ಕರಾವಳಿ

ಮಂಗಳೂರು ಜೈಲಿನಲ್ಲಿ ಕೈದಿಗಳ ಮಧ್ಯೆ ಮಾರಾಮಾರಿ : ಬಿಡಿಸಲು ಬಂದ ಪೊಲೀಸರ ಮೇಲೆ ಹಲ್ಲೆ

Pinterest LinkedIn Tumblr

ಮಂಗಳೂರು, ಮೇ 22: ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ನಿನ್ನೆ ತಡರಾತ್ರಿ ಇಬ್ಬರು ಕೈದಿಗಳು ಹೊಡೆದಾಡಿಕೊಂಡಿರುವ ಘಟನೆ ನಡೆದಿದ್ದು, ಬಿಡಿಸಲು ಬಂದ ಪೊಲೀಸರ ಮೇಲೆಯೇ ಆರೋಪಿಗಳು ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.

ನಗರದ ಕೊಡಿಯಾಲ್‌ಬೈಲಿನಲ್ಲಿರುವ ಸಬ್ ಜೈಲಿನಲ್ಲಿ ನಿನ್ನೆ ತಡರಾತ್ರಿ ಹಲವು ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಗಳಾಗಿರುವ ಜಲೀಲ್ ಮತ್ತು ಇಮ್ತಿಯಾಝ್ ಎಂಬವರ ನಡುವೆ ಈ ಹೊಡೆದಾಟ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಜೈಲು ಅಧೀಕ್ಷಕ ಪರಮೇಶ್ ಅವರ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ತಡರಾತ್ರಿ ಖೈದಿಗಳು ಜೋರಾಗಿ ಚೀರಾಟ ನಡೆಸುತ್ತಿದ್ದಾಗ ಅಲ್ಲಿಗೆ ಹೋಗಿ ವಿಚಾರಿಸಿದಾಗ ಖೈದಿಗಳು ಬಿಂದಿಗೆಯಿಂದ ಜೈಲು ಅಧೀಕ್ಷಕ ಪರಮೇಶ್ ಅವರ ತಲೆಗೆ ಹೊಡೆದು ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೇ ಮೂವರು ಪೊಲೀಸ್ ಸಿಬ್ಬಂದಿಗಳ ಮೇಲೆ ಕೂಡ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಕೈದಿಗಳಿಂದ ಏಟು ತಿಂದರೂ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಜೈಲು ಅಧೀಕ್ಷಕ ಪರಮೇಶ್ ಅವರು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಹೆಚ್ಚಿನ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Comments are closed.