ಕರಾವಳಿ

ವಿಜಯೋತ್ಸವ ಮೆರವಣಿಗೆ ಮೇಲೆ ಕಲ್ಲು ತೂರಾಟ ಪ್ರಕರಣ : ಇತ್ತಂಡಗಳ ಎಂಟು ಮಂದಿ ಬಂಧನ

Pinterest LinkedIn Tumblr

ಮಂಗಳೂರು, ಮೇ 18: ಬಿಜೆಪಿ ವಿಜಯೋತ್ಸವದ ಸಂದರ್ಭದಲ್ಲಿ ಮಂಗಳೂರು ಹೊರವಲಯದ ಅಡ್ಯಾರ್ ಮಸೀದಿ ಬಳಿ ನಡೆದ ಗಲಭೆಗೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಫುಲ್ ಕುಮಾರ್ ತಿಳಿಸಿದರು.

ಬಂಧಿತ ಆರೋಪಿಗಳನ್ನು ದಾವೂದ್ ಯಾನೆ ದಾವೂದ್ ಹಕೀಂ, ಮುಹಮ್ಮದ್ ನೌಷಾದ್, ಶಾಹುಲ್ ಹಮೀದ್, ಮುಹಮ್ಮದ್ ಜುನೈದ್ ಹಾಗೂ ಹರೀಶ್ ಪೂಜಾರಿ, ನಿಶಾಂತ್, ನಿತೇಶ್, ಅಭಿಷೇಕ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಹೇಳಿದರು.

ಇದೇ ವೇಳೆ ಸುದ್ಧಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಯುಕ್ತರು ಮುಂದೆ ನಗರದಲ್ಲಿ ನಡೆಯುವ ಯಾವೂದೇ ವಿಜಯೋತ್ಸವ ಮೆರವಣಿಗೆಯಲ್ಲಿ ಬೈಕ್ ರ್‍ಯಾಲಿಗೆ ಅವಕಾಶವಿಲ್ಲ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಹನುಮಂತರಾಯ, ಡಿಸಿಪಿ ಉಮಾಪ್ರಶಾಂತ್ ಹಾಗೂ ಮತ್ತಿತರ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯೋತ್ಸವ ಮೆರವಣಿಗೆ ಮೇಲೆ ಕಲ್ಲು ತೂರಾಟ :

ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ದ.ಕ.ಜಿಲ್ಲೆಯಲ್ಲಿ ಬಿಜೆಪಿ ಎಂಟರಲ್ಲಿ ಏಳು ಕ್ಷೇತ್ರಗಳನ್ನು ಗೆದ್ದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ವಿಜಯೋತ್ಸವದ ಸಂದರ್ಭದಲ್ಲಿ ಮಂಗಳೂರು ಹೊರವಲಯದ ಅಡ್ಯಾರ್ ಬಳಿ ದುಷ್ಕರ್ಮಿಗಳು ವಿಜಯೋತ್ಸವ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದು, ಈ ಸಂದರ್ಭ ಸಮೀಪದ ದೇವಸ್ಥಾನಕ್ಕೂ ಹಾನಿಯಾದ ಬಗ್ಗೆ ದೂರು ದಾಖಲಾಗಿತ್ತು.

ಇದೇ ವೇಳೆ ಎರಡೂ ತಂಡಗಳ ಮಧ್ಯೆ ನಡೆದ ಗಲಾಭೆಯಿಂದ ಮಸೀದಿಯ ಕಿಟಕಿ ಗಾಜಿಗೆ ಕೂಡ ಹಾನಿಯಾದ ಬಗ್ಗೆ ದೂರು ನೀಡಲಾಗಿತ್ತು. ಗಲಾಭೆಯಲ್ಲಿ ಇತ್ತಂಡಗಳ ಸುಮಾರು 5 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು.

ಅಡ್ಯಾರ್ ಬಳಿ ಬಿಜೆಪಿ ವಿಜಯೋತ್ಸವದ ಮೇಲೆ ಕಲ್ಲು ತೂರಾಟ : ಹಲವರಿಗೆ ಗಾಯ :ನಿಷ್ಪಕ್ಷಪಾತ ತನಿಖೆಗೆ ಸಂಸದರ ಆಗ್ರಹ

Comments are closed.