ಮಂಗಳೂರು, ಮೇ 28: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ವತಿಯಿಂದ ಶನಿವಾರ ಸಂಜೆ ನಗರದ ಹೊರವಲಯದ ಅಡ್ಯಾರ್ ಗಾರ್ಡನ್‌ನಲ್ಲಿ ನಡೆದ ಮೂರನೇ ವರ್ಷದ ‘ಯಕ್ಷಧ್ರುವ ಪಟ್ಲ ಸಂಭ್ರಮ – 2018’ ಕಾರ್ಯಕ್ರಮದಲ್ಲಿ ಯಕ್ಷಗಾನ ರಂಗಕ್ಕೆ ಮಹತ್ವದ ಕೊಡುಗೆ ನೀಡಿದ ಛಂದೋಬ್ರಹ್ಮ ಡಾ.ಶಿಮಂತೂರು ನಾರಾಯಣ ಶೆಟ್ಟಿಯವರಿಗೆ ಪಟ್ಲ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಶಿಮಂತೂರು ನಾರಾಯಣ ಶೆಟ್ಟಿಯವರು, ಪಟ್ಲ ಸತೀಶ್ ತನ್ನ ಪ್ರೀತಿಯ ಶಿಷ್ಯ. ಆತ ಮಾಡುತ್ತಿರುವ ಕೆಲಸ ಮಹತ್ವದ್ದು. ನನ್ನನ್ನು ಈ ವೇದಿಕೆಯಲ್ಲಿ ಗೌರವಿಸಿರುವುದು ಸಂತಸವನ್ನುಂಟು ಮಾಡಿದೆ. ಶಿಷ್ಯನ ಕೆಲಸಕ್ಕೆ ನಾನು ಸದಾ ಬೆಂಬಲ ನೀಡುತ್ತೇನೆ. ಈ ಕೆಲಸ ಆತನಿಂದ ಇನ್ನೂ ಹೆಚ್ಚು ನಡೆಯಲಿ ಎಂದು ತನಗೆ ನೀಡಿದ ಪಟ್ಲ ಪ್ರಶಸ್ತಿಯ ಅಂಗವಾದ ಒಂದು ಲಕ್ಷ ರೂ ನಗದಿಗೆ 1008 ರೂ ಸೇರಿಸಿ ಫೌಂಡೇಶನ್ನಿಗೆ ಆ ಹಣವನ್ನು ಗೌರವದಿಂದ ಕೊಡುಗೆಯಾಗಿ ನೀಡುವುದಾಗಿ ತಿಳಿಸಿ ತಮಗೆ ಲಭಿಸಿದ ಪ್ರಶಸ್ತಿ ಹಣವನ್ನು ಪಟ್ಲ ಫೌಂಡೇಶನ್ನಿಗೆ ಹಿಂತಿರುಗಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಅಹ್ವಾನಿತರಾಗಿ ಭಾಗವಹಿಸಿದ್ದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರು ದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಶೇಷ ಅಥಿತಿ ಕಟೀಲು ಶ್ರೀ ಕ್ಷೇತ್ರದ ಅನುವಂಶೀಯ ಅರ್ಚಕರಾದ ಲಕ್ಷ್ಮೀ ನಾರಾಯಣ ಅಸ್ರಣ್ಣ ರವರು ಶುಭ ಹಾರೈಸಿದರು. ಲ್‌ಕಾರ್ಗೋ ಸಮೂಹ ಸಂಸ್ಥೆಯ ಅಧ್ಯಕ್ಷ ಶಶಿಕಿರಣ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ನಟ ದರ್ಶನ್, ಯುವ ನಟ ಋಷಬ್ ಶೆಟ್ಟಿ ತಾರಾ ಮೆರುಗು :
ಖ್ಯಾತ ಚಲನ ಚಿತ್ರ ನಟ ದರ್ಶನ್, ಯುವ ನಟ ಋಷಬ್ ಶೆಟ್ಟಿ ಕಾರ್ಯಕ್ರಮಕ್ಕೆ ಆಗಮಿಸಿ ಪಟ್ಲ ಸಂಭ್ರಮಕ್ಕೆ ತಾರಾ ಮೆರುಗು ನೀಡಿದರು. ಈ ವೇಳೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದ ಚಲನ ಚಿತ್ರ ನಟ ದರ್ಶನ್ ಮಾತನಾಡಿ, ಕಲಾವಿದರು ಬಡವರಾದರೂ ಅವರಲ್ಲಿರುವ ಕಲೆಗೆ ಬಡತನವಿಲ್ಲ. ಬಡ ಕಲಾವಿದರನ್ನು ಗುರುತಿಸಿ ಗೌರವಿಸುವುದು, ಸಹಾಯ ಮಾಡುವುದು ಕಲಾಮಾತೆಗೆ ನೀಡುವ ಗೌರವಕ್ಕೆ ಸಮಾನ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟರ ತಂದೆ ಮಹಾಬಲ ಶೆಟ್ಟಿ ಅವರು ಮಾತನಾಡಿ, ಸ್ವತಃ ಕಲಾವಿದರಾಗಿದ್ದ ಕಾರಣ ಕಲಾವಿದರ ಕಷ್ಟದ ಬದುಕಿನ ಬಗ್ಗೆ ಅವರಿಗೆ ಅರಿವಿತ್ತು. ಹೀಗಾಗಿ, ಕಷ್ಟಗಳಿಗೆ ಕಿವಿಯಾಗಿ ಸ್ಪಂದಿಸುವ ಹೃದಯವಂತಿಕೆ ಮಗನಿಗೂ ಬಂದಿದೆ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದವರು ಆಶಿಸಿದರು.
