ಮಂಗಳೂರು,ಮೇ 22 : ಶಿರಿಡಿಯಿಂದ ಆಗಮಿಸುತ್ತಿರುವ ಶ್ರೀ ಸಾಯಿಬಾಬಾರ ಪವಿತ್ರ ಪಾದುಕಾ ದರ್ಶನ ಕಾರ್ಯಕ್ರಮ ಮಂಗಳೂರು ನಗರದ ಉರ್ವ ಚಿಲಿಂಬಿಯ ಶ್ರೀ ಶಿರಿಡಿ ಸಾಯಿಬಾಬ ಮಂದಿರದಲ್ಲಿ ಮೇ 22ರಿಂದ 24ರವರೆಗೆ ನಡೆಯಲಿದೆ.ಸಾಯಿಬಾಬರವರು ಧರಿಸುತ್ತಿದ್ದ ಶ್ರೀ ಪಾದುಕೆಯನ್ನು ದರ್ಶನಾರ್ಥವಾಗಿ ಶಿರಿಡಿಯಿಂದ ತಂದು ಪೂಜಿಸುವ ಸುವರ್ಣಾವಕಾಶ ಚಿಲಿಂಬಿಯ ಸಾಯಿಬಾಬ ಮಂದಿರಕ್ಕೆ ಪ್ರಾಪ್ತವಾಗಿದೆ.
ಈ ಹಿನ್ನೆಲೆಯಲ್ಲಿ ಮೇ 22ರಂದು ಸಾಯಂಕಾಲ 4.30ಕ್ಕೆ ಶರವು ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ಶ್ರೀ ಸಾಯಿಬಾಬರ ಪವಿತ್ರ ಪಾದುಕೆಯನ್ನು ಸ್ವಾಗತಿಸಿ ಭವ್ಯ ಮೆರವಣಿಗೆ ಮೂಲಕ ಚಿಲಿಂಬಿಯ ಸಾಯಿಬಾಬ ಮಂದಿರಕ್ಕೆ ತರಲಾಯಿತು. ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಕೇಶವ ಮರೋಳಿ, ಲೀಲಾಕ್ಷ ಕರ್ಕೇರ, ರಣದೀಪ್ ಕಾಂಚನ್, ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಶೆಟ್ಟಿ ಬಿಜೈ, ಪ್ರತಾಪಚಂದ್ರ ಶೆಟ್ಟಿ, ಲಾವಣ್ಯ ವಿಶ್ವಾಸ್‍ಕುಮಾರ್, ಪಿ.ಬಿ.ಹರೀಶ್ ರೈ ಮುಂತಾದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮೇ 23ರಂದು ಬೆಳಗ್ಗೆ 8ಕ್ಕೆ ಶ್ರೀ ಸಾಯಿ ಪಾದುಕಾ ಪೂಜೆ ಬಳಿಕ ಪಾದುಕಾ ದರ್ಶನ ಆರಂಭವಾಗಲಿದೆ. ಬೆಳಗ್ಗೆ 10.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಕದ್ರಿ ಯೋಗಿಮಠದ ಶ್ರೀ ನಿರ್ಮಲ್‍ನಾಥ್ ಜೀ ಆಶೀರ್ವಚನ ನೀಡಲಿದ್ದಾರೆ.
ಸಂಸದ ನಳಿನ್‍ಕುಮಾರ್ ಕಟೀಲ್, ಮೇಯರ್ ಭಾಸ್ಕರ ಮೊಯ್ಲಿ, ಶಾಸಕರಾದ ವೇದವ್ಯಾಸ ಕಾಮತ್, ಯು.ಟಿ.ಖಾದರ್, ಮಾಜಿ ಶಾಸಕ ಜೆ.ಆರ್.ಲೋಬೊ, ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ದುಬೈಯ ಖ್ಯಾತ ಉದ್ಯಮಿ, ಹೆಸರಾಂತ ಗಾಯಕ, ಚಿತ್ರ ನಿರ್ಮಾಪಕ ಹರೀಶ್ ಶೇರಿಗಾರ್ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 12.30ರಿಂದ ಶ್ರೀ ಸಾಯಿ ಪಾದುಕಾ ದರ್ಶನ , ಅನ್ನ ಸಂತರ್ಪಣೆ ನಡೆಯಲಿದೆ. ಸಾಯಂಕಾಲ 4ರಿಂದ ಪಟ್ಲ ಸತೀಶ್ ಶೆಟ್ಟಿ ಮತ್ತು ಬಳಗದವರಿಂದ ಶ್ರೀ ಸಾಯಿ ಯಕ್ಷಾರಾಧನೆ ಕಾರ್ಯಕ್ರಮ ನಡೆಯಲಿದೆ. ಮೂಲ ಪಾದುಕಾ ದರ್ಶನ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಶಿರಿಡಿ ಸಾಯಿಬಾಬಾ ಮಂದಿರದ ಆಡಳಿತ ಮೊಕ್ತೇಸರ ವಿಶ್ವಾಸ್‍ಕುಮಾರ್ ದಾಸ್ ತಿಳಿಸಿದ್ದಾರೆ.
ಮೇ 24ರಂದು ಬೆಳಗ್ಗೆ 8ಕ್ಕೆ ಶ್ರೀ ಸಾಯಿ ಪಾದುಕಾ ಪೂಜೆ ಬಳಿಕ ಪಾದುಕಾ ದರ್ಶನ , ಮಧ್ಯಾಹ್ನ 12.30ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ. ಸಾಯಂಕಾಲ 4.30ರವರೆಗೆ ಪಾದುಕಾ ದರ್ಶನ ನಡೆಯಲಿದ್ದು, ಸಾಯಂಕಾಲ 6.30ಕ್ಕೆ ರಂಗಪೂಜೆ ಸಹಿತ ಮಹಾ ಪೂಜೆ ನಡೆಯಲಿದೆ.
Comments are closed.