆ, ಅಭ್ಯರ್ಥಿಗಳಿಗೆ, ರಾಜಕೀಯ ಪಕ್ಷಗಳ ಮುಖಂಡರಿಗೆ, ಮಾಧ್ಯಮ ಮಿತ್ರರಿಗೆ, ಅಧಿಕಾರಿಗಳು, ಸಿಬ್ಬಂದಿಗೆ ಹಾಗೂ ಭದ್ರತಾ ಸಿಬ್ಬಂದಿಗೆ ಜಿಲ್ಲಾಡಳಿತದ ಪರವಾಗಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸೆಸಿಕಾಂತ್ ಸೆಂಥಿಲ್ ಕೃತಜ್ಞತೆ ಸಲ್ಲಿಸಿದ್ದಾರೆ.

ವಿಶೇಷ ನಿಯಂತ್ರಣ ಕೊಠಡಿ

ದ.ಕ.ಜಿಲ್ಲೆಯ ಸಮಗ್ರ ಮತದಾನದ ಪ್ರಕ್ರಿಯೆಗಳ ನೇರ ನಿಯಂತ್ರಣ ಕೊಠಡಿಯಲ್ಲಿ ದ.ಕ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತೆರೆಯಲಾಗಿದ್ದು, ಇಲ್ಲಿನ ನುರಿತ ಸಿಬ್ಬಂದಿಗಳು ಕ್ಷಣ ಕ್ಷಣದ ಶೇಕಡಾವಾರು ಮತದಾನದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಶನಿವಾರ ಬೆಳಗ್ಗೆಯೇ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಈ ಕೊಠಡಿಯನ್ನು ವೀಕ್ಷಿಸಿ ಸೂಕ್ತ ಮಾರ್ಗದರ್ಶನ ನೀಡಿದರು.

ದ.ಕ.ಜಿಲ್ಲೆಯ ಹಲವು ಮತಗಟ್ಟೆಗಳಲ್ಲಿ ಕೈ ಕೊಟ್ಟ ‘ಇವಿಎಂ’ ಮತಯಂತ್ರ

ದ.ಕ.ಜಿಲ್ಲೆಯ ವಿವಿಧ ಕಡೆ ‘ಇವಿಎಂ’ ಮತಯಂತ್ರ ಕೈಗೊಟ್ಟ ಬಗ್ಗೆ ವರದಿಯಾಗಿದ್ದು, ಇದರಿಂದ ಮತದಾನ ಪ್ರಕ್ರಿಯೆಯಲ್ಲಿ 10, 15 ನಿಮಿಷವಲ್ಲದೆ ಅರ್ಧ ಗಂಟೆಯವರೆಗೂ ವಿಳಂಬವಾಗಿದೆ. ಮೊದಲೇ ‘ಇವಿಎಂ’ ಮತಯಂತ್ರದ ಬಗ್ಗೆ ಅಸಮಾಧಾನದಿಂದಿದ್ದ ಮತದಾರರು ಕೆಲವು ಕಡೆ ಆಕ್ರೋಶಿತರಾಗಿ ಮತಗಟ್ಟೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿದೆ.

ನಗರದ ಕಪಿತಾನಿಯೋ ಶಾಲೆಯಲ್ಲಿ ‘ಇವಿಎಂ’ ಮತಯಂತ್ರ ಕೈಕೊಟ್ಟ ಕಾರಣ ಕೆಲಕಾಲ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಸರತಿ ಸಾಲಿನಲ್ಲಿ ನಿಂತ ಮತದಾರರು ಇದರಿಂದ ಆಕ್ರೋಶಿತರಾದರು. ವಿಷಯ ತಿಳಿದ ಶಾಸಕ ಜೆ.ಆರ್.ಲೋಬೊ ಸ್ಥಳಕ್ಕೆ ತೆರಳಿ ವಸ್ತುಸ್ಥಿತಿ ತಿಳಿದುಕೊಂಡರಲ್ಲದೆ, ಸಮಸ್ಯೆ ಬಾರದಂತೆ ನೋಡಿಕೊಳ್ಳುವಂತೆ ಮನವಿ ಮಾಡಿದರು.

ಬೆಂಗರೆಯ 3 ಮತಗಟ್ಟೆಗಳಲ್ಲೂ ಕೂಡ ‘ಇವಿಎಂ’ ಕೈ ಕೊಟ್ಟಿವೆ. ಇದರಿಂದ ಅಲ್ಲೂ ಕೂಡ ಮತದಾರರ ಅಸಮಾಧಾನಕ್ಕೆ ಅಧಿಕಾರಿಗಳು ತುತ್ತಾದರು. ಪಾವೂರು ಗ್ರಾಮದ ಮಲಾರ್ ಬದ್ರಿಯಾ ನಗರದಲ್ಲಿ ಕೂಡ ಒಂದು ಮತದಾರರ ಪಟ್ಟಿಯನ್ನು ವಿಭಾಗಿಸಿ ಪ್ರತ್ಯೇಕ ಮತದಾನ ಮಾಡಲು ವ್ಯವಸ್ಥೆ ಮಾಡಲಾಯಿತು. ಆದರೆ, ಈ ಬಗ್ಗೆ ಮಾಹಿತಿ ಇಲ್ಲದ ಮತದಾರರು ಯಾವ ಮತಗಟ್ಟೆಯ ಸರತಿ ಸಾಲಿನಲ್ಲಿ ನಿಲ್ಲಬೇಕು ಎಂದು ತಿಳಿಯದೆ ಗೊಂದಲಕ್ಕೀಡಾದರು. ಅಲ್ಲದೆ, ‘ಇವಿಎಂ’ ಯಂತ್ರವು ಚಾಲನೆಗೊಳ್ಳದ ಕಾರಣ 15 ನಿಮಿಷ ವಿಳಂಬವಾಯಿತು.

Comments are closed.