12 ಜನ ಅಶಕ್ತ ಕಲಾವಿದರಿಗೆ ಗೌರವ ಧನ ಸಹಿತಾ ಗೌರವ ಪ್ರಶಸ್ತಿ:
ಸಮಾರಂಭದಲ್ಲಿ ಯಕ್ಷ ಧ್ರುವ ಕಲಾ ಗೌರವ ಪ್ರಶಸ್ತಿಯನ್ನು ಯಕ್ಷಗಾನದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಕುರಿಯ ಗಣಪತಿ ಶಾಸ್ತ್ರಿ, ಎಂ.ಕೆ. ರಮೇಶ್ ಆಚಾರ್ಯ, ಕುತ್ತೂಟ್ಟು ವಾಸು ಶೆಟ್ಟಿ, ಶೀಲಾ ಕೆ. ಶೆಟ್ಟಿ, ಆರ್ಗೋಡು ಮೋಹನ್‌ದಾಸ್ ಶೆಣೈ, ಆನಂದ ಶೆಟ್ಟಿ ಐರಬೈಲು, ಪಾರೆಕೋಡಿ ಗಣಪತಿ ಭಟ್, ಮಹಾಲಕ್ಷ್ಮೀ ಡಿ. ರಾವ್ ಅವರಿಗೆ ನೀಡಿ ಗೌರವಿಸಲಾಯಿತು.
ಕಲಾವಿದರ ಮಕ್ಕಳಿಗೆ ಹಾಗೂ ಅಶಕ್ತ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ:
ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಶಕ್ತ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಶೇ.90 ಮೇಲ್ಪಟ್ಟು ಅಂಕ ಗಳಿಸಿದ ವೃತ್ತಿಪರ ಕಲಾವಿದರ ಮಕ್ಕಳಿಗೆ ಬಂಗಾರ ಪದಕ, 10 ಕಲಾವಿದರಿಗೆ 50 ಸಾವಿರ ರೂ. ಗೌರವ ಧನ, ಈರ್ವರು ಕಲಾವಿದರಿಗೆ ಮರಣೋತ್ತರ ಪ್ರಶಸ್ತಿ ಜತೆಗೆ ಅವರ ಕುಟುಂಬಿಕ ರಿಗೆ 50 ಸಾವಿರ ರೂ. ಸಹಾಯ ಧನ, 8 ಮಂದಿ ಕಲಾವಿದರಿಗೆ ಗೃಹ ನಿರ್ಮಾಣಕ್ಕೆ 25 ಸಾವಿರ ರೂ., ಡಾ| ಶಿಮಂತೂರು ನಾರಾಯಣ ಶಟ್ಟಿ ಹಾಗೂ ಗಣೇಶ್ ಕೊಲೆಕಾಡಿ ವಿರಚಿತ ಯಕ್ಷಗಾನ ಪ್ರಸಂಗಗಳ ಸಂಪುಟ ಇದೇ ವೇಳೆ ಬಿಡುಗಡೆಗೊಂಡಿತು.
ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೆಶ್ ನಾಯ್ಕ್, ಮಾಜಿ ಶಾಸಕ ಮೊಯ್ದಿನ್ ಬಾವ ,ಉದ್ಯಮಿ ಶಶಿಧರ ಶೆಟ್ಟಿ,ಕೆ.ಎಂ.ಶೆಟ್ಟಿ,ವಿವಿಧ ಘಟಕದ ಅಧ್ಯಕ್ಷರು ಪದಾಧಿಕಾರಿಗಳಾದ ಅಜಿತ್ ಶೆಟ್ಟಿ ಗುಜರಾತ್, ಸಂತೋಷ್ ಶೆಟ್ಟಿ ಪೂನಾ, ಸರ್ವೋತ್ತಮ ಶೆಟ್ಟಿ ದುಬೈ, ರೋಹಿತ್ ಶೆಟ್ಟಿ ಪೂನಾ, ಶಂಕರ ಶೆಟ್ಟಿ ಗುಜರಾತ್, ರಘು ಎಲ್ ಶೆಟ್ಟಿ ಬಡಗ ಬೆಳ್ಳೂರು ,ಎಸ್.ಕೆ.ಪುಜಾರಿ ಮಸ್ಕತ್,ವಸಂತ ಶೆಟ್ಟಿ ಬೆಳ್ಳಾರೆ,ದಿನೇಶ್ ವೈದ್ಯ, ಪ್ರವಿಣ್ ಶೆಟ್ಟಿ ಪೂನಾ, ಜಗನ್ನಾಥ ಶೆಟ್ಟಿ ಬಾಳ ಮೊದಲಾದವರು ಉಪಸ್ಥಿತರಿದ್ದರು.
ಪಟ್ಲ ಫೌಂಡೇಶನ್ನಿನ ಅಧ್ಯಕ್ಷ ಪಟ್ಲ ಸತೀಶ್ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕದ್ರಿ ನವನೀತ ಶೆಟ್ಟಿ,ಭಾಸ್ಕರ ರೈ ಕುಕ್ಕುವಳ್ಳಿ ಸನ್ಮಾನ ಕಾರ್ಯಕ್ರಮ ನಿರೂಪಿಸಿದರು.
_ಸತೀಶ್ ಕಾಪಿಕಾಡ್ – ಮೊಬೈಲ್ ನಂಬ್ರ :9035089084
Comments are closed.