ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವಿಶ್ವಾಸಮತಯಾಚಿಸದೇ ಸದನದಲ್ಲಿ ವಿದಾಯ ಭಾಷಣ ಮಾಡಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಘೋಷಿಸಿದ್ದಾರೆ.
.
ಸದನದಲ್ಲಿ ಸುದೀರ್ಘ ಭಾಷಣ ಮಾಡಿದ ಯಡಿಯೂರಪ್ಪ, ನಾನು ಜೀವನದ ಕಡೆಯ ಕ್ಷಣದ ವರೆಗೂ ರೈತರ ಪರವಾಗಿ ಕೆಲಸ ಮಾಡುತ್ತೇನೆ. ರೈತರಿಗೆ ನೀರು ಕೊಡಲು ನಮಗೆ ಸಾಧ್ಯವಾಗಿಲ್ಲ. ಸಂಕಷ್ಟದಲ್ಲಿ ಒದ್ದಾಡುತ್ತಿರುವ ಜನರಿಗೆ ನೆಮ್ಮದಿ ನೀಡಲು ಆಗಿಲ್ಲ ಎಂದರು.
ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಹಸಿವು ಮುಕ್ತ ಮಾಡಲಾಗಿಲ್ಲ. ರೈತರಿಗೆ ಕುಡಿಯುವ ನೀರು, ಬೆಳೆಗೆ ನೀರು, ಕೆರೆಕಟ್ಟೆ ತುಂಬಿಸಲು ಆಗಿಲ್ಲ. ಈ ನಾಡಿನ ಅನ್ನದಾತ ರೈತ ಸಮಸ್ಯೆಯಲ್ಲಿದ್ದಾನೆ. ರೈತರಿಗೆ ಬೆಂಬಲ ಬೆಲೆ ಇಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರಿಗಾಗಿ ನಾನು ಸರ್ವಸ್ವವನ್ನು ತ್ಯಾಗ ಮಾಡಲು ಸಿದ್ದ ಎಂದರು.
ಇದೇ ವೇಳೆ ಐದು ವರ್ಷಗಳ ಕಾಲ ಬಿಜೆಪಿ ನಡೆದು ಬಂದ ಹಾದಿಯನ್ನು ನೆನೆದ ಬಿಎಸ್ವೈ, ಜನಾದೇಶ ಕಾಂಗ್ರೆಸ್ – ಜೆಡಿಎಸ್ಗಿಲ್ಲ, ಬಿಜೆಪಿಗಿದೆ. ರಾಜ್ಯದ ಜನರು ಕಾಂಗ್ರೆಸ್, ಜೆಡಿಎಸ್ನ್ನು ತಿರಸ್ಕರಿಸಿರುವುದು ಇಡೀ ರಾಜ್ಯದ ಜನರಿಗೆ ತಿಳಿದಿದೆ ಎಂದು ವಾಗ್ದಾಳಿ ನಡೆಸಿದರು.
ಅಪ್ಪನ ಆಣೆ ಮಾಡಿಕೊಂಡ ಎಚ್ ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಕೈ ಜೋಡಿಸಿರುವುದಕ್ಕೆ ನನ್ನ ವಿರೋಧ ಇದೆ. ಕೇವಲ 40 ಸೀಟುಗಳನ್ನು ಹೊಂದಿದ್ದ ನಮ್ಮನ್ನು ಜನ ಏಕೈಕ ದೊಡ್ಡ ಪಕ್ಷವಾಗಿ ಆರಿಸಿದ್ದಾರೆ. ಕಾಂಗ್ರೆಸ್ ಪಕ್ಷ ಕಳೆದ ಚುನಾವಣೆಗಿಂತ ಅತ್ಯಂತ ಕಡಿಮೆ ಕ್ಷೇತ್ರಗಳಲ್ಲಿ ಗೆದ್ದಿದೆ. ಪ್ರತಿ ತಾಲೂಕು, ವಿಧಾನಸಭಾ ಕ್ಷೇತ್ರದಲ್ಲೂ ಪರಿವರ್ತನಾ ಯಾತ್ರೆ ಮಾಡಿದ್ದೆವು. ಎರಡು ವರ್ಷ ನಿರಂತರವಾಗಿ ಜನರ ಸಮಸ್ಯೆ ಅರಿತೆ. ಪರಿವರ್ತನಾ ಯಾತ್ರೆಯಲ್ಲಿ ಸಿಕ್ಕ ಜನಬೆಂಬಲ್ಲಕ್ಕೆ ನಾನು ಋಣಿ ಎಂದರು.
ವಿದಾಯ ಭಾಷಣದ ಬಳಿಕ ನೇರವಾಗಿ ರಾಜಭವನಕ್ಕೆ ತೆರಳಿದೆ ಬಿಎಸ್ ಯಡಿಯೂರಪ್ಪ, ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು.
ಮೇ 17ರಂದು ಮೂರನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಬಿ ಎಸ್ ಯಡಿಯೂರಪ್ಪ ಅವರು ಮೂರೇ ದಿನಕ್ಕೆ ರಾಜಿನಾಮೆ ನೀಡಿ ಹೊರ ನಡೆದಿದ್ದಾರೆ.
Comments are closed.