ಕರಾವಳಿ

ಚರ್ಚ್ ಮೇಲೆ ದಾಳಿ ನಡೆದಿಲ್ಲ – ಸುಳ್ಳು ಸುದ್ದಿ ಹಬ್ಬಿಸಿದ್ದವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು: ಪೊಲೀಸ್ ಕಮಿಷನರ್

Pinterest LinkedIn Tumblr

ಮಂಗಳೂರು, ಮೇ.18: ದ.ಕ.ಜಿಲ್ಲೆಯಲ್ಲಿ ರ್ಚರ್ಚ್‌ಗೆ ದಾಳಿ ಆಗಿದೆ ಎಂದು ವಾಟ್ಸಪ್, ಫೇಸ್‌ಬುಕ್‌ ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ ದುಷ್ಕರ್ಮಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ನಡೆಸಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗುವಂತೆ ಕ್ರಮ ಜರುಗಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಫುಲ್ ಕುಮಾರ್ ಹೇಳಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ವರ್ಷಗಳ ಹಿಂದೆ ಚರ್ಚ್‌ಗಳ ಮೇಲೆ ದುಷ್ಕರ್ಮಿಗಳು ನಡೆಸಿದ ದಾಂಧಲೆಯ ಚಿತ್ರವನ್ನು ಮುಂದಿಟ್ಟುಕೊಂಡು ನಿನ್ನೆ ಮೊನ್ನೆ ನಡೆದಿದೆ ಎಂದು ಬಿಂಬಿಸಿ ಕೆಲವರು ವಾಟ್ಸ್‌ಆಯಪ್‌ನಲ್ಲಿ ಸುಳ್ಳು ಸಂದೇಶ ರವಾನೆ ಮಾಡಿರುದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಇಂತಹ ಸಂದೇಶ ರವಾನೆಯಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗಲಿದೆ. ಆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಚರ್ಚ್ ಮೇಲೆ ದಾಳಿಯಾಗಿರುವ ಯಾವೂದೇ ಘಟನೆಗಳು ನಡೆದಿಲ್ಲ. ಆದರೆ ಕೆಲವರು ಸಮಾಜದ ಸ್ವಾಸ್ಥ್ಯ ಕೆಡಿಸಲು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶ ರವಾನಿಸುತ್ತಿದ್ದಾರೆ. ಯಾರೋ ರವಾನಿಸಿದ್ದನ್ನು ಪರಾಮರ್ಶಿಸದೆ ಇತರರಿಗೆ ರವಾನೆ ಮಾಡಿದರೆ ಅಂತಹವರ ಮೇಲೂ ಕಾನೂನು ಕ್ರಮ ಕೈಗೊಳ್ಳುವ ಅವಕಾಶವಿದೆ. ಇತ್ತೀಚೆಗೆ ಮದ್ರಾಸ್ ಹೈಕೋರ್ಟ್ ಈ ಬಗ್ಗೆ ತೀರ್ಪನ್ನು ಕೂಡ ನೀಡಿದೆ. ಹಾಗಾಗಿ ವಾಟ್ಸ್‌ಆಯಪ್ ಮತ್ತಿತರ ಜಾಲತಾಣದಲ್ಲಿ ಸಂದೇಶ ರವಾನಿಸುವವರು ಎಚ್ಚರಿಕೆ ವಹಿಸಬೇಕು ಎಂದು ವಿಫುಲ್ ಕುಮಾರ್ ಸಲಹೆ ನೀಡಿದ್ದಾರೆ.

Comments are closed.