ಕರಾವಳಿ

ದ.ಕ. ಜಿಲ್ಲೆಯಾದ್ಯಂತ ಯಾವುದೇ ನಿಪಾಹ್ ಪ್ರಕರಣ ಪತ್ತೆಯಾಗಿಲ್ಲ : ಆತಂಕ, ಭಯ ಪಡುವ ಅಗತ್ಯವಿಲ್ಲ

Pinterest LinkedIn Tumblr

ಮಂಗಳೂರು, ಮೇ 26 : ಕೇರಳದಲ್ಲಿ ನಿಪಾಹ್ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಅನುಮಾನದ ಮೇರೆಗೆ ಚಿಕಿತ್ಸೆಗಾಗಿ ಬಂದಿದ್ದ ಇಬ್ಬರ ಕಫದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ನೆಗೆಟಿವ್ ಆಗಿದ್ದು, ನಗರ ಸೇರಿದಂತೆ ದ.ಕ. ಜಿಲ್ಲೆಯಾದ್ಯಂತ ಯಾವುದೇ ನಿಪಾಹ್ ಪ್ರಕರಣ ಇಲ್ಲ. ಸಾರ್ವಜನಿಕರು ಈ ರೋಗದ ಬಗ್ಗೆ ವಿನಾ ಕಾರಣ ಆತಂಕ, ಭಯ ಪಡುವ ಅಗತ್ಯವಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಚಿಕಿತ್ಸೆಗಾಗಿ ಬಂದಿದ್ದ ಕಲ್ಲಿಕೋಟೆಯ ವೈದ್ಯಕೀಯ ಕಾಲೇಜಿನ ಸಿಬ್ಬಂದಿಯಾಗಿದ್ದ ಕಾರಣ ಅನುಮಾನದ ಮೇರೆಗೆ ಹಾಗೂ ಇನ್ನೊಬ್ಬ ರೋಗಿಯ ಕಫದ ಮಾದರಿಯನ್ನು ತಪಾಸಣೆಗಾಗಿ ಕಳುಹಿಸಲಾಗಿತ್ತು ಎಂದವರು ಸ್ಪಷ್ಟಪಡಿಸಿದರು. ಈ ರೋಗದ ಸೋಂಕು ಯಾವುದೇ ರೀತಿಯಲ್ಲಿ ಗಾಳಿಯಲ್ಲಿ ಹರಡುವುದಿಲ್ಲ. ಸೋಂಕು ಪೀಡಿತರ ಅತ್ಯಂತ ಸಾಮಿಪ್ಯದ ಸಂಪರ್ಕದಿಂದ ಮಾತ್ರವೇ ಈ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಇರುವುದರಿಂದ ಜನರು ವಿನಾ ಕಾರಣ ಆತಂಕ ಪಡೇಕಾಗಿಲ್ಲ ಎಂದು ಅವರು ಹೇಳಿದ್ದಾರೆ.

ಕೇರಳದ ಕಲ್ಲಿಕೋಟೆಯಲ್ಲಿ ಮಾತ್ರವೇ ಈ ರೋಗ ಪತ್ತೆಯಾಗಿದ್ದು, ಅಲ್ಲಿ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಂಕು ಪೀಡಿತರಿಗೆ ಪ್ರತ್ಯೇಕವಾಗಿಸಿ ಚಿಕಿತ್ಸೆ ನೀಡಲಾಗುತ್ತಿರುವುದರಿಂದ ಆ ರೋಗ ಮತ್ತೊಬ್ಬರಿಗೆ ಹರಡುವ ಪ್ರಮೇಯವೇ ಇಲ್ಲ. ಜಿಲ್ಲೆಯ ಜನತೆ ಯಾವುದೇ ಕಾರಣಕ್ಕೂ ಭಯ ಪಡುವ ಅಗತ್ಯವಿಲ್ಲ.

1999ರಲ್ಲಿ ಈ ರೋಗ ಮಲೇಶಿಯಾದಲ್ಲಿ ಪತ್ತೆಯಾಗಿತ್ತು. ಅಲ್ಲಿ ಇದು ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡಿತ್ತು. ಬಳಿಕ ಬಾಂಗ್ಲಾದೇಶದಲ್ಲಿ ಮಾನವರಿಂದ ಮಾನವರಿಗೆ ಹರಡಿದ ಪ್ರಕರಣ ಪತ್ತೆಯಾಗಿತ್ತು. ಆದರೆ ಈ ರೋಗದ ವೈರಸ್ ಎಚ್1ಎನ್1ನಂತೆ ಗಾಳಿಯಲ್ಲಿ ಹರಡುವುದಿಲ್ಲ. ಬಾವಿಯ ನೀರಿನಿಂದಲೂ ಹರಡುವುದಿಲ್ಲ. ಹಾಗಿದ್ದರೂ ಆರೋಗ್ಯ ಇಲಾಖೆಯು ಈಗಾಗಲೇ ಸೂಚನೆ ನೀಡಿದಂತೆ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಿಗೆ ಮುಂಜಾಗೃತಾ ಕ್ರಮ ವಹಿಸಲು ಸೂಚಿಸಲಾಗಿದೆ.

ಖರ್ಜೂರದ ರಸವನ್ನು ಕುಡಿಯಲು ಬಾವಲಿಗಳು ಮುಂದಾಗುವುದರಿಂದ ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಉಳಿದಂತೆ ಯಾವುದೇ ರೀತಿಯ ಹಣ್ಣು ಹಂಪಲುಗಳನ್ನು ಸ್ವಚ್ಛ ಮಾಡಿ ತಿನ್ನುವುದರಲ್ಲಿ ಅಪಾಯವಿಲ್ಲ. ಆದರೆ ಪ್ರಾಣಿ ಪಕ್ಷಿಗಳು ಸೇವಿಸಿರುವ ಫಲವಸ್ತುಗಳನ್ನು ತಿನ್ನಬಾರದು. ಜತೆಗೆ ಈ ರೋಗದ ಸೋಂಕು ಹಂದಿಯಂತಹ ಪ್ರಾಣಿಗಳಿಂದ ಹರಡುತ್ತವೆ. ಆದ್ದರಿಂದ ಈ ಪ್ರಾಣಿಗಳ ಜತೆ ಇದ್ದು ಕೆಲಸ ಮಾಡುವವರು ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಉಳಿದಂತೆ ಸಾರ್ವಜನಿಕರು ಆಹಾರ ಪದಾರ್ಥಗಳನ್ನು ಸೇವಿಸುವಾಗ ಸ್ವಚ್ಚತೆಗೆ ಗಮನ ನೀಡುವುದು ಆರೋಗ್ಯಕ್ಕೆ ಉತ್ತಮ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ.

ಗೋಷ್ಠಿಯಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಮಲೇರಿಯಾ ಅಧಿಕಾರಿ ಡಾ. ರಾಜೇಶ್ ಹಾಗೂ ಡಾ. ಸಿಕಂದರ್ ಪಾಶಾ ಉಪಸ್ಥಿತರಿದ್ದರು.

Comments are closed.