ಅಂತರಾಷ್ಟ್ರೀಯ

67ರ ಇಳಿವಯಸ್ಸಿನ ಜರ್ಮನ್ ಪ್ರಜೆಯಿಂದ ಪರಿಸರ ಜಾಗೃತಿಗಾಗಿ ಪ್ರಪಂಚ ಪರ್ಯಟನೆ!

Pinterest LinkedIn Tumblr

ಕುಂದಾಪುರ: ಪರಿಸರದ ಸೋಜಿಗ, ಪರಿಸರ ಉಳಿದರೆ ನಾವು ಎನ್ನುವ ಉದ್ದೇಶದಿಂದ 2017,ಜೂ.18 ರಂದು ಜರ್ಮನ್ ದೇಶದ ಮ್ಯೂನಿಕ್ ನಗರಿಂದ ಪಾದಯಾತ್ರೆ ಆರಂಭಿಸಿದ ಜರ್ಮನ್ ಪ್ರಜೆ ಕುನೋ ಪೆನ್ನೇರ್ ಕುಂದಾಪುರ ಸಂತೆ ಮಾರುಕಟ್ಟೆಯ ಸಮೀಪ ಮಾತಿಗೆ ಸಿಕ್ಕರು. ಇವರ ಪರಿಸರ ಪ್ರೇಮ ನಿಜಕ್ಕೂ ಎಲ್ಲರಿಗೂ ಮಾದರಿ. ಪರಿಸರ ನಮಗಾಗಿ ಎಲ್ಲವನ್ನೂ ಕೊಟ್ಟಿದೆ ನಾವು ಏನು ಕೊಟ್ಟಿದ್ದೇವೆ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಂಡರೆ ಉತ್ತರ ಸಿಗುತ್ತದೆ. ಆದರೆ ಆ ಪ್ರಯತ್ನ ಯಾರೂ ಮಾಡುತ್ತಿಲ್ಲ ಎನ್ನುವ ಬೇಸರ 67ರ ಇಳಿವಯಸ್ಸಿನ ಈ ಅಜ್ಜನದ್ದು.

ಜರ್ಮನ್ ದೇಶದ ಮ್ಯೂನಿಕ್ ನಗರದಲ್ಲಿ ಕಾರ್ಪೆಂಟರ್ ವೃತ್ತಿ ಮಾಡುವ ಕುನೋ ದುಡಿದಿದ್ದರಲ್ಲಿ ಪಾದಯಾತ್ರೆಗೆ ಒಂದಿಟ್ಟು ಎತ್ತಿಟ್ಟುಕುಂಡು ಅರಂಭಿಸಿದ್ದಾರೆ. ಪಾದಯಾತ್ರೆ ಅರಂಭಿಸಿ ಬರೋಬ್ಬರಿ ಹತ್ತಿರ ಹತ್ತಿರ ಒಂದು ವರ್ಷದ ಸರಿಹದ್ದಿಗೆ ಬಂದಿದೆ. ಈಗಾಗಲೇ ಹಲವಾರು ದೇಶ ಸುತ್ತಿದ್ದು, ಭಾರತೀಯರ ಸ್ನೇಹಪರತೆ, ಸಾಂಸ್ಕೃತಿಕ ವೈವಿಧ್ಯತೆ, ವಿವಿಧತೆಯಲ್ಲಿ ಏಕತೆ ಮತ್ತೆಲ್ಲೂ ಕಂಡಿಲ್ಲ ಎಂದು ಖುಷಿಯಿಂದಲೇ ಹೇಳುತ್ತಾರೆ. ನಿಜಕ್ಕೂ ಭಾರತಕ್ಕೊಂದು ಹ್ಯಾಟ್ಸ್ ಅಪ್ ಹೇಳಲೇಬೇಕು ಅಂತಾರೆ ಕುನೋ.

ಪಾದಯಾತ್ರೆ ಮೂಲಕ ದೇಶ ಪರ್ಯಟನೆ…
ಕುನೋ ಮದುವೆಯಾಗಿ ಇಬ್ಬರು ಮಕ್ಕಳಿದು, ಒಬ್ಬರೇ ಪಾದಯಾತ್ರೆ ಅರಂಭಿಸಿದ ಬಗ್ಗೆ ಕೇಳಿದರೆ, ಪ್ರಕೃತಿ ಸೊಬಗು ಆಸ್ವಾದಿಸಲು ಏಕಾಂತವಿರಬೇಕು. ಡಿರ್ಸ್ಟಬ್ ಆದರೆ ಗಮ್ಮತ್ತು ಸಿಗೋದಿಲ್ಲ. ಹಾಗಾಗೆ ಒಬ್ಬನೇ ಬಂದಿದ್ದೇನೆ. ಒಬ್ಬನೇ ಬಂದಿದ್ದೇನೆ, ಒಬ್ಬನೇ ಹೋಗುತ್ತೇನೆ ಮತ್ತೇಕೆ ಇನ್ನುಬ್ಬರು ಎನ್ನುತ್ತಾರೆ. ದೇಶ ಸಂಚಾರಕ್ಕೆ ವಾಹನ ಏಕೆ ಬಳಸಿಲ್ಲ ಎಂದರೆ ನಕ್ಕು ಹಿಂದೆ ಎಲ್ಲಿತ್ತು ವಾಹನ, ಮುಂದೆ ಇರುತ್ತಾ ಎನ್ನೋದು ಗ್ಯಾರೆಂಟಿಯಲ್ಲಿ. ನನ್ನ ಇಡೀ ಪಾದಯಾತ್ರೆಯಲ್ಲಿ ವಾಹನ ಬಳಸಿ ಪರಿಸರ ಹಾಳು ಮಾಡುವ ಮನಸ್ಸಿಲ್ಲದೆ ಪಾದಯಾತ್ರೆ ಅರಂಭಿಸಿದ್ದು, ಇಡೀ ಪರಿಸರ ಸಂಪತ್ತು ಕಣ್ಣುತುಂಬಿಕೊಂಡು ಧನ್ಯನಾಗುತ್ತೇನೆ. ಈ ಮರ, ಆ ಬಳ್ಳಿ, ಕಾಡು ಮೇಡು, ಬೆಟ್ಟು ಗುಡ್ಡ, ವನ್ಯಜೀವಿಗಳು ವಾಹನದಲ್ಲಿ ಬಂದು ವೀಕ್ಷಸುವುದಕ್ಕಿಂತ ಹೀಗೆ ವೀಕ್ಷಿಸಬೇಕು ಎನ್ನುತ್ತಾರೆ. ಒಟ್ಟಾರೆ ಜರ್ಮನ್ ದೇಶದ ಹಿರಿಯಜ್ಜನ ಪರಿಸರ ಪ್ರೇಮಕ್ಕೆ ತಲೆದೂಗಲೇ ಬೇಕು..

ದಿನಕ್ಕೆ 30 ಕಿ.ಮೀ ಪಯಣ..ತಿಂಗಳಿಗೆ 15 ಸಾವಿರ ಖರ್ಚು..!
ಕುನೋ ಪ್ರತಿದಿನ ಸರಾಸರಿ 30 ಕಿಮೀ ಸಂಚಾರ ಮಾಡುತ್ತಾರೆ. ಸಂಚಾರದ ದಾರಿ ನಡುವೆ ಹೋಟೆಲ್ ಸಿಕ್ಕರೆ ಅಲ್ಲೇ ಉಳಿದು ಬೆಳಗ್ಗೆ ಮತ್ತೆ ಪಾದಯಾತ್ರೆ ಮುಂದುವರಿಸುತ್ತಾರೆ. ಎಲ್ಲೂ ವಸತಿ ಗೃಹ ಸಿಗದಿದ್ದರೆ ತಮ್ಮ ಟ್ರಾವಲ್ ಕಿಟ್ ಬಿಚ್ಚಿ, ಟೆಂಟ್ ಹರಡಿ ರಾತ್ರಿ ಕಳೆಯುತ್ತಾರೆ. ತಿಂಗಳೊಂದಕ್ಕೆ ಬರೋಬ್ಬರಿ 15 ಸಾವಿರ ಖರ್ಚು ಮಾಡುತ್ತಾರೆ. ಎಲ್ಲಿ ಏನು ಸಿಗುತ್ತದೆ ಅದೇ ಊಟವಾಗುತ್ತದೆ. ಊಟಕ್ಕಾಗಿ ಇಂತಾದ್ದೇ ಬೇಕು ಎನ್ನುವ ನಿಯಮವಿಲ್ಲ.

ಪಾಕಿಸ್ತಾನ ಡೇಂಜರಸ್ ಕಂಟ್ರಿ!
ರೊಮೇನಿಯಾ ಬಲ್ಗೇರಿಯಾ, ಕ್ರೋಶಿಯಾ, ಟರ್ಕಿ, ಇರಾನ್ ಮೂಲಕ ಭಾರತಕ್ಕೆ ಬಂದಿದ್ದು, ಇಲ್ಲಿಂದ ಶ್ರೀಲಂಕಾ ತೆರಳಿ ಮತ್ತೆ ಭಾರತಕ್ಕೆ ಬಂದು ಇಲ್ಲಿಂದ ಮತ್ತೆ ಸಂಚಾರ ಮುಂದುವರಿಸುವ ಇವರು ಪಾಕಿಸ್ತಾನಕ್ಕೆ ಹೋಗೋದಿಲ್ಲ ಪಾಕಿಸ್ತಾನ ಡೇಂಜರಸ್ ಕಂಟ್ರಿ ಎನ್ನುತ್ತಾರೆ.

ಪ್ರಕೃತಿ ಸಂಪತ್ತು ವೀಕ್ಷಣೆಗಾಗಿ ಕಾಲುನಡಿಗೆ….
ದೇಶ ಪರ್ಯಟನೆ ವಾಹನದಲ್ಲಿ ಮಾಡಿದರೆ ನಾವು ಅಮೂಲ್ಯ ಪ್ರಕೃತಿ ಸಂಪತ್ತು ವೀಕ್ಷಣೆ ಮಾಡಲಾಗಲ್ಲ. ಕಾಲುನಡಿಗೆ ದೈಹಿಕ ಕ್ಷಮತೆ ಹೆಚ್ಚಿಸಿದರೆ, ಸಂಚಾರದಲ್ಲಿ ಎದುರಾಗುವ ರಮಣೀಯ ವೈವಿಧ್ಯಮಯ ಪ್ರಾಕೃತಿಕ ಕೊಡುಗೆ ಮುದನೀಡಿ, ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಆದಷ್ಟು ಕಾಲ್ನಡಿಗೆ ಅಭ್ಯಾಸ ಮಾಡಿಕೊಳ್ಳಿ. ಸಣ್ಣ ಪುಟ್ಟ ಕೆಲಸಕ್ಕೂ ವಾಹನಕ್ಕೆ ಅವಲಂಭಿಸದೇ ದೈಹಿಕ ಸಾಮರ್ಥ್ಯ ಬಳಸಿಕೊಳ್ಳಿ. ಅನಿವಾರ್ಯ ಸಂದರ್ಭದಲ್ಲಿ ವಾಹನ ಬಳಸಿ, ಇಂಧನ ಬಳಕೆ ಕಡಿಮೆ ಮಾಡದಿದ್ದರೆ ಮುಂದೆ ಶಕ್ತಿಯ ಮೂಲವೇ ಇಲ್ಲದಂತಾಗುತ್ತದೆ.
– ಕುನೋ ಪೆನ್ನೇರ್, ಹಿರಿಯ ನಾಗರಿಕ, ಜರ್ಮನ್.

(ವರದಿ- ಯೋಗೀಶ್ ಕುಂಭಾಸಿ)

Comments are closed.