ಕರಾವಳಿ

ದ.ಕ.ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಮತ ಏಣಿಕೆ ಆರಂಭ : 58 ಅಭ್ಯರ್ಥಿಗಳ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ… ಮಧ್ಯಾಹ್ನದೊಳಗೆ ಪೂರ್ಣ ಫಲಿತಾಂಶ

Pinterest LinkedIn Tumblr

ಮಂಗಳೂರು, ಮೇ15: ಕರ್ನಾಟಕ ವಿಧಾನಸಭೆಗೆ ಶನಿವಾರ ನಡೆದ ಚುನಾವಣೆಯ ಮತ ಏಣಿಕೆ ಕಾರ್ಯ ಈಗಾಗಲೇ ರಾಜ್ಯಾದ್ಯಂತ ಆರಂಭಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳ ಮತ ಏಣಿಕೆ ಮಂಗಳೂರಿನ ಬೊಂದೆಲ್ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಮಹಾತ್ಮ ಗಾಂಧಿ ಶತಾಬ್ಧಿ ಹಿ.ಪ್ರಾ.ಶಾಲೆಯಲ್ಲಿ ಇಂದು ಮುಂಜಾನೆ ಎಂಟು ಗಂಟೆಗೆ ಆರಂಭಗೊಂಡಿದೆ.

ಭಾರೀ ಕುತೂಹಲಕ್ಕೆ ಕಾರಣವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಇಂದು ಮಧ್ಯಾಹ್ನದೊಳಗೆ ನಿರ್ಧರವಾಗಲಿದೆ. ಮಂಗಳೂರು ದಕ್ಷಿಣ, ಮಂಗಳೂರು ಉತ್ತರ (ಸುರತ್ಕಲ್ ಕ್ಷೇತ್ರ), ಮಂಗಳೂರು (ಉಳ್ಳಾಲ ಕ್ಷೇತ್ರ),ಪುತ್ತೂರು, ಬಂಟ್ವಾಳ, ಮೂಡುಬಿದಿರೆ, ಬೆಳ್ತಂಗಡಿ,ಸುಳ್ಯ ಒಟ್ಟು ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಕಣದಲ್ಲಿರುವ 58 ಅಭ್ಯರ್ಥಿಗಳ ಬಗ್ಗೆ ಮತದಾರರು ನೀಡಿರುವ ತೀರ್ಪು ಇಂದು ಮಧ್ಯಾಹ್ನದೊಳಗೆ ಹೊರ ಬೀಳಲಿದೆ.

ಸರ್ವ ಸಿದ್ದತೆ : ವ್ಯಾಪಕ ಬಂದೋ ಬಸ್ತ್ :

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ವ ಸಿದ್ದತೆಗಳನ್ನು ಮಾಡಲಾಗಿದ್ದು, ಜೊತೆಗೆ ಯಾವೂದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳ ಮತ ಏಣಿಕೆ ಕಾರ್ಯ ಮಂಗಳೂರಿನ ಬೊಂದೆಲ್ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಮಹಾತ್ಮ ಗಾಂಧಿ ಶತಾಬ್ಧಿ ಹಿ.ಪ್ರಾ.ಶಾಲೆಯಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ದ.ಕ.ಜಿಲಾದ್ಯಂತ ೧೪೪ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಆದೇಶಿಸಿದ್ದಾರೆ.

ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ವಿಜಯೋತ್ಸವ ಭಾಗ್ಯ ಇಲ್ಲದಂತಾಗಿದೆ. ಆದೇಶ ಮೀರಿ ವಿಜಯೋತ್ಸವ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.ಪೊಲೀಸ್‌, ಅರೆಸೇನಾ ಪಡೆ, ಕ್ಷಿಪ್ರ ಕಾರ್ಯಾಚರಣೆ ಪಡೆಯ ಸಿಬಂದಿಯ ತಂಡಗಳಿಂದ ಭದ್ರತಾ ಕೇಂದ್ರಕ್ಕೆ ಮೂರು ಹಂತದಲ್ಲಿ ಭದ್ರತೆ ಒದಗಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಎಲ್ಲ 1,858 ಮತಗಟ್ಟೆಗಳಿಂದ ವಿದ್ಯುನ್ಮಾನ ಮತಯಂತ್ರಗಳು ಹಾಗೂ ವಿವಿಪ್ಯಾಟ್‌ ಯಂತ್ರಗಳನ್ನು ಮಂಗಳೂರಿನ ಬೋಂದೆಲ್‌ ಮಹಾತ್ಮಾ ಗಾಂಧಿ ಶತಾಬ್ದ ಹಿರಿಯ ಪ್ರಾಥಮಿಕ ಶಾಲೆಯ ಸ್ಟ್ರಾಂಗ್‌ ರೂಂನಲ್ಲಿ ಇರಿಸಲಾಗಿದ್ದು, ಇಂದು ಬೆಳಿಗ್ಗೆ 14 ಕೊಠಡಿಗಳಲ್ಲಿ ಮತ ಎಣಿಕೆ ಆರಂಭಗೊಂಡಿದೆ. ಇದಕ್ಕಾಗಿ ಒಟ್ಟು 112 ಮೇಜುಗಳನ್ನು ಜೋಡಿಸಿಡಲಾಗಿದೆ. ಸುಮಾರು 600ಕ್ಕೂ ಅಧಿಕ ಅಧಿಕಾರಿಗಳು/ಸಿಬಂದಿಗಳು ಮತ ಎಣಿಕೆಯಲ್ಲಿ ಪಾಲ್ಗೊಂಡಿದ್ದಾರೆ. ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್‌ ಫೋನ್‌ಗಳ ಬಳಕೆಗೆ ಅವಕಾಶ ನಿರಾಕರಿಸಲಾಗಿದೆ.

ಮತ ಏಣಿಕೆ ಕೇಂದ್ರದ ಸುತ್ತಮುತ್ತ ಬಿಗಿ ಭದ್ರತೆ : ಕೇಂದ್ರ ಶಸ್ತ್ರ ಸಜ್ಜಿತ ಪೊಲೀಸ್ ಪಡೆ ನಿಯೋಜನೆ :

ಚುನಾವಣಾ ಆಯೋಗದ ನಿರ್ದೇಶನದಂತೆ ಮತ ಚಲಾಯಿಸಲಾದ ಇವಿಎಂ/ವಿವಿ ಪ್ಯಾಟ್‌ಗಳ ಮೊದಲಾದ ಚುನಾವಣಾ ದಾಖಲೆಗಳನ್ನು ಇಡಲಾದ ಭದ್ರತಾ ಕೊಠಡಿಗಳಿರುವ ಮತ ಎಣಿಕೆ ಕೇಂದ್ರದ ಆವರಣದ 100 ಮೀ ವ್ಯಾಪ್ತಿಯೊಳಗೆ ಮೂರು ಹಂತದಲ್ಲಿ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಅನಧಿಕೃತ ವ್ಯಕ್ತಿ, ವಾಹನಗಳು ಪ್ರವೇಶಿಸದಂತೆ ತಡೆ ಬೇಲಿಯನ್ನು ನಿರ್ಮಿಸಿ ಭದ್ರತಾ ವಲಯ ಸ್ಥಾಪಿಸಲಾಗಿದೆ. ಮತ ಎಣಿಕೆಯ ಪ್ರವೇಶ ದ್ವಾರದ ಬಳಿ ಗೇಟು ನಿರ್ಮಿಸಿ ಅದನ್ನು ಹಾದು ಹೋಗುವ ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಯಿಂದ ನಿಯೋಜಿತ ಅಧಿಕಾರಿ, ಸಿಬ್ಬಂದಿಯವರು ಹೊಂದಿರುವ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಪರಿಶೀಲಿಸಿ ಅನುಮತಿಸುವ ಬಗ್ಗೆ ಸ್ಥಳೀಯ ಪೊಲೀಸರನ್ನು ಕರ್ತವ್ಯದಲ್ಲಿರಿಸಲಾಗಿದೆ.

2ನೇ ಹಂತದ ಭದ್ರತೆ ಮತ ಎಣಿಕೆ ಆವರಣದ ಮದ್ಯದಲ್ಲಿ ಗೇಟು ನಿರ್ಮಿಸಿ ರಾಜ್ಯ ಶಸ್ತ್ರ ಸಜ್ಜಿತ ಪೊಲೀಸ್ ಪಡೆಗಳನ್ನು ಕರ್ತವ್ಯ ದಲ್ಲಿರಿಸಲಾಗಿದೆ. ಮತ ಎಣಿಕೆ ಕೇಂದ್ರವನ್ನು ಪ್ರವೇಶಿಸುವ ವ್ಯಕ್ತಿಗಳು ಬೆಂಕಿ ಪೆಟ್ಟಿಗೆ, ಶಸ್ತ್ರಾಸ್ತ್ರ ಸೇರಿದಂತೆ ಪ್ರತಿಬಂಧಕ ವಸ್ತುಗಳನ್ನು ಒಯ್ಯುವಂತಿಲ್ಲ. ಈ ಬಗ್ಗೆ ತಪಾಸಣೆಗೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್, ಐಪ್ಯಾಡ್, ಲ್ಯಾಪ್‌ಟಾಪ್ ಇತ್ಯಾದಿ ಇಲೆಕ್ಟ್ರಾನಿಕ್ ಉಪಕರಣ ಹಾಗೂ ಆಡಿಯೊ ವೀಡಿಯೊ ರೆಕಾರ್ಡ್‌ರ್‌ಗಳನ್ನು ನಿಷೇಧಿಸಲಾಗಿದೆ. 3ನೆ ಹಂತದ ಭದ್ರತೆಗಾಗಿ ಕೇಂದ್ರ ಶಸ್ತ್ರ ಸಜ್ಜಿತ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಮತ ಎಣಿಕೆ ಕೊಠಡಿಯನ್ನು ಪ್ರವೇಶಿಸುವ ಸಿಬ್ಬಂದಿ, ಎಣಿಕೆ ಏಜೆಂಟರನ್ನು ತಪಾಸಣೆ ನಡೆಸಿ ಯಾವುದೇ ಅನಧಿಕೃತ ಉಪಕರಣ ಕೊಂಡೊಯ್ಯದಂತೆ ತಪಾಸಣೆ ನಡೆಸಲಾಗುತ್ತಿದೆ.

ವಾಹನ ಸಂಚಾರದಲ್ಲಿ ಬದಲಾವಣೆ :

ಬೊಂದೇಲ್ ಎಂಜಿಸಿ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿರುವ ಮತ ಎಣಿಕೆ ಹಿನ್ನೆಲೆಯಲ್ಲಿ ವಾಹನ ಸಂಚಾರದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ಬೊಂದೇಲ್ ಜಂಕ್ಷನ್‌ನಿಂದ ಈಶ್ವರಕಟ್ಟೆ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ಸಂಚಾರ ಮತ್ತು ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಗರದಲ್ಲಿ ಎರಡು ಆರ್‌ಎಎಫ್ ತುಕಡಿ, 6 ಕೆಎಸ್‌ಆರ್‌ಪಿ, 6 ಸಿಎಆರ್ ಮತ್ತು 100 ಮೊಬೈಲ್ ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ.

_ಸತೀಶ್ ಕಾಪಿಕಾಡ್

Comments are closed